ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿನ ಚಾರಿತ್ರಿಕ ವಸ್ತುಗಳ ಸಂಗ್ರಾಹಾಲಯ ಮಂಜೂಷಾದ ನೂತನ ಕಟ್ಟಡದ ಉದ್ಘಾಟನೆಯನ್ನು ಅ. 24ರಂದು ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು.
ಶ್ರೀಕ್ಷೇತ್ರದಲ್ಲಿ ಕಳೆದ ಐದು ದಶಕಗಳಲ್ಲಿ ಮಂಜೂಷ ವಸ್ತು ಸಂಗ್ರಹಾಲಯ ಬೆಳೆದು ಬಂದಿದೆ. ಕ್ಷೇತ್ರಕ್ಕೆ ಬಂದ ಭಕ್ತರಿಗೆ ದೇವಾಲಯ ದರ್ಶನದ ಬಳಿಕ ಉಳಿದ ಸಮಯವನ್ನು ಸದುಪಯೋಗಪಡಿಸಲು ಸಹಕಾರಿಯಾಗಲಿ ಎಂದು ವಸ್ತುಸಂಗ್ರಹಾಲಯ ಹಾಗೂ ಇತರ ವ್ಯವಸ್ಥೆಗಳನ್ನು ರೂಪಿಸಲಾಗಿದೆ. ಪ್ರತಿ ವರ್ಷ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವಿಧ್ಯಾರ್ಥಿಗಳು ಇದನ್ನು ವೀಕ್ಷಿಸುತ್ತಾರೆ. ಇದು ಅವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದರು.
ಇದೀಗ ವಸ್ತುಸಂಗ್ರಹಾಲಯವನ್ನು ಅತ್ಯಂತ ಆಧುನಿಕವಾಗಿ ರಚಿಸಲಾಗಿದ್ದು ವಿಸ್ತೃತ ನೂತನ ಕಟ್ಟಡವನ್ನು 1,04,000 ಚದರಅಡಿಯ ವಿಸ್ತೀರ್ಣದ ಜಾಗದಲ್ಲಿ ನಿರ್ಮಿಸಿ ಇಲ್ಲಿ ಸಂಗ್ರಹಿಸಲಾಗಿರುವ ಯಾವುದೇ ವಸ್ತುಗಳಿಗೆ ಹಾನಿಯಾಗದಂತೆ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ, ಅತ್ಯಂತ ಹಳೆಯ ವಸ್ತುಗಳನ್ನು ಜಗತ್ತಿನ ಬೇರೆ ಬೇರೆ ಭಾಗಗಳಿಂದ ಸಂಗ್ರಹಿಸಲಾಗಿದ್ದು ಅದನ್ನು ಅತ್ಯಂತ ಸೂಕ್ಷವಾಗಿ ಇಲ್ಲಿ ಜೋಡಿಸಲಾಗಿದೆ. ಮೊದಲ ಮಹಾಯುದ್ದದಲ್ಲಿ ಬಳಸಲಾದ ಟೆಲಿಫೋನ್, ಮಾರ್ಕೋನಿ ಕಾಲದ ರೇಡಿಯೋ, ಮೂವೀ ಕ್ಯಾಮೆರಾ ಸೇರಿದಂತೆ ವಿಶ್ವದ ಎಲ್ಲಾ ಬ್ರಾಂಡ್ಗಳ ಐದು ನೂರಕ್ಕೂ ಅಧಿಕ ಕ್ಯಾಮರಾಗಳು, ವೈವಿಧ್ಯಮಯವಾದ ಪುರಾತನ ಮತ್ತು ಆಧುನಿಕ ಗಡಿಯಾರಗಳು, ಅಪರೂಪದ ಖನಿಜ ಶಿಲೆಗಳು, ವಿಶ್ವದ ಎಲ್ಲಾ ದೇಶಗಳ ನೋಟುಗಳು, ಹಸ್ತಪ್ರತಿಗಳು, ದೀಪಗಳು, ಸಂಗೀತ ವಾಧ್ಯಗಳು, ಹೀಗೆ ವೈವಿಧ್ಯಮಯವಾದ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ವಾರದ ಎಲ್ಲದಿನವೂ ಮಂಜೂಷ ವಸ್ತುಸಂಗ್ರಹಾಲಯ ತೆರೆದಿರುತ್ತದೆ. ವಸ್ತುಸಂಗ್ರಹಾಲಯದ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ ಎಂದರು.
ಮಹಾಮಸ್ತಕಾಭಿಷೇಕದ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ರಾಜ್ಯ ಸರಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಯವರು ತಿಳಿಸಿದ್ದಾರೆ. ಈಗಾಗಲೆ ಇಲಾಖೆಗಳಿಗೂ ಈ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ ಎಂದ ಅವರು ಧರ್ಮಸ್ಥಳದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಡಿ ಹರ್ಷೇಂದ್ರಕುಮಾರ್, ಸುರೇಂದ್ರಕುಮಾರ್ ಉಪಸ್ಥಿತರಿದ್ದರು.