ಸುಳ್ಯ: ಫೈರ್ ಬ್ರಾಂಡ್ ಹಿಂದೂ ಕಾರ್ಯಕರ್ತರ ಮಧ್ಯೆ ಬುಧವಾರ ಸಂಜೆ ಸುಬ್ರಹ್ಮಣ್ಯದಲ್ಲಿ ಮಾರಾಮಾರಿ ನಡೆದಿದ್ದು ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಹಿಂದೂ ಸಂಘಟನೆ ಪರ ಪ್ರಖರ ವಾಗ್ಮಿ ಚೈತ್ರಾ ಕುಂದಾಪುರ ತನ್ನ ಬೆಂಬಲಿಗರ ಜತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಪಂಜ ಮತ್ತು ತಂಡದ ಮಧ್ಯೆ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಟ, ಹಲ್ಲೆ ನಡೆದಿದೆ.
ಚೈತ್ರಾ ಕುಂದಾಪುರ ಹಾಗೂ ಆಕೆಯ ಬೆಂಬಲಿಗರ ವರ್ತನೆಯನ್ನು ಖಂಡಿಸಿ ತಡರಾತ್ರಿ ಸುಬ್ರಹ್ಮಣ್ಯದ ನಾಗರಿಕರು ಮೆರವಣಿಗೆ ನಡೆಸಿದರು. ಘಟನೆಯನ್ನು ಖಂಡಿಸಿ ಗುರುವಾರ ಸುಬ್ರಹ್ಮಣ್ಯ ಬಂದ್ಗೆ ಸಂಘಟನೆಗಳು ಕರೆ ನೀಡಿದ್ದು ಪರಿಸ್ಥಿತಿ ಬಿಗಡಾಯಿಸಿದೆ.
ಘಟನೆಯಲ್ಲಿ ಗುರುಪ್ರಸಾದ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೈತ್ರಾ ಕುಂದಾಪುರ ಸಹಿತ ಆಕೆಯ ಬೆಂಬಲಿಗರನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸುಬ್ರಹ್ಮಣ್ಯ ಮಠದ ಮಧ್ಯೆ ನಡೆಯುತ್ತಿರುವ ಸರ್ಪ ಸಂಸ್ಕಾರ ಸಂಬಂಧಪಟ್ಟ ವಿವಾಧಗಳೇ ಕಾರಣ ಎಂದು ಹೇಳಲಾಗಿದ್ದು ದೇವಸ್ಥಾನ ಮತ್ತು ಮಠದ ಪರವಾಗಿ ವಾದಿಸುತ್ತಿದ್ದ ತಂಡಗಳ ಮಧ್ಯೆ ನಡು ಬೀದಿಯಲ್ಲಿ ಮಾರಾಮಾರಿ ನಡೆದಿದೆ.
ಇತ್ತೀಚೆಗೆ ಸುಬ್ರಹ್ಮಣ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚೈತ್ರಾ ಕುಂದಾಪುರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರಮುಖ ಸೇವೆಯಾದ ಸರ್ಪಸಂಸ್ಕಾರ ವಿಧಿಯ ಕುರಿತು ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪರ ವಿರೋಧ ಚರ್ಚೆಗಳು ನಡೆದಿದ್ದವು. ಇದೇ ವಿಚಾರವಾಗಿ ಚರ್ಚೆಗಳು ತಾರಕಕ್ಕೇರಿದ ಪರಿಣಾಮ ಬುಧವಾರ ಚೈತ್ರಾ ಕುಂದಾಪುರ ಹಾಗೂ ಸುಳ್ಯ ತಾಲೂಕು ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಗುರುಪ್ರಸಾದ್ ಪಂಜ, ಆಶಿತ್ ಕಲ್ಲಾಜೆ ನಡುವೆ ದೂರವಾಣಿ ಮೂಲಕ ಪರಸ್ಪರ ಚರ್ಚೆ ನಡೆದಿತ್ತು. ಈ ವೇಳೆ ಚರ್ಚೆ ತೀವ್ರ ಮಟ್ಟಕ್ಕೆ ತಲುಪಿದ್ದು ಪರಸ್ಪರ ಸವಾಲು ಹಾಕುವ ಮಟ್ಟಿಗೆ ಮುಂದುವರೆದಿತ್ತು. ಆಕೆ ಆಶಿತ್ ಕಲ್ಲಾಜೆ ಹಾಗೂ ಗುರುಪ್ರಸಾದ್ ಬಳಿ ನೀವು ಎಲ್ಲಿದ್ದಿರಿ ತಾಕತ್ತು ಇದ್ದಲ್ಲಿ ನಾನಲ್ಲಿಗೆ ಬರುತ್ತೇನೆ ಎಂದು ಸವಾಲು ಹಾಕಿದ್ದಳು ಎನ್ನಲಾಗಿದೆ. ಅದರಂತೆ ಸವಾಲು ಸ್ವೀಕರಿಸಿದ ಯುವಕರಿಬ್ಬರು ಬನ್ನಿ ಎದುರೆದುರು ನಿಂತು ಮಾತನಾಡಿ ಗೊಂದಲ ಬಗೆ ಹರಿಸುವ ಎಂದಿದ್ದರು. ಸಂಜೆ ವೇಳೆಗೆ ಆಶಿತ್ಗೆ ಕರೆ ಮಾಡಿದ ಚೈತ್ರಾ ತಾನು ಬರುತ್ತಿದ್ದು ಈಗ ಪಂಜದಲ್ಲಿ ಇರುವುದಾಗಿ ಹೇಳಿ ಎಲ್ಲಿ ಸಿಗುತ್ತೀಯ ಎಂದಿದ್ದಳು. ಆಶಿತ್ ಸುಬ್ರಹ್ಮಣ್ಯ ಕಾಶಿಕಟ್ಟೆ ಬಳಿ ಇರುವುದಾಗಿ ಹೇಳಿದ್ದು ಅಲ್ಲಿಗೆ ಚೈತ್ರಾ ತನ್ನ ಬೆಂಬಲಿಗರ ಜತೆ ಬಂದಿದ್ದಾಳೆ.
ಕಾಶಿಕಟ್ಟೆ ಬಳಿ ಗುರುಪ್ರಸಾದ್, ಆಶಿತ್ ಸಹಿತ ಅವರ ಮಿತ್ರರು ಕಾದು ನಿಂತಿದ್ದ ವೇಳೆ ಇನ್ನೋವ ಕಾರಿನಲ್ಲಿ ಬೆಂಬಲಿಗರ ಜತೆ ಆಗಮಿಸಿದ ಚೈತ್ರಾ ಕುಂದಾಪುರ ಮೊದಲಿಗೆ ಕಾರಿನಿಂದ ಇಳಿದು ಆಶಿತ್ ಎಲ್ಲಿದ್ದಾನೆ ಎಂದು ಕೇಳಿದ್ದು ಆಗ ಆಶಿತ್ ಮತ್ತು ಗುರುಪ್ರಸಾದ್ ಆಕೆಯ ಬಳಿ ಬಂದು ಕರೆದಿದ್ದ ಕಾರಣದ ಕುರಿತು ಪ್ರಶ್ನಿಸಿದ್ದಾರೆ. ಈ ವೇಳೆ ಚೈತ್ರಾ ಹಾಗೂ ಆಶಿತ್ ಮತ್ತು ಗುರುಪ್ರಸಾದ್ ಮಧ್ಯೆ ಮಾತಿನ ಚಕಮಿಕಿ ನಡೆದಿದೆ. ಸ್ಥಳದಲ್ಲಿದ್ದ ಕೆಲವರು ಆಕೆ ವಿರುದ್ಧ ದಿಕ್ಕಾರ ಕೂಗಿದರು. ಈ ವೇಳೆ ಅಲ್ಲಿ ತಳ್ಳಾಟ ನೂಕಾಟ ನಡೆದಿದೆ. ಸಂಘರ್ಷ ಸೃಷ್ಠಿಯಾಗಿ ಎರಡೂ ಕಡೆಯವರ ಮಧ್ಯೆ ಹೊಡೆದಾಟ ನಡೆದಿದೆ. ಆ ವೇಳೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಜಮಾಯಿಸಿದ್ದ ಜನರನ್ನು ಲಘು ಲಾಠಿ ಪ್ರಹಾರದ ಮೂಲಕ ಚದುರಿಸಿದರು. ಬಳಿಕ ಚೈತ್ರಾ ಸಹಿತ ಆಕೆಯ ಏಳು ಮಂದಿ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದರು. ತಲೆಗೆ ಗಾಯಗೊಂಡ ಗುರುಪ್ರಸಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತಂತೆ ರಾತ್ರಿ ತನಕವೂ ಸುಬ್ರಹ್ಮಣ್ಯ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಘಟನೆಗೆ ಸಂಬಂಧಿಸಿ ಚೈತ್ರಾ ಕುಂದಾಪುರ ಸಹಿತ ಆಕೆಯ ಬೆಂಬಲಿಗರನ್ನು ವಶಕ್ಕೆ ಪಡೆಯಲಾಗಿದೆ. ಎರಡೂ ಕಡೆಯವರ ಹೇಳಿಕೆ ಪಡೆಯಲಾಗುತ್ತಿದ್ದು ಘಟನೆ ಕುರಿತು ಸತ್ಯಾಸತ್ಯತೆಯ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುಬ್ರಹ್ಮಣ್ಯ ಎಸ್ಐ ತಿಳಿಸಿದ್ದಾರೆ.
ಕುಮಾರಧಾರೆ-ಸುಬ್ರಹ್ಮಣ್ಯ ಮುಖ್ಯ ಪೇಟೆಯ ಬಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೆ ಈ ಘಟನೆ ಸಂಭವಿಸಿ ಗಂಭೀರ ಹಂತಕ್ಕೆ ತಲುಪಿದರೂ ಪೊಲೀಸರು ಸ್ಥಳಕ್ಕೆ ಆಗಮಿಸಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಜನರನ್ನು ಚದುರಿಸುವ ನೆಪದಲ್ಲಿ ರಸ್ತೆಯಲ್ಲಿ ತೆರಳುತ್ತಿದ್ದವರ ಮೇಲೂ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಸ್ತಳೀಯರು ದೂರಿದ್ದಾರೆ. ಘಟನೆಯನ್ನು ಖಂಡಿಸಿ ಸ್ಥಳಿಯ ಸಂಘಟನೆಗಳು ಗುರುವಾರ ಸುಬ್ರಹ್ಮಣ್ಯ ಬಂದ್ಗೆ ಕರೆ ನೀಡಿದ್ದಾರೆ.