ಸುಳ್ಯ: ಸುಬ್ರಹ್ಮಣ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ಉಂಟಾದ ಘರ್ಷಣೆಗೆ ಸಂಬಂಧಿಸಿ ಬಂಧಿತನಾದ ಸುಳ್ಯ ತಾಲೂಕು ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪಂಜನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘರ್ಷಣೆಯಲ್ಲಿ ಗಾಯಗೊಂಡು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುರುಪ್ರಸಾದ್‍ನನ್ನು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಪೊಲೀಸರು ಬಂಧಿಸಿ ಬುಧವಾರ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ.13ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಚೈತ್ರಾ ಕುಂದಾಪುರ ನೀಡಿದ ದೂರಿನ ಹಿನ್ನಲೆಯಲ್ಲಿ ಗುರುಪ್ರಾದ್ ಪಂಜ ಮತ್ತು ಇತರರ ಮೇಲೆ ಕೇಸು ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟು ಘಟನೆ ನಡೆದ ಮರುದಿನ ಬಂಧಿತರಾದ ಚೈತ್ರಾ ಕುಂದಾಪುರ ಮತ್ತು ಇತರ ಆರು ಮಂದಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಚೈತ್ರಾ ಕುಂದಾಪುರ ತಂಡ ಮತ್ತು ಗುರುಪ್ರಸಾದ್ ತಂಡಗಳ ಮಧ್ಯೆ ಅ.24 ರಂದು ಸಂಜೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಘರ್ಷಣೆ ನಡೆದಿತ್ತು. ಘಟನೆಗೆ ಸಂಬಂಧಪಟ್ಟು ಇತ್ತಂಡಗಳ ಕಾರ್ಯಕರ್ತರ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಿಸಲಾಗಿದೆ.