ಪುತ್ತೂರು: ಅಲ್ಲಿ ಜಾತಿ, ಮತ, ಧರ್ಮ ಎನ್ನದೇ ಒಟ್ಟಾಗಿ ಸೇರಿದ್ದರು. ಎಲ್ಲರೂ ತುಳು ಭಾಷೆ ಮಾತನಾಡುತ್ತಾ ಭಾವನಾತ್ಮಕ ಸಂಬಂಧ ಬೆಸುಗೆಯಲ್ಲಿ ಒಂದಾಗಿ ತಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಅರಿತುಕೊಂಡು, ಪ್ರಾಚೀನ ಕಾಲದ ತುಳುವ ಸೊಗಡನ್ನು ಮತ್ತೊಮ್ಮೆ ಮರುಕಳಿಸುವಂತೆ ಮಾಡಿದರು. ಉಡುಗೆ ತೊಡುಗೆ, ತಿಂಡಿ ತಿನಿಸು, ಪಾತೆರಕತೆ, ನಲಿಕೆ-ತೆಲಿಕೆ, ಕುಲ – ಕಸುಬು, ಜಾನಪದ ಕ್ರೀಡೆ ಹೀಗೆ ಒಟ್ಟಾಗಿ ತುಳುವ ಸಂಸ್ಕೃತಿಯನ್ನು ಪ್ರತಿನಿಧಿಸುವ ಎಲ್ಲ ಅಂಶವೂ ಅಲ್ಲಿ ಒಳಗೊಂಡಿತ್ತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸುದಾನ ವಸತಿಯುತ ಶಾಲೆಯ ಮೈದಾನದ ಅಗಸ್ಟಸ್ ಮ್ಯಾನರ್ ದೊಂಪದ ಸಹಕಾರ ರತ್ನ ಡಾ. ರಾಜೇಂದ್ರ ಕುಮಾರ್ ಚಾವಡಿಯಲ್ಲಿ ನ. 3ರಂದು ನಡೆದ ಒಂದು ದಿನದ ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನ `ತುಳು ಪರ್ಬ -2018′ ಕಾರ್ಯಕ್ರಮದ ಒಟ್ಟು ಅಂಶಗಳಿವು. ಬೆಳಿಗ್ಗೆ ದಿಬ್ಬಣ ಮೆರವಣಿಗೆ, ಧ್ವಜಾರೋಹಣ, ವಿವಿಧ ಉದ್ಘಾಟನೆಗಳ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ತುಳುನಾಡಿನವರು ಎಲ್ಲಿಯೂ ಸಲ್ಲುವವರು – ಮಠಂದೂರು: ಸಭಾ ಕಾರ್ಯಕ್ರಮವನ್ನು ಸ್ವಾಮೀಜಿಯವರ ಮುಖಾಂತರ ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ `ತುಳುನಾಡು ಎಂಬುದು ಸಂಸ್ಕೃತಿ ಮತ್ತು ಕಾರಣಿಕತೆಯ ತವರೂರು. ದೈವಾರಾಧನೆ ವ್ಯಕ್ತಪಡಿಸುವ ಆದಿವಾಸಿ ಸಂಸ್ಕೃತಿ, ಬೇಸಾಯದ ಕೃಷಿ ಸಂಸ್ಕೃತಿ ಮತ್ತು ಸ್ವಾಮೀಜಿಯವರ ಋಷಿ ಸಂಸ್ಕೃತಿಯನ್ನು ಬಿಂಬಿಸುವ ನಾಡು ಇದು ಎಂದ ಅವರು ತುಳುನಾಡಿನವರು ಎಲ್ಲಿಯೂ ಸಲ್ಲುವವರು. ಯಾರಿಗೂ ಸಲ್ಲುವವರು. ಹಾಗಾಗಿ ಈ ನಾಡಿನ ಸಂಸ್ಕೃತಿ ಮತ್ತೊಮ್ಮೆ ಜಗತ್ತು ಬೆಳಗಿಸುವಂತಾಗಲಿ’ ಎಂದು ಹೇಳಿದರು.
ಭಾಷೆ ಸಂಸ್ಕೃತಿ ಒರಿಪುನಲ್ಪ ಊರು ಒರಿವುಂಡು – ಒಡಿಯೂರು ಶ್ರೀ: ಒಡಿಯೂರು ಶ್ರೀ ಗುರುದೇವಾನಂದ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿ `ಭಾಷೆ ಸಂಸ್ಕೃತಿ ಉಳಿಯುವಲ್ಲಿ ಊರು ಕೂಡಾ ಉಳಿಯುತ್ತದೆ. ಇಂಗ್ಲೀಷ್ನ ಹುಚ್ಚು ಬೇಕು. ಆದರೆ ತುಳುನಾಡಿನ ಸಂಸ್ಕೃತಿಯನ್ನು ಕೊಟ್ಟ ನಮ್ಮ ತಾಯಿ ಭಾಷೆಯಾದ ತುಳುವನ್ನು ಯಾರೂ ಮರೆಯುವುದು ಬೇಡ’ ಎಂದರು.
ಪುತ್ತೂರಿನ ಮಣ್ಣನ್ನು ಉಳಿಸುವ ಕಾರ್ಯ ಮಾಡಬೇಕಾಗಿದೆ – ವಿವೇಕ ರೈ: ಸಮ್ಮೇಳನಾಧ್ಯಕ್ಷ ಡಾ| ಬಿ.ಎ. ವಿವೇಕ ರೈರವರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ತುಳುನಾಡಿನ ಚರಿತ್ರೆ, ನಡೆದು ಬಂದ ಹಾದಿಯನ್ನು ಪ್ರಸ್ತುತಪಡಿಸಿ ಇಲ್ಲಿನ ಸಂಸ್ಕೃತಿ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಮಾಡಬೇಕಾದ ಕಾರ್ಯಗಳನ್ನು ತಿಳಿಸಿದರು.
ತುಳುವ ಸಂಸ್ಕೃತಿ ಅರಳೊಡು, ತಿಗರೊಡು – ಶಕುಂತಳಾ ಶೆಟ್ಟಿ: ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ `1969 ರಲ್ಲಿ ತುಳುಕೂಟ ಸ್ಥಾಪನೆಯಾಗಿ 1978 ರಲ್ಲಿ ತುಳು ಸಿನೆಮಾಗಳು ಆರಂಭವಾದವು. ತುಳು ಭಾಷೆ ಇನ್ನಷ್ಟು ಬೆಳವಣಿಗೆ ಹೊಂದಿದೆ ಎನ್ನಲು ಈಗ ವಾರಕ್ಕೆ 3 ರ ಹಾಗೇ ಸಿನೆಮಾಗಳು ನಡೆಯುತ್ತಿರುವುದು ಸಾಕ್ಷಿಯಾಗಿದೆ. ಕಲ್ಯಾಣಪುರದಿಂದ ಚಂದ್ರಗಿರಿ, ಪಡ್ಡಿಯಿ ಕಡಲಿನಿಂದ ಮೂಡಾಯಿ ಘಟ್ಟದವರೆಗೆ ವ್ಯಾಪಿಸಿರುವ ತುಳುನಾಡು ಇನ್ನಷ್ಟು ಅಗಲವಾಗಿ ವಿಸ್ತಾರಗೊಳ್ಳಲಿ. ವಿಶ್ವವ್ಯಾಪಿಯಲ್ಲಿರುವ ತುಳುವರ ಸಂಸ್ಕøತಿ `ಅರಳೊಂದು, ತಿಗರೊಂದು, ಸಂಸ್ಕøತಿನ್ ಒರಿತೊಂದು ಬರಡ್’ ಎಂದು ಹೇಳಿ ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿದರು.