ಮೂಡುಬಿದಿರೆ: ಹಲವಾರು ನಕಲಿ ಫೇಸ್ಬುಕ್ ಖಾತೆಗಳಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವಂತಹ ಸಂದೇಶಗಳನ್ನು ಹಾಕುತ್ತಿದ್ದ ಮತ್ತು ಉದ್ಯಮಿಯೋರ್ವರಿಗೆ ಕೊಲೆ ಬೆದರಿಕೆ ಒಡ್ಡಿರುವ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಇದೀಗ ನಾಲ್ಕು ತಿಂಗಳ ನಂತರ ಬಂಧಿಸಿದ್ದಾರೆ.
ಸುಳ್ಯ ತಾಲೂಕಿನ ಬೆಳ್ಳಾರೆಯ ನಿವಾಸಿ ಇಬ್ರಾಹಿಂ ಖಲೀಲ್ ಬಂಧಿಸಲ್ಪಟ್ಟ ಆರೋಪಿ. ಈತ ದುಬೈನ ಅಬುದಾಬಿಯಲ್ಲಿ ಉದ್ಯೋಗದಲ್ಲಿದ್ದು, ಆ ಸಂದರ್ಭದಲ್ಲಿ ಫೇಸ್ಬುಕ್ನಲ್ಲಿ ಹಲವು ನಕಲಿ ಖಾತೆಗಳನ್ನು ತೆರೆದು ಕೋಮು ಸಂಘರ್ಷ ಸಹಿತ ನಿಂದನೆಗಳ ಸಂದೇಶವನ್ನು ಹಾಕುತ್ತಿದ್ದ. ಈ ವಿಚಾರವನ್ನು ಇಲ್ಲಿನ ಕೆಲ ಇಸ್ಲಾಂ ಧರ್ಮೀಯರೇ ಪತ್ತೆ ಹಚ್ಚಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿನ ವ್ಯಾಪಾರಿ ಅಬ್ದುಲ್ ಲತೀಫ್ ಎನ್ನುವವರನ್ನು ಖಲೀಲ್ ಟಾರ್ಗೆಟ್ ಮಾಡಿ ಅವರಿಗೆ ಕೊಲೆ ಬೆದರಿಕೆಯೊಡ್ಡಿದ್ದ.
ಈ ಬಗ್ಗೆ ಜುಲೈ 25ರಂದು ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತ ವಿದೇಶದಲ್ಲಿದ್ದುದರಿಂದ ಪೊಲೀಸರಿಗೆ ಕ್ರಮಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಆರೋಪಿ ಖಲೀಲ್ ರಜೆಯ ನಿಮಿತ್ತ ಅಕ್ಟೋಬರ್ 31ರಂದು ಊರಿಗೆ ಮರಳಿದ್ದು, ಮೂಡುಬಿದಿರೆ ಪೊಲೀಸರ ತಂಡವು ಸುಳ್ಯದ ಆತನ ಮನೆಗೆ ತೆರಳಿ ಬಂಧಿಸಿ ಠಾಣೆಗೆ ತಂದಿದ್ದಾರೆ.
ಪೊಲೀಸರು ಖಲೀಲ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ವಿಧಿಸಿದೆ.