ಸುಳ್ಯ: ಸುಳ್ಯ ನಗರದಲ್ಲಿ ಬೀದಿ ನಾಯಿಗಳ ಕಾಟ ಮಿತಿಮೀರಿದ್ದು ಇವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಸುಳ್ಯ ನಗರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದ್ದಾರೆ.
ನಗರ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾಧವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಬೀದಿನಾಯಿಗಳ ಉಪಟಳದಿಂದ ಜನರಿಗೆ ತೊಂದರೆ ಉಂಟಾಗುತಿದೆ. ಕಾನೂನು ರೀತಿಯ ಕ್ರಮಗಳ ಮೂಲಕ ಬೀದಿ ನಾಯಿಗಳ ಕಾಟವನ್ನು ನಿಯಂತ್ರಿಸಬೇಕೆಂದು ಸದಸ್ಯರಾದ ಕೆ.ಎಂ.ಮುಸ್ತಫಾ, ಗೋಪಾಲ ನಡುಬೈಲು, ಪ್ರಕಾಶ್ ಹೆಗ್ಡೆ ಮತ್ತಿತರು ಆಗ್ರಹಿಸಿದರು.
ಸುಳ್ಯ ನಗರ ಪಂಚಾಯಿತಿಗೆ ಸಂಬಂಧಿಸಿದ ಮಹಾ ಯೋಜನೆಯ ನಕಾಶೆ ಮತ್ತು ವರದಿ ಸಿದ್ಧಗೊಳಿಸಲಾಗಿದ್ದು ಇದನ್ನು ಕಾರ್ಯಗತಗೊಳಿಸಲು ಅನುಮೋದನೆ ಕೊಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಜನರಿಗೆ ತೊಂದರೆ ಆಗದಂತೆ ಯಾವುದೇ ಯೋಜನೆಗಳು ಅನುಷ್ಠಾನಗೊಳ್ಳಬೇಕಾಗಿದೆ. ಈಗಾಗಲೇ ಸೂಡಾ ನಿಯಮಗಳಿಂದ ಜನರಿಗೆ ತೊಂದರೆ ಉಂಟಾಗಿದೆ ಎಂದು ಸದಸ್ಯರಾದ ಎನ್.ಎ.ರಾಮಚಂದ್ರ, ಕೆ.ಎಂ.ಮುಸ್ತಫಾ ಹೇಳಿದರು.
ಈ ಕುರಿತು ಚರ್ಚೆ ನಡೆದು ಮಹಾಯೋಜನೆ ಅನುಮತಿ ಕುರಿತು ಮುಂದಿನ ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಯಿತು. ಕಾನತ್ತಿಲ ಬೈಲಿನಲ್ಲಿ ಮತ್ತು ಇತರ ಕಡೆಗಳಲ್ಲಿ ನಗರದ ಕೊಳಚೆ ನೀರು ಹರಿದು ನದಿ ಸೇರುತಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತಿದೆ. ಇದರ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ನಗರದಲ್ಲಿ ಒಳಚರಂಡಿ ನಿರ್ಮಿಸಲಾಗಿದ್ದರೂ ಅಸಮರ್ಪಕ ಅನುಷ್ಠಾನದಿಂದ ಅದು ವ್ಯರ್ಥವಾಗಿದ್ದು ತ್ಯಾಜ್ಯ ನೀರು ಒಳಚರಂಡಿಯಲ್ಲಿ ಹರಿಯದೆ ಹೊರ ಚರಂಡಿಯಲ್ಲಿ ಹರಿದು ಹೊಳೆ ಸೇರುತಿದೆ ಎಂದರು. ಈ ಕುರಿತು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ತಿಳಿಸಿದರು. ನಗರದ ಚರಂಡಿಗಳ ದುರಸ್ಥಿಯನ್ನು ಕೂಡಲೇ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು.