ಪುತ್ತೂರು: ಪುತ್ತೂರಿನ ಬೆಳ್ಳಿಪ್ಪಾಡಿ ಗ್ರಾಮದ ಕಠಾರ ಎಂಬಲ್ಲಿನ ಕುಮಾರಧಾರ ಹೊಳೆಗೆ ಸ್ನಾನಕ್ಕೆಂದು ಹೋದ ನಾಲ್ವರು ಯುವಕರ ಪೈಕಿ ಕೂರ್ನಡ್ಕ ನಿವಾಸಿಯೋರ್ವರು ಕಣ್ಮರೆಯಾಗಿರುವ ಕುರಿತು ನ.18ರ ಸಂಜೆ ನಡೆದ ಬಗ್ಗೆ ವರದಿಯಾಗಿದೆ.
ಪುತ್ತೂರಿನ ಕೂರ್ನಡ್ಕ ನಿವಾಸಿ ಪುತ್ತೂರು ಕೆ.ಎಸ್.ಆರ್.ಟಿ.ಸಿ ಕಮರ್ಷಿಯಲ್ ಕಾಂಪ್ಲೆಕ್ಸ್ ವಯರಿಂಗ್ ನಿರ್ವಹಣೆ ಮಾಡುತ್ತಿರುವ ಸೈಫಲಿಖಾನ್(25ವ) ಕಣ್ಮರೆಯಾದ ಯುವಕ. ಮೂಲತಃ ಕಾವಲುಕಟ್ಟೆಯವರಾಗಿದ್ದು ಕೂರ್ನಡ್ಕದದಲ್ಲಿ ವಾಸ್ತವ್ಯ ಇದ್ದ ದಿ.ಮೊಹಮ್ಮದ್ ಸಾಬ್ ಮತ್ತು ಷರೀಮಾಂಬಿ ದಂಪತಿ ಏಕೈಕ ಪುತ್ರ ಸೈಫಲಿಖಾನ್.
ಭಾನುವಾರ ಸಂಜೆ ಸೈಫಲಿಖಾನ್ ತನ್ನ ಸ್ನೇಹಿತರಾದ ಕೂರ್ನಡ್ಕ ನಿವಾಸಿ ಮಹಮ್ಮದ್ ರಫೀಕ್, ಮರೀಲ್ ನಿವಾಸಿ ಮಹಮ್ಮದ್ ಆಶೀಫ್, ಬನ್ನೂರು ನಿವಾಸಿ ನಾಸೀರ್ ಎಂಬವರ ಜೊತೆ ದಾರಂದಕುಕ್ಕು ಕಠಾರ ಹೊಳೆಗೆ ತೆರಳಿದ್ದರು. ನೀರಿನ ಮಟ್ಟ ಕಡಿಮೆ ಇದ್ದರಿಂದ ಹೊಳೆಯ ಮಧ್ಯ ಭಾಗಕ್ಕೆ ಹೋಗಿ ನೀರಿನ ಪ್ರಮಾಣ ಜಾಸ್ತಿ ಪ್ರದೇಶದಲ್ಲೇ ಸ್ನಾನಕ್ಕೆ ಇಳಿದಿದ್ದಾರೆನ್ನಲಾಗಿದೆ.
ಮೂವರು ಸ್ನಾನ ಮುಗಿಸಿ ದಡಕ್ಕ ಬಂದಾಗ ಸೈಫಲಿಖಾನ್ ನಾಪತ್ತೆಯಾಗಿದ್ದರು. ಅವರಿಗಾಗಿ ಅಲ್ಲೇ ಅವರು ಹುಟಕಾಟ ನಡೆಸಿದರೂ ಸೈಫಲಿಖಾನ್ ಅವರು ನೀರಿನಲ್ಲಿ ಕಣ್ಮರೆಯಾಗಿದ್ದರೆಂದು ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಪರಿಸರದವರು ಮತ್ತು ಸಾರ್ವಜನಿಕರು ಘಟನಾ ಸ್ಥಳಕ್ಕೆ ಆಗಮಿಸಿದ್ದರು. ಅಗ್ನಿಶಾಮಕ ದಳವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು. ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಮತ್ತು ಸಿಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ.