ಸುಳ್ಯ: 11 ಬಿ ತಂತ್ರಾಂಶ ಅಳವಡಿಕೆ ಸಮರ್ಪಕಾಗಿ ಆಗದೆ ದಾಖಲೆಗಳ ಖಾತಾ ಬದಲಾವಣೆಗೆ ತೀವ್ರ ಸಮಸ್ಯೆ ಆಗುತ್ತಿದೆ. ಆದುದರಿಂದ ಕೂಡಲೇ ತಂತ್ರಾಂಶ ಅಳವಡಿಕೆ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ಸುಳ್ಯ ತಾ.ಪಂ.ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಅಬ್ದುಲ್ ಗಫೂರ್, 11 ಬಿ ತಂತ್ರಾಂಶ ಅಳವಡಿಕೆಯಾಗದೆ ಕಾರಣ ದಾಖಲೆಗಳ ಖಾತೆ ಬದಲಾವಣೆ ಸ್ಥಗಿತವಾಗಿದೆ. ಇದರಿಂದ ರೈತರಿಗೆ, ಜನ ಸಾಮಾನ್ಯರಿಗೆ ತೀವ್ರ ತೊಂದರೆ ಉಂಟಾಗುತಿದೆ. ಇದರ ಪರಿಹಾರ ಕೂಡಲೇ ಆಗಬೇಕು ಎಂದು ಒತ್ತಾಯಿಸಿದರು. ಈ ಕುರಿತು ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಸಮಸ್ಯೆ ಪರಿಹರಿಸಲು ತಂತ್ರಾಂಶ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.
ಕನಕಮಜಲು ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿರುವ ವಿದ್ಯುತ್ ಟಿ.ಸಿ.ಯನ್ನು ಬದಲಿಸಲು ಹಲವು ತಿಂಗಳ ಹಿಂದೆಯೇ ಹೇಳಲಾಗಿದ್ದರೂ ಅದನ್ನು ಬದಲಾಯಿಸದ ಬಗ್ಗೆ ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಕ ಅಸಮಾಧಾನ ವ್ಯಕ್ತಪಡಿಸಿದರು. ಇದರ ಬದಲಾವಣೆಗೆ ಕಡತಗಳ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ ಮೆಸ್ಕಾಂ ಇಂಜಿನಿಯರ್ ಮೇಲೆ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಗರಂ ಆದರು. ಸಬೂಬು ಬೇಕಾಗಿಲ್ಲ, ವಾರದೊಳಗೆ ಟಿ.ಸಿಯನ್ನು ಬದಲಾವಣೆ ಮಾಡಬೇಕೆಂದು ಅಧ್ಯಕ್ಷ ಚನಿಯ ಕಲ್ತಡ್ಕ ಸೂಚಿಸಿದರು.
ಮನೆ ಕಳೆದುಕೊಂಡವರಿಗೆ 95 ಸಾವಿರ ಮಾತ್ರ
ಸುಳ್ಯ ತಾಲೂಕಿನಲ್ಲಿ ಪ್ರಕೃತಿ ವಿಕೋಪದಲ್ಲಿ ಹಲವು ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ. ಇವರಿಗೆ ಸರ್ಕಾರ ಕೇವಲ 95 ಸಾವಿರ ರೂ ಮಾತ್ರ ನೀಡಿದೆ ಎಂದು ಸದಸ್ಯ ಅಬ್ದುಲ್ ಗಫೂರ್ ಹೇಳಿದಾಗ, ಈ ಕುರಿತು ಚರ್ಚೆ ನಡೆಯಿತು. ಸುಳ್ಯ ತಾಲೂಕಿನಲ್ಲಿ ಆಗಿರುವ ನಾಶವನ್ನು ಪ್ರಕೃತಿ ವಿಕೋಪ ಎಂದು ಪರಿಗಣಿಸಲಾಗಿದ್ದು ಕೇವಲ 95 ಸಾವಿರ ಮಾತ್ರ ಪರಿಹಾರ ನೀಡಲು ಅವಕಾಶ ಇದೆ. ಆದರೆ ದುರಂತ ಎಂದು ಪರಿಗಣಿಸಿದರೆ ಹೆಚ್ಚು ಸಹಾಯ ಧನ ದೊರೆಯಲು ಸಾಧ್ಯ ಆದುದರಿಂದ ಇದನ್ನು ಪ್ರಕೃತಿ ದುರಂತ ಎಂದು ಪರಿಗಣಿಸಬೇಕು ಎಂದು ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಒತ್ತಾಯಿಸಿದರು. ಸುಳ್ಯ ತಾಲೂಕಿನಲ್ಲಿ ಆಗಿರುವುದು ಪ್ರಾಕೃತಿಕ ದುರಂತ ಎಂದು ಪರಿಗಣಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ನಿರ್ಣಯಿಸಲಾಯಿತು.