ಬೆಳ್ತಂಗಡಿ: ತಾಲೂಕಿನ ಪೆರಾಡಿ ಎಂಬಲ್ಲಿನ ಕಟ್ಟೆಯೊಂದರಲ್ಲಿದ್ದ ಮಾವಿನ ಮರಕ್ಕೆ ಹಾಕಿದ್ದ ಭಗವಾಧ್ವಜವನ್ನು ಪೋಲಿಸರು ಏಕಾಏಕಿ ಕಿತ್ತುಹಾಕಿದ ಹಿನ್ನೆಲೆಯಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ.
ಶಾಸಕ ಹರೀಶ್ ಪೂಂಜ ಅವರು ಮತ್ತೆ ಭಗವಾಧ್ವಜವನ್ನು ಹಾರಿಸಿದ್ದು ಇದನ್ನು ತೆಗೆದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಪೆರಾಡಿಯ ಜಂಕ್ಷನ್ನಲ್ಲಿ ಮಾವಿನಮರ ಇರುವ ಕಟ್ಟೆಯೊಂದಿದೆ. ಈ ಮಾವಿನ ಮರವನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ಹದಿನೈದು ವರ್ಷಗಳ ಹಿಂದೆ ನೆಟ್ಟಿದ್ದು ಬಳಿಕ ಅದಕ್ಕೆ ಸುತ್ತಲೂ ಸುಂದರವಾದ ಕಟ್ಟೆಯೊಂದನ್ನೂ ಕಟ್ಟಿದ್ದಾರೆ. ಕೆಲವು ವರ್ಷಗಳಿಂದೀಚೆಗೆ ಮರದ ತುದಿಗೆ ಭಗವಾಧ್ವಜವನ್ನು ಹಾರಿಸುವುದನ್ನು ರೂಢಿಸಿಕೊಂಡು ಬಂದಿದ್ದರು.
ಆದರೆ ಗುರುವಾರ ಏಕಾಏಕಿ ಪೋಲಿಸರು ಭಗವಾಧ್ವಜವನ್ನು ತೆಗದುಹಾಕಿರುವುದು ಹಿಂದೂಗಳ ಕ್ರೋಧಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ಇಲ್ಲಿ ಮುಸ್ಲಿಂ ಸಮುದಾಯದ ಕಾರ್ಯಕ್ರಮ ನಡೆದ ಸಂದರ್ಭ ಮುಸ್ಲಿಂ ಸಮುದಾಯದವರೂ ಭಗವಾಧ್ವಜದ ಸನಿಹ, ಅದಕ್ಕಿಂತಲೂ ಮೆಲಕ್ಕೆ ಹಸಿರು ಬಾವುಟವನ್ನು ಕಟ್ಟಿದ್ದರು. ಅವರ ಕಾರ್ಯಕ್ರಮ ಮುಗಿದ ಬಳಿಕ ಹಸಿರು ಬಾವುಟವನ್ನು ಹಿಂದುಗಳು ತೆರವುಗೊಳಿಸಿದ್ದರು. ಈ ಸಂದರ್ಭ ಎರಡೂ ಸಮುದಾಯದ ಮಧ್ಯೆ ಗೊಂದಲ ಉಂಟಾಗಿತ್ತು. ಬಳಿಕ ಬೇರೊಂದು ಕಡೆ ಹಸಿರು ಬಾವುಟ ಹಾರಿಸುವಂತೆ ಮುಸ್ಲಿಂ ಸಮುದಾಯದವರಿಗೆ ಸಲಹೆ ನೀಡಲಾಗಿತ್ತು. ಆದರೆ ಅವರು ಬೇರೆಕಡೆ ಹಾರಿಸಿದ ಧ್ವಜ ಮನೆಯೊಂದಕ್ಕೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪ ಬಂದ ಕಾರಣ ಅದನ್ನು ತೆಗೆಯಲು ಒತ್ತಾಯಿಸಲಾಗಿತ್ತು. ಇದರಿಂದ ಮತ್ತಷ್ಟು ಗೊಂದಲ ಉಂಟಾಗಿ ವೇಣೂರು ಪೋಲಿಸರು ಎರಡೂ ಧ್ವಜವನ್ನು ತೆಗೆದು ಹಾಕಿದ್ದರು.
ಪೋಲಿಸರು ಹಸಿರು ಧ್ವಜಮಾತ್ರವಲ್ಲದೆ ವರ್ಷಗಳಿಂದ ಇದ್ದ ಭಗವಾಧ್ವಜವನ್ನೂ ಕಿತ್ತೆಗೆದಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಮಾಡಿದ ಪೋಲಿಸರ ಕ್ರಮವು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಕೆರಳಿಸಿದೆ.
ಧ್ವಜವನ್ನು ಸ್ಥಾಪಿಸಿದ ಬಳಿಕ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ. ಹಿಂದೂ ಸಮಾಜದ ರಕ್ಷಣೆಗಾಗಿ ಜೈಲಿಗೆ ಹೋಗಲೂ ಸಿದ್ದ. ಪ್ರಕರಣ ದಾಖಲಿಸುವುದಿದ್ದಲ್ಲಿ ನನ್ನ ಮೇಲೆ ದಾಖಲಿಸಲಿ. ಸೌಹಾರ್ದತೆಯ ನೆಪದಲ್ಲಿ ಭಗವಾಧ್ವಜನ್ನು ತೆಗೆಯುವುದು ಸರಿಯಲ್ಲ. ಕುತಂತ್ರದ ರಾಜಕಾರಣ ನಡೆಯದು. ನನಗೆ ಹಿಂದುತ್ವ ಮುಖ್ಯವೇ ಹೊರತು ಶಾಸಕತ್ವ ಅಲ್ಲ. ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆಯಾಗುವಂತಹ ಕಾರ್ಯವನ್ನು ಪಂಚಾಯತ್ ಆಗಲಿ, ಕಾಂಗ್ರೇಸ್ ಪಕ್ಷದವರಾಗಲಿ ಮಾಡದಿರುವುದು ಉತ್ತಮ. ಮತ್ತೆ ಧ್ವಜ ತೆಗೆಯುವ ಕೆಲಸಕ್ಕಿಳಿದರೆ ಸುಮ್ಮನಿರುವುದಿಲ್ಲ ಎಂದು ಖಡಕ್ಕಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭ ಬಿಜೆಪಿ ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್, ಬಜರಂಗದಳ ತಾಲೂಕು ಸಂಚಾಲಕ ರಾಮಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.