ಸುಳ್ಯ: ದೇಶವು ಅತ್ಯಂತ ವೇಗವಾಗಿ ಬೆಳೆಯುತಿದೆ. ದೇಶವು ವಿಶ್ವಕ್ಕೆ ಮಾದರಿಯಾಗುವ ನೆಲೆಯಲ್ಲಿ ಬೆಳವಣಿಗೆಯಾಗಲು ಮತ್ತು ಹಿರಿಯರ ಕಲ್ಪನೆಯ ದೇಶ ಸಾಕಾರಗೊಳ್ಳಲು ಎಲ್ಲರೂ ಕೊಡುಗೆ ನೀಡಬೇಕು, ಪ್ರತಿಯೊಬ್ಬರೂ ದೇಶಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಎಸ್.ಅಂಗಾರ ಕರೆ ನೀಡಿದ್ದಾರೆ.
ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿಯ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವ್ಯವಸ್ಥೆಗಳು ದೇಶದ ಬೆಳವಣಿಗೆಗೆ, ಜನರ ಹಿತದೃಷ್ಠಿಯಿಂದ ಇರುತ್ತದೆ. ಆದರೆ ಎಲ್ಲರೂ ಅಧಿಕಾರಕ್ಕೆ ಮಹತ್ವ ನೀಡಿ ಸ್ವಾರ್ಥಕ್ಕಾಗಿ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿರುವ ಕಾರಣ ಜನರು ಈ ವ್ಯವಸ್ಥೆಯ ಬಗ್ಗೆ ನಂಬಿಕೆ, ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ದೇಶವೇ ಮೊದಲ ಆದ್ಯತೆಯಾಗಬೇಕು, ದೇಶ ಭಕ್ತಿ ಎಲ್ಲರಲ್ಲಿಯೂ ಇರಬೇಕು. ಆಗ ಮಾತ್ರ ಸ್ವಾಭಿಮಾನದ, ಗೌರವದ ದೇಶ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು. ಸ್ವಾತಂತ್ರ್ಯಾ ನಂತರ ಅಧಿಕಾರಕ್ಕಾಗಿ ಉಂಟಾಗಿರುವ ಪ್ರತ್ಯೇಕತಾ ಮನೋಭಾವ ಮತ್ತು ಭ್ರಷ್ಟಾಚಾರ ದೇಶಕ್ಕೆ ಮಾರಕ ಎಂದು ಅವರು ಬೊಟ್ಟು ಮಾಡಿದರು.
ಸುಳ್ಯ ತಹಶೀಲ್ದಾರ್ ಎಂ.ಜಿ ಸಂತೋಷ್‍ಕುಮಾರ್ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ.ಅಧ್ಯಕ್ಷೆ ಶೀಲಾವತಿ ಮಾಧವ, ಎ.ಪಿ.ಎಂ.ಸಿ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತ್ತಡ್ಕ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ನಗರ ಪಂಚಾಯಿತಿ ಸದಸ್ಯ ಕೆ.ಎಂ.ಮುಸ್ತಫಾ, ಪೊಲೀಸ್ ವೃತ್ತ ನಿರೀಕ್ಷಕ ಸತೀಶ್‍ಕುಮಾರ್, ಗೃಹ ರಕ್ಷಕ ದಳದ ಪ್ಲಟೂನ್ ಕಮಾಂಡರ್ ಜಯಂತ್ ಶೆಟ್ಟಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಿದಾನಂದ ಯಂ.ಎಸ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್.ಮಧುಕುಮಾರ್ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ ವಂದಿಸಿದರು. ಅಚ್ಚುತ ಅಟ್ಲೂರು ನಿರೂಪಿಸಿದರು. ಗ್ರಹ ರಕ್ಷಕ ದಳದ ಸಿಬ್ಬಂದಿಗಳನ್ನು ನ್ಮಾನಿಸಲಾಯಿತು. ಸಮಾರಂಭಕ್ಕೆ ಮುನ್ನ ಆಕರ್ಷಕ ಪಥ ಸಂಚಲನ ನಡೆಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.