ಚಿಕ್ಕಬಳ್ಳಾಪುರ: ಶುಕ್ರವಾರವ ಚಿಂತಾಮಣಿಯ ನರಸಿಂಹಪೇಟೆಯ ಗಂಗಮ್ಮ ದೇವಾಲಯದ ಬಳಿ ಭಕ್ತರೊಬ್ಬರು ವಿತರಣೆ ಮಾಡಿದ್ದ ಪ್ರಸಾದ ಸೇವಿಸಿ ಇಬ್ಬರು ಮಹಿಳೆಯರು ಸಾವನ್ನಪ್ಪಿ, 11 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶನಿವಾರ ನಡೆದಿದೆ.
ಗಂಗಮ್ಮದೇವಿಗೆ ಹರಕೆ ಹೊತ್ತವರು ಶುಕ್ರವಾರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಲ್ಲಿ ಬಂದ ಭಕ್ತರಿಗೆ ಪ್ರಸಾದ ವಿತರಿಸುತ್ತಾರೆ. ಅಂತೆಯೇ ಶ್ರೀರಾಮಪುರ ನಿವಾಸಿಗಳಾದ, ನೆರೆಹೊರೆ ಮನೆಯವರಾದ ರಾಜಾ ಮತ್ತು ನಾರಾಯಣಮ್ಮ ಎಂಬುವರು ಮನೆಗೆ ತೆಗೆದುಕೊಂಡು ಹೋಗಿ ಕುಟುಂಬದ ಸದಸ್ಯರಿಗೆ ನೀಡಿದ್ದರು.
ಈ ಇಬ್ಬರ ಕುಟುಂಬಗಳಲ್ಲಿ ಪ್ರಸಾದ ಸೇವಿಸಿದ 10 ಜನರಿಗೆ ರಾತ್ರಿ ಏಕಾಏಕಿ ವಾಂತಿ–ಬೇಧಿ ಕಾಣಿಸಿಕೊಂಡಿತ್ತು. ಇದರಲ್ಲಿ ರಾಜು (40), ಅವರ ಪತ್ನಿ ರಾಧಾ (35), ರಾಜು ಅವರ ಸಹೋದರ ಗಂಗಾಧರ್ (35), ಗಂಗಾಧರ್ ಪತ್ನಿ ಕವಿತಾ (30) ಅವರಿಗೆ ವಾಂತಿ ಕಾಣಿಸಿಕೊಂಡ ಪರಿಣಾಮ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಬಳಿಕ ಕೋಲಾರದ ಎಸ್ಎನ್ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬೆಳಿಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ರಾಜು ಕುಟುಂಬದವರನ್ನು ಸ್ಥಳಾಂತರಿಸಲಾಯಿತು. ಈ ಪೈಕಿ ಜಾಲಪ್ಪ ಆಸ್ಪತ್ರೆಯಲ್ಲಿ ಕವಿತಾ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಚಿಂತಾಮಣಿಯ ನಗರ ಠಾಣೆ ಪೊಲೀಸರು, ಅರ್ಚಕರು ಹಾಗೂ ದೇವಾಲಯದ ಕಸ ಗುಡಿಸುವವರು ಕೆಲ ಮಹಿಳೆಯರು ಸೇರಿ ಸುಮಾರು 12 ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.