ಬೆಳ್ತಂಗಡಿ: ಫೆ. 18 ರವರೆಗೆ ನಡೆಯುವ ಧರ್ಮಸ್ಥಳ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಅಂಗವಾಗಿ ನಡೆಯುವ ಲೇಸರ್ ಶೋ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ರತ್ನಗಿರಿ ಬೆಟ್ಟದಲ್ಲಿನ ಬಾಹುಬಲಿಯ ಪದತಲದಲ್ಲಿ ಶನಿವಾರ ಮುಸ್ಸಂಜೆ ವರ್ಣರಂಜಿತವಾಗಿ ನೆರವೇರಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರು ನಾಟ್ಯರಾಜ ನಟರಾಜನ ವಿಗ್ರಹವನ್ನು ಆಳ್ವಾಸ್ ಸಾಂಸ್ಕøತಿಕ ರಾಯಭಾರಿ ಡಾ| ಮೋಹನ ಆಳ್ವ ಅವರಿಗೆ ಹಸ್ತಾಂತರಿಸುವ ಮೂಲಕ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು 1973 ರಲ್ಲಿ ಕಾರ್ಕಳದಿಂದ ಉಜಿರೆಯವರೆಗಿನ ಬಾಹುಬಲಿ ಸಾಗಾಟದ ದೃಶ್ಯಗಳು ಇಂದೂ ಮರೆಯಾಗಿಲ್ಲ. ಅದನ್ನು ನೋಡಿದ ಪುಣ್ಯ ನನ್ನದು. ಅಂದು ತುಳುಚಿತ್ರದ ಚಿತ್ರೀಕರಣ ಧರ್ಮಸ್ಥಳದ ಪರಿಸರದಲ್ಲಿ ನಡೆಯುತ್ತಿತ್ತು ಆ ಸಂದರ್ಭ ಧರ್ಮಸ್ಥಳಕ್ಕೆ ಬಂದು ಹೋಗುತ್ತಿದ್ದೆ. ಮಾತೃಶ್ರೀ ರತ್ನಮ್ಮನವರ ಆದಾರಾತಿಥ್ಯ ಇಂದಿಗೂ ನೆನಪಿದೆ. ಕುಟುಂಬದವಳಂತೆ ಅಂದು ನನ್ನನ್ನು ಕಂಡಿದ್ದರು ಎಂದರು.
ಧರ್ಮಾಧಿಕಾರಿ ಹೆಗ್ಗಡೆಯವರಿಗೆ ಇದುವರೆಗೆ ನೂರಾರು ಪ್ರಶಸ್ತಿಗಳು ಬಂದಿವೆ. ಭಾರತರತ್ನ ಬಂದರೂ ಅದಕ್ಕಿಂತ ಮಿಗಿಲಾದವರು ಅವರು. ಧರ್ಮಸ್ಥಳ ಯೋಜನೆಯ ಮೂಲಕ ಲಕ್ಷಾಂತರ ಕುಟುಂಬಗಳನ್ನು ಬದುಕಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅದು ಇನ್ನೂ ಮುಂದುವರಿಯಲಿ ಎಂದ ಅವರು, ನನ್ನ ಮನೆ ದೇವರು ಮಂಜುನಾಥ. ಹೀಗಾಗಿ ಧರ್ಮಸ್ಥಳ ಮಂಜುನಾಥನ ಕೃಪೆಯಿಂದಾಗಿ ನಾನು ರಾಜ್ಯ ಸರಕಾರದ ಮಂತ್ರಿಯಾಗಿದ್ದೇನೆ ಎಂದರು.
ಲೇಸರೋ ಶೋವನ್ನು ಉದ್ಘಾಟಿಸಿದ ಕನ್ನಡ ಚಲನಚಿತ್ರ ನಟ ರಮೇಶ್ ಅರವಿಂದ ಅವರು, ಧರ್ಮ, ದೇವರು ಶತಮಾನಗಳಿಂದ ಜನರನ್ನು ಒಗ್ಗೂಡಿಸುತ್ತಾ ಬಂದಿವೆ. ದೇವಸ್ಥಾನವೆಂಬುದು ಪವಿತ್ರವಾದ ಶಕ್ತಿ. ಧರ್ಮಸ್ಥಳದಲ್ಲಿ ದೇವಸ್ಥಾನದ ಮೂಲಕ ನೂರಾರು ವರ್ಷಗಳಿಂದ ಜನರನ್ನು ಒಂದಾಗಿಸುವ ಕಾರ್ಯ ನಡೆಯುತ್ತಿದೆ. ಇಂದು ಧರ್ಮಸ್ಥಳಕ್ಕೆ ಬಂದಾಗ ಇಲ್ಲಿನ ಅಲಂಕಾರವನ್ನು ನೋಡಿದಾಗ ರಾಜರಕಾಲಕ್ಕೆ ಬಂದಂತಹ ಅನುಭವವಾಯಿತು ಎಂದರು.
ನಾವು ಮಹಾಪುರುಷರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ಕಚೇರಿಗಳಲ್ಲಿ ಅವರ ಭಾವಚಿತ್ರಗಳನ್ನು ಅಳವಡಿಸುತ್ತೇವೆ ಯಾಕೆಂದರೆ, ಅವರಿಂದ ನಾವು ಅವರ ಜೀವನದಿಂದ ಸ್ಪೂರ್ತಿಯನ್ನು ಪಡೆಯಬೇಕು ಎಂಬುದೇ ಇದರ ಹಿಂದಿನ ಉದ್ದೇಶವಾಗಿದೆ. ಬಾಹುಬಲಿಯನ್ನು ನೋಡಿದರೆ ನಮಗೆ ನಾವು ಜೀವನದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂಬುದನ್ನು ನೆನಪಿಸುತ್ತಿದೆ. ಶ್ರೇಷ್ಠತೆ ದಿನನಿತ್ಯದ ಅಭ್ಯಾಸವಾಗಬೇಕು ಎಂದು ಅವರು ಆಶಿಸಿದ ಅವರು ವೀಕೆಂಡ್ ವಿತ್ ರಮೇಶ ಇದರ ಮುಂದಿನ ಆವೃತ್ತಿಯಲ್ಲಿ ಹೆಗ್ಗಡೆಯವರನ್ನು ಖಂಡಿತವಾಗಿಯೂ ಸಂದರ್ಶಿಸಲಾಗುವುದು ಎಂದು ರಮೇಶ್ ಭರವಸೆ ನೀಡಿದರು.
ಸ್ವಾಗತಿಸಿದ ಕಾರ್ಕಳ ಪ್ರೊ. ಎಂ. ರಾಮಚಂದ್ರ ಅವರನ್ನು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಸಮ್ಮಾನಿಸಿದರು. ಇದಕ್ಕೂ ಮೊದಲು ರತ್ನಗಿರಿಯ ಮಂಟಪದಲ್ಲಿ ಬಾಹುಬಲಿ ಮೂರ್ತಿಯ ಶಿಲ್ಪಿ ರೆಂಜಾಳ ಗೋಪಾಲ ಶೆಣೈ ಅವರ ಪುತ್ಥಳಿಯನ್ನು ಎಸ್ಡಿಎಂ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಪ್ರೊ. ಪ್ರಭಾಕರ್ ಅನಾವರಣಗೊಳಿಸಿದರು. ಶಾಸಕ ಹರೀಶ ಪೂಂಜ, ಹೇಮಾವತಿ ಹೆಗ್ಗಡೆ, ಹಷೇಂದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು ಉಪಸ್ಥಿತರಿದ್ದರು.
ಬಳಿಕ 17 ನಿಮಿಷಗಳ ಕಾಲ ಪ್ರಸ್ತುತಪಡಿಸಿದ ಭರತ ಬಾಹುಬಲಿಯ ಧ್ವನಿ-ಬೆಳಕಿನ ರೋಚಕ ಕಥಾನಕವನ್ನು ಲೇಸರ್ ಶೋದ ಮೂಲಕ ತೋರಿಸಿದ್ದು ಅತ್ಯಾಕರ್ಷಕವಾಗಿತ್ತು. ಇದು ಫೆ. 18 ರವರೆಗೆ ಪ್ರತಿದಿನ ಏಳು ಗಂಟೆಯಿಂದ ಮೂರು ಬಾರಿ ತೋರಿಸಲಾಗುತ್ತದೆ ಎಂದು ತಿಳಿಸಲಾಯಿತು. ಡಾ| ಸಂಧ್ಯಾ ಕೌಶಿಕ್ ಅವರ ನಿರ್ದೇಶನದಲ್ಲಿ , ಹಂಪನಾ ಅವರ ಕಥೆ ಆಧರಿತ ಶೋದಲ್ಲಿ ಸಂಗೀತಾ ಕಟ್ಟಿ ಅವರು ಹಾಡಿದ್ದಾರೆ.