ಸುಳ್ಯ: ಮಕ್ಕಳನ್ನು ಸಾಂಸ್ಕೃತಿತಕವಾಗಿ ಪ್ರೋತ್ಸಾಹಿಸಿ ಅವರ ಪ್ರತಿಭೆಗೆ ಒರಗೆ ಹಚ್ಚುವ ಉದ್ದೇಶದಿಂದ ಸುಳ್ಯದ ರಂಗಮಯೂರಿ ಕಲಾಶಾಲೆಯು ಹಮ್ಮಿಕೊಂಡ ಬೇಸಿಗೆ ಶಿಬಿರ `ಬಣ್ಣ’ ಗುರುವಾರ ಆರಂಭಗೊಂಡಿತು.
ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಭಾಗವಹಿಸುವ ಮಕ್ಕಳ ಶಿಬಿರ ದೇವ ಸನ್ನಿಧಿಯಲ್ಲಿ ನಂದಗೋಕುಲವನ್ನು ಸೃಷ್ಠಿಸಿದೆ. ವಿವಿಧ ಪ್ರಾಯದ ಮಕ್ಕಳ ಕಲರವ ಚಿಣ್ಣರ ಬಣ್ಣದ ಚಿತ್ತಾರವನ್ನು ಅರಳಿಸಿದೆ.
ಒಂಭತ್ತು ದಿನಗಳ ಕಾಲ ನಡೆಯುತ್ತಿರುವ ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 150ಕ್ಕೂ ಹೆಚ್ಚು ಮಕ್ಕಳು ಭಾಗವಹಿಸುತ್ತಿದ್ದಾರೆ. ಸಾಂಸ್ಕೃತಿಕವಾಗಿ ಪ್ರೋತ್ಸಾಹಿಸುವುದರ ಜೊತೆಗೆ ಮಕ್ಕಳ ಮನಸ್ಸಿನ ಅಂಜಿಕೆ, ಅಳುಕನ್ನು ಹೋಗಲಾಡಿಸಿ ಅವರಲ್ಲಿನ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತಂದು ಅವರನ್ನು ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ಬೆಳೆಸುವುದು ಗುರಿ ಎನ್ನುತ್ತಾರೆ ಸಂಘಟಕರು.
ರಂಗಮಯೂರಿ ಕಲಾ ಶಾಲೆಯ ಅಧ್ಯಕ್ಷ ವಿಜಯಕುಮಾರ್ ಮಯೂರಿ, ನಿರ್ದೇಶಕ ಲೋಕೇಶ್ ಊರುಬೈಲು ನೇತೃತ್ವದಲ್ಲಿ ನಡೆಯುವ ಬೇಸಿಗೆ ಶಿಬಿರದಲ್ಲಿ ಶಾಂತಿ ಮಂತ್ರ, ನೃತ್ಯ ಸಂಗೀತ, ಯೋಗಾರೋಗ್ಯ, ರಂಗ ಸಂಗೀತ, ಹಾಡಿನ ಆಟ, ರಂಗ ತರಬೇತಿ, ನಾಟಕ ನಿರ್ಮಾಣ, ದೇಸಿ ಆಟಗಳು, ದೇಸಿ ನೃತ್ಯಗಳು, ಮಣ್ಣಿನ ಕಲಾಕೃತಿ, ಬಣ್ಣದ ಚಿತ್ತಾರ, ಪರಿಸರ ಶಿಕ್ಷಣ, ಸದಭಿರುಚಿಯ ಸಿನಿಮಾ ಮೊದಲಾದ ಚಟುವಟಿಕೆಗಳ ಜೊತೆಗೆ ಜೀವನ ಪ್ರೀತಿ, ನಾಯಕತ್ವ ಗುಣ, ಸರಳ ಜೀವನ, ಪ್ರಥಮ ಚಿಕಿತ್ಸೆ, ಮಕ್ಕಳ ಹಕ್ಕುಗಳು, ಅಗ್ನಿ ಅನಾಹುತದ ರಕ್ಷಣೆ, ಇವುಗಳ ಬಗ್ಗೆ ಮಾಹಿತಿ ಕಾರ್ಯಾಗಾರಗಳನ್ನೂ ಹಮ್ಮಿಕೊಳ್ಳಲಾಗುತ್ತದೆ.
ಅಂತಾರಾಷ್ಟ್ರೀಯ ಕಲಾವಿದ ಹಾಗು ತರಬೇತುದಾರ ಜಾನ್ ದೇವರಾಜ್, ರಂಗನಿರ್ದೇಶಕ ಮಂಜುನಾಥ್ ಬಡಿಗೇರ್, ಸುಗಮ ಸಂಗೀತ ಗಾಯಕ ಡಾ.ಕಿರಣ್ ಕುಮಾರ್, ಸಂಗೀತ ನಿರ್ದೇಶಕ ಶುಭಕರ ಪುತ್ತೂರು, ಯೋಗ ಗುರು ಸಂತೋಷ್ ಮುಂಡೋಕಜೆ ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಶಿಬಿರ ಉದ್ಘಾಟನೆ:
ಡ್ರಾಮ ಜ್ಯೂನಿಯರ್ ಖ್ಯಾತಿಯ ಮಹೇಂದ್ರಕುಮಾರ್ ಶಿಬಿರವನ್ನು ಉದ್ಘಾಟಿಸಿದರು. ರಂಗಮಯೂರಿಯ ಅಧ್ಯಕ್ಷ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಗದೀಶ್ ಪಡ್ಪು, ಮಾಜಿ ಅಧ್ಯಕ್ಷ ನಾರಾಯಣ ಕೇಕಡ್ಕ, ಕಲಾವಿದ ರಾಜಾರಾಂ ದೇಂಗೋಡಿ, ಪತ್ರಕರ್ತ ಹರೀಶ್ ಬಂಟ್ವಾಳ್, ಅಂತಾರಾಷ್ಟ್ರೀಯ ಕಲಾವಿದ ಜಾನ್ ದೇವರಾಜ್ ಅತಿಥಿಗಳಾಗಿದ್ದರು. ರಂಗಮಯೂರಿಯ ನಿರ್ದೇಶಕ ಲೋಕೇಶ್ ಊರುಬೈಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.