News Kannada
Thursday, December 01 2022

ಕರಾವಳಿ

ಧರ್ಮಸ್ಥಳ ಸಾಮೂಹಿಕ ವಿವಾಹದಲ್ಲಿ 102 ಜೋಡಿ ಹಸೆಮಣೆಗೆ - 1 min read

Photo Credit :

ಧರ್ಮಸ್ಥಳ ಸಾಮೂಹಿಕ ವಿವಾಹದಲ್ಲಿ 102 ಜೋಡಿ ಹಸೆಮಣೆಗೆ

ಬೆಳ್ತಂಗಡಿ: ಧಾರ್ಮಿಕ ಮೌಲ್ಯಗಳನ್ನು ಉಳಿಸಿಕೊಂಡು, ದುಂದುವೆಚ್ಚ ಮಾಡದೆ ಮದುವೆಯಾಗುವುದರಲ್ಲೇ ಶಾಂತಿ ನೆಮ್ಮದಿ ಇದೆ ಎಂಬ ಸಂದೇಶವನ್ನು ಶ್ರೀಕ್ಷೇತ್ರ ಧರ್ಮಸ್ಥಳ ನಾಡಿಗೆ ನೀಡಿ ಮಾದರಿಯಾಗಿದೆ ಎಂದು ರಾಜ್ಯದ ನೀರಾವರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಧರ್ಮಸ್ಥಳದಲ್ಲಿ ಬುಧವಾರ ನಡೆದ 48ನೇ ಸಾಮೂಹಿಕ ಉಚಿತ ವಿವಾಹ ಸಮಾರಂಭದಲ್ಲಿ 102 ನೂತನ ವಧೂವರರಿಗೆ ಶುಭ ಹಾರೈಸಿ ಮಾತನಾಡಿದರು.

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎಂಬ ಮಾತಿದೆ. ಆದರೆ ಇಲ್ಲಿ ಮಾತ್ರ ಧರ್ಮಸ್ಥಳವೇ ಸ್ವರ್ಗವಾಗಿದೆ. ಇಲ್ಲಿ ಪ್ರತಿಯೊಂದು ಸಂಪ್ರದಾಯಕ್ಕೂ ಮನ್ನಣೆ ನೀಡಿ, ಅವರ ಇಚ್ಛೆಗೆ ಅನುಗುಣವಾಗಿ  ಅದೇ ರೀತಿ ಮದುವೆ ಕಾರ್ಯಗಳಿಗೆ ಅವಕಾಶ ನೀಡಿರುವುದು ಶ್ಲಾಘನೀಯ ಮತ್ತು ಮಾದರಿಯಾಗಿದೆ. ಧಾರ್ಮಿಕ ಮೌಲ್ಯಗಳನ್ನು ಉಳಿಸಿಕೊಂಡು ಮುದುವೆಯಾಗುವುದೇ ಮುಖ್ಯವಾಗಿದೆಯೇ ಹೊರತು ದುಂದುವೆಚ್ಚ ಮಾಡಿ ಅಲ್ಲ. ಕ್ಷೇತ್ರದಲ್ಲಿ 47 ವರ್ಷಗಳ ಗತ ವೈಭವ ಇಂದೂ ಉಳಿಸಿಕೊಂಡಿರುವುದು ಮೆಚ್ಚತಕ್ಕ ಅಂಶ ಎಂದರು.

ಗ್ರಾಮೀಣ ಭಾಗದಲ್ಲಿ ರುಡ್‍ಸೆಟ್ ಮೂಲಕ ಸ್ವಯಂಸ್ಪೂರ್ತಿಯ ಉದ್ಯೋಗಕ್ಕೆ ಅವಕಾಶ ನೀಡಿರುವ ಹೆಗ್ಗಡೆಯವರು ಧಾರ್ಮಿಕ ಪರಂಪರೆಗೆ ಹೊಸ ತಿರುವು ನೀಡಿದೆ. ಧರ್ಮಸ್ಥಳ ಹೆಗ್ಗಡೆಯವರ ಧರ್ಮ ಎಂಬುದು ಧರ್ಮಸ್ಥಳದ ಮೂಲಕ ಪ್ರಾರಂಭವಾಗಿದೆ ಎಂದರು.

ನಟ ಶಿವರಾಜ್ ಕುಮಾರ್ ಅವರು, 25 ವರ್ಷಗಳ ಹಿಂದೆ ಅಪ್ಪಾಜಿ ಸಾಮೂಹಿಕ ವಿವಾಹದ ಸಂದರ್ಭ ಇಲ್ಲಿಗೆ ಬಂದಿದ್ದ ವಿಡಿಯೋ ನೋಡಿದೆ. ಅವರಿಗೆ ಇನ್ನೂ ಬರಬೇಕು ಎಂಬ ಆಸೆ ಇತ್ತು. ಆದರೆ ಅವರ ಬದಲು ನಾನು ಬಂದಿರುವುದು ಸಂತಸ ತಂದಿದೆ. ಉತ್ತಮ ಕಾರ್ಯಕ್ರಮಗಳಿದ್ದಲ್ಲಿಗೆ ಹೋಗುತ್ತಿರಬೇಕು ಎಂದು ಆಶಿಸಿದರು.

ಶಾಸಕ ಹರೀಶ ಪೂಂಜ ಅವರು, ಇಂದಿನ ವಧೂವರರು ಧರ್ಮಾಧಿಕಾರಿ ಹೆಗ್ಗಡೆಯವರ, ಶಿವರಾಜ್ ಕುಮಾರ್‍ರವರಂತಹ ಮೇರುನಟನ ಮುಂದೆ ಮದುವೆಯಾಗಿದ್ದೇವೆ ಎಂಬ ಹೆಮ್ಮೆ ವಿಚಾರವಾಗಿದೆ. ಇದು ಮಕ್ಕಳು ಮೊಮ್ಮಕ್ಕಳ ತನಕ ನೆನಪಿನಲ್ಲಿರಲಿದೆ ಎಂದರು.

 ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಆಶೀರ್ವದಿಸುತ್ತಾ, ಇಂದು ಬೇರೆ ಬೇರೆ ಯಾಗಿ ಬಂದ ವಧೂವರರು ಇದೀಗ ಒಂದಾಗಿ ತೆರಳಲಿದ್ದೀರಿ. ಸರಳತೆಗೆ ಪ್ರಾಧಾನ್ಯ ನೀಡಿ, ದಾಂಪತ್ಯದ ಗೌರವ, ಶ್ರೇಷ್ಠತೆಗೆ ಮಹತ್ವ ನೀಡುವುದೇ ಈ ಕಾರ್ಯಕ್ರಮದ ಉದ್ದೇಶ. ಇದುವರೆಗೆ 12ಸಾವಿರಕ್ಕೂ ಹೆಚ್ಚು ಜೋಡಿಗಳು ಮದುವೆಯಾಗಿದ್ದಾರೆ. ಎಲ್ಲಿಯೂ ಭಿನ್ನಾಭಿಪ್ರಾಯ ಬಂದಿಲ್ಲ. ಇದಕ್ಕೆ ದೈವ ಬಲ, ಅತಿಥಿ ಗಣ್ಯರ, ಗುರು ಹಿರಿಯರ ಸಮಾಜದ ಅನುಗ್ರಹ ದೊರಕಿದೆ ಎಂದರು.

ಇಲ್ಲಿನ ಪ್ರೇರಣೆ ಪಡೆದು ನಾಡಿನ ಹಲವಾರು ಸಂಘ ಸಂಸ್ಥೆಗಳು ನೂರಾರು ಕಡೆ ವಿವಾಹಗಳನ್ನು ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಅದಲ್ಲದೆ ಇದೀಗ ನಿತ್ಯವೂ ನೂರಾರು ವಿವಾಹಗಳು ಬೇರೆ ಬೇರೆ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುತ್ತಿವೆ ಎಂದರು.

ಧರ್ಮಸ್ಥಳ ಯೋಜನೆಯಿಂದಾಗಿ ಸಮಾಜದಲ್ಲಿ ಆರ್ಥಿಕ ಸ್ವಾವಲಂಬಿತನ ಬಂದಿದೆ. ಬಡತನ ದೂರವಾಗುತ್ತಿದೆ ಎಂದ ಅವರು ರಾಜ್ಯದಲ್ಲಿ ಮಳೆಯ ಕೊರತೆಯ ಬಗ್ಗೆ ಪ್ರಸ್ತಾವಿಸುತ್ತಾ, ಇನ್ನಾದರೂ ಎಲ್ಲಾ ಕಡೆ ಉತ್ತಮ ಮಳೆ ಬಂದು ಬೆಳೆ ಬೆಳೆಯಲಿ, ಸುಖ ಶಾಂತಿ ನೆಮ್ಮದಿ ಸಿಗುವಂತಾಗಲಿ ಎಂದು ಆಶಿಸಿದರು.

See also  ಮೂಡುಬಿದಿರೆ ಪ್ರೆಸ್ ಕ್ಲಬ್‍ನ ಗೋವರ್ಧನಂ ಸಂಭ್ರಮ

ವೇದಿಕೆಯಲ್ಲಿ ಹೇಮಾವತಿ ವೀ. ಹೆಗ್ಗಡೆ, ಗೀತಾ ಶಿವರಾಜ ಕುಮಾರ್, ನಿರ್ಮಾಪಕ ಚೆನ್ನೇಗೌಡ, ವಿಧಾನಪರಿಷತ್ ಸದಸ್ಯ ಹರೀಶ್‍ಕುಮಾರ್, ವಕ್ಫ ಮಂಡಳಿ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಹಷೇಂದ್ರ ಕುಮಾರ್, ಸುರೇಂದ್ರ ಕುಮಾರ್, ಮಾಜಿ ಶಾಸಕ ಅಭಯಚಂದ್ರ ಜೈನ್, ವಿವಾಹ ನೋಂದಣಿ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ಎಸ್‍ಕೆಡಿಆರ್‍ಡಿಪಿ ನಿರ್ದೇಶಕ ಜಯಶಂಕರ ಶರ್ಮ ಸ್ವಾಗತಿಸಿದರು. ಪಿ. ಸುಬ್ರಹ್ಮಣ್ಯ ರಾವ್ ವಂದಿಸಿದರು. ಉಜಿರೆ ಎಸ್‍ಡಿಎಂ ಕಾಲೇಜಿನ ಉಪನ್ಯಾಸಕ ದೀಕ್ಷಿತ್ ರೈ ಕಾರ್ಯಕ್ರಮ ನಿರ್ವಹಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು