News Kannada
Friday, December 09 2022

ಕರಾವಳಿ

ಏರುತ್ತಿರುವ ಉಷ್ಣತೆಯಿಂದ ಉದುರುತ್ತಿರುವ ಅಡಿಕೆ

Photo Credit :

ಏರುತ್ತಿರುವ ಉಷ್ಣತೆಯಿಂದ ಉದುರುತ್ತಿರುವ ಅಡಿಕೆ

ಸುಳ್ಯ: ಕಳೆದ ವರ್ಷ ಮಳೆ ಅಧಿಕವಾಗಿ ಅಡಕೆ ಕೃಷಿ ನಾಶವಾಗಿ ಕೃಷಿಕ ಭಾರಿ ನಷ್ಟ ಅನುಭವಿಸಿದ್ದರೆ, ಈ ವರ್ಷ ಮಳೆರಾಯ ಕೈಕೊಟ್ಟ ಕಾರಣ ಅಡಕೆ ಕೃಷಿಕ ಮತ್ತೆ ಸಂಕಷ್ಟಕ್ಕೆ ಸಿಲುಕುವ ಲಕ್ಷಣಗಳು ಗೋಚರಿಸಿದೆ.

ಮಾರುಕಟ್ಟೆಯಲ್ಲಿ ಅಡಕೆಗೆ ಉತ್ತಮ ಧಾರಣೆ ಇದ್ದು ಕೃಷಿಕರಿಗೆ ನಿರೀಕ್ಷೆ ಹುಟ್ಟಿಸಿದರೆ, ತೋಟದಲ್ಲಿ ಎಳೆ ಅಡಕೆಗಳು ಧರಾಶಾಯಿಯಾಗುವುದು ಕೃಷಿಕನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜೂನ್ ತಿಂಗಳ ಮೊದಲ ವಾರ ಮುಗಿಯುತ್ತಾ ಬಂದರೂ ಮುಂಗಾರು ಮಳೆ ದುರ್ಬಲವಾಗಿ ವಾತಾವರಣದ ಉಷ್ಣಾಂಶ ಏರಿರುವುದರಿಂದ ಹಸಿ ಎಳೆ ಅಡಕೆ ವ್ಯಾಪಕವಾಗಿ ಉದುರುತ್ತಿದೆ. ಮೇ ತಿಂಗಳಲ್ಲಿಯೇ ಕೆಲವು ತೋಟಗಳಲ್ಲಿ ಎಳೆಯ ಅಡಕೆ ಉದುರುತ್ತಿತ್ತು. ಇದೀಗ ಮಳೆ ನಾಪತ್ತೆಯಾಗಿದೆ ಮತ್ತು ಉಷ್ಣತೆ ವಿಪರೀತ ಏರಿರುವುದರಿಂದ ಅಡಕೆ ಉದುರುವುದು ಹೆಚ್ಚಿದೆ. ತೋಟಗಳಲ್ಲಿ ಅಡಕೆ ಮರದ ಸುತ್ತಲೂ ಉದುರಿದ ಹಸಿರು ಅಡಕೆಗಳ ರಾಶಿಯೇ ತುಂಬಿದೆ. ಸುಳ್ಯ ತಾಲೂಕಿನ ವಿವಿಧ ಭಾಗಗಳ ತೋಟಗಳಲ್ಲಿ ಅಡಕೆ ಬಿದ್ದು ಫಸಲು ನಾಶವಾಗಿದೆ. ಇದೇ ರೀತಿಯ ವಾತಾವರಣ ಮುಂದುವರಿದರೆ ಕಳೆದ ವರ್ಷದ ಮಳೆಗಾಲಕ್ಕಿಂತಲೂ ಭೀಕರ ಅಡಕೆ ಫಸಲು ನಾಶ ಉಂಟಾಗಬಹುದು ಎಂಬ ಆತಂಕ ಬೆಳೆಗಾರರನ್ನು ಕಾಡಿದೆ.

ಅಡಕೆ ಮರದಲ್ಲಿ ನಳ್ಳಿ ಉದುರುವುದು ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಜೂನ್ ತಿಂಗಳ ವೇಳೆಗೆ ಈ ನಳ್ಳಿ ಎಳೆ ಅಡಕೆಯಾಗಿ ಮಾರ್ಪಾಡಾಗುತ್ತದೆ. ಜೂನ್‍ನಲ್ಲಿ ಉತ್ತಮ ಮಳೆಯಾಗಿ ಉಷ್ಣತೆ ಕಡಿಮೆಯಾದರೆ ಈ ಹಸಿ ಕಾಯಿಯು ಸಹಜವಾಗಿ ಬೆಳವಣಿಗೆ ಹೊಂದುತ್ತದೆ. ಆದರೆ ಈ ವರ್ಷ ಮಳೆ ತೀವ್ರ ಪ್ರಮಾಣದಲ್ಲಿ ಕಡಿಮೆ ಆಗಿರುವುದರಿಂದ ಮತ್ತು ವಿಪರೀತ ಸೆಕೆಯಿಂದ ಈ ಎಳೆ ಅಡಕೆಗಳು ಧಗೆ ತಾಳಲಾರದೆ ತನ್ನ ಶಕ್ತಿಯನ್ನು ಕಳೆದುಕೊಂಡು ಉದುರುತ್ತವೆ. ಕೆಲವು ತೋಟಗಳಲ್ಲಂತೂ ದೊಡ್ಡದಾಗಿ ಬೆಳೆದ ಅಡಕೆಗಳೂ ಉದುರುತ್ತಿವೆ. ಅಡಕೆ ಮರದ ಸುತ್ತಲೂ ಹಸಿ ಎಳೆಗಾಯಿಯೇ ತುಂಬಿದ್ದು, ಎಳೆ ಅಡಕೆ ನಿರಂತರ ಉದುರುವುದರಿಂದ ಅಡಕೆ ಮರದ ಕೊಂಬೆ ಖಾಲಿಯಾಗುತ್ತಿದೆ. ಕೆಲವು ತೋಟದಲ್ಲಿ ಅಡಕೆ ಉದುರುವುದು ಈಗಾಗಲೇ ವ್ಯಾಪಕವಾಗಿದ್ದರೆ, ಕೆಲವು ತೋಟಗಳ ಒಂದೊಂದೇ ಭಾಗದಲ್ಲಿ ಉದುರುವ ಪ್ರಕ್ರಿಯೆ ಆರಂಭವಾಗಿದೆ.

ಕಳೆದ ವರ್ಷ ಜೂನ್, ಜುಲೈ ಆಗಸ್ಟ್ ತಿಂಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಸುಳ್ಯ ತಾಲೂಕಿನ ಬಹುತೇಕ ತೋಟಗಳಲ್ಲಿಯೂ ಶೇ.40ಕ್ಕಿಂತಲೂ ಹೆಚ್ಚು ಬೆಳೆ ನಾಶ ಉಂಟಾಗಿತ್ತು. ಅತಿವೃಷ್ಠಿಯಿಂದ ಔಷಧಿ ಸಿಂಪಡಣೆ ಸಾಧ್ಯವಾಗದೆ ಕೊಳೆ ರೋಗ ಬಾದಿಸಿ ಅಡಕೆ ಕೃಷಿ ನಾಶವಾಗಿರುವುದರ ಜೊತೆಗೆ ಅಡಕೆ ಮರವೂ ಸಾಯುವ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ಕೃಷಿಕರಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿತ್ತು. ಕಳೆದ ವರ್ಷ ಅಪ್ಪಳಿಸಿದ ಭೀಕರ ಕೊಳೆ ರೋಗದಿಂದಾಗಿ ಫಸಲು ಕಳೆದುಕೊಂಡು ಈ ವರ್ಷ ಮಾರಾಟ ಮಾಡಲು ಅಡಕೆ ಇಲ್ಲದೆ ಪರಿಸ್ಥಿತಿ ಸೃಷ್ಠಿಯಾಗಿತ್ತು. ಇದರಿಂದ ಅಡಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದರೂ ಮಾರಾಟ ಮಾಡಲು ಅಡಕೆ ಇಲ್ಲದೆ ದರದ ಲಾಭ ಪಡೆಯಲು ಸಾಮಾನ್ಯ ಕೃಷಿಕರಿಗೆ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಸುರಿದ ಅತಿವೃಷ್ಠಿಯಿಂದ ಕೊಳೆರೋಗ ಭಾದಿಸಿ ಸುಳ್ಯ ತಾಲೂಕಿನ ತೋಟಗಳಲ್ಲಿ ಶೇ.40ರಿಂದ 50ರಷ್ಟು ಅಡಿಕೆ ಫಸಲು ನಷ್ಟ ಉಂಟಾಗಿತ್ತು. ಮಾಯವಾದ ಮಳೆಯು ಈ ಭಾರಿಯೂ ಅಡಕೆ ಕೃಷಿಕನಿಗೆ ಆತಂಕದ ದಿನಗಳನ್ನು ಎದುರು ನೋಡುವಂತೆ ಮಾಡಿದೆ.

See also  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ

ಸುಳ್ಯ ತಾಲೂಕಿನಲ್ಲಿ ಪ್ರತಿ ವರ್ಷ ಉತ್ತಮ ಮಳೆ ದೊರೆಯುವ ಕಾರಣ ಪ್ರತಿ ವರ್ಷ ಏಪ್ರಿಲ್ ತಿಂಗಳ ಬಳಿಕ ಅಡಕೆ ತೋಟಕ್ಕೆ ನೀರು ಹಾಯಿಸುವ ಪ್ರಸಂಗ ಬರುವುದಿಲ್ಲ. ಆದರೆ ಈ ವರ್ಷ ಮಳೆ ಇಲ್ಲದೆ ಜೂನ್ ತಿಂಗಳಲ್ಲೂ ತೋಟಕ್ಕೆ ನೀರು ಹಾಕಬೇಕಾದ ಪ್ರಸಂಗ ಎದುರಾಗಿದೆ. ತೋಟಕ್ಕೆ ನೀರೂ ಇಲ್ಲ ಜೊತೆಗೆ ಅಡಕೆಗೆ ವಿಪರೀತ ಸೆಕೆಯನ್ನು ತಾಳಲು ಆಗುವುದಿಲ್ಲ. ಈಗ ಹೆಚ್ಚಿರುವ ಉಷ್ಣಾಂಶ ಮತ್ತು ವಾತಾವರಣದ ಏರು ಪೇರಿನಿಂದಾಗಿ ಎಳೆ ಅಡಕೆ ಉದುರುತಿದೆ. ನೀರಿನ ಅಭಾವ ಮತ್ತು ವಿದ್ಯುತ್ ಸಮಸ್ಯೆ ನೀರು ಹಾಯಿಸಲಾಗದೆ ತೋಟಗಳು ಒಣಗಿ ಹೋಗಿದೆ ಎನ್ನುತ್ತಾರೆ ಕೃಷಿಕರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು