ಬೆಳ್ತಂಗಡಿ: ಐಷಾರಾಮಿ ಕಾರೊಂದರಲ್ಲಿ ಕೊಟ್ಟಿಗೆಹಾರದಿಂದ ತಾಲೂಕಿನ ಚಾರ್ಮಾಡಿ ಘಾಟಿ ಮೂಲಕ ಉಜಿರೆ ಕಡೆಗೆ ಅಕ್ರಮವಾಗಿ 6 ಗೋವುಗಳನ್ನು ಸಾಗಾಟ ಮಾಡುತಿದ್ದಾಗ ಕಾರು ಮುಂಡಾಜೆಯ ಸನ್ಯಾಸಿಕಟ್ಟೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದೆ. ಇದರಿಂದ ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಸಿಟ್ಟ 5 ದನಗಳು ಮೃತ್ಯುವಶವಾಗಿರುವ ಘಟನೆ ಶುಕ್ರವಾರ ನಡೆದಿದೆ.
ಒಂದು ದನ ಬದುಕಿದ್ದು ಆದರೆ ಗಂಭೀರ ಗಾಯಗೊಂಡಿದೆ.
ಗೋ ಕಳ್ಳರು ವಿಷವಿಟ್ಟ ಶಂಕೆ ಕುರುಹು ಪತ್ತೆ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳಿಗೆ ಪ್ರಜ್ಞೆ ತಪ್ಪಿಸಿವ ಸಲುವಾಗಿ ಬ್ರೇಡ್ ನಲ್ಲಿ ವಿಷಕಾರಿ ವಸ್ತುಗಳನ್ನು ತಿನ್ನಿಸಿರುವ ಶಂಕೆ ಮೂಡುತಿದ್ದು ಕಾರಿನಲ್ಲಿ ಬ್ರೇಡ್ ಪ್ಯಾಕೇಟ್ ಪತ್ತೆಯಾಗಿದೆ.
ಅಕ್ರಮ ಗೋ ಸಾಗಾಟಕ್ಕೆ ಬೆಂಗಳೂರು ನೊಂದಣಿ ಕಾರು
ಅಕ್ರಮ ಗೋ ಸಾಗಾಟಕ್ಕೆ ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋಟ್ಸ್ ಕಾರು (ಎಂ05 ಒಕೆ 4824) ಬೆಂಗಳೂರು ನೊಂದಣಿಯ ಕಾರನ್ನು ಬಳಸಿದ್ದು ಕಾರು ಕಳ್ಳತನ ಮಾಡಿರುವ, ನಕಲಿ ನೊಂದಣಿ ಪ್ಲೇಟ್ ಹಾಕಿರುವ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡಿದೆ.
ಉಪಯೋಗವಿಲ್ಲದ ಚಕ್ ಪೋಸ್ಟ್ ಗಳು:
ಈ ಘಟನೆ ಮುಂಜಾನೆ 5.30ರ ವೇಳೆಗೆ ನಡೆದಿದ್ದು ಚಾರ್ಮಾಡಿ ಚಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಣೆ ಮಾಡಬೇಕಾಗಿದ್ದು ಇವೆಲ್ಲದರ ನಡುವೇ ಕಾರಿನಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುವ ಹಾಗೂ ಇತರೆ ಅಕ್ರಮ ಚಟುವಟಿಕೆಗಳು ನಡೆಯುತಿದ್ದರೂ ತೀವ್ರ ತಪಾಸಣೆ ನಡೆಸದೇ ಇರೋದು ಇಲ್ಲಿನ ತಪಾಸಣಾ ವೈಫಲ್ಯವನ್ನು ಎತ್ತಿ ತೋರಿಸುವಂತಿದೆ. ಇನ್ನಾದರು ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ.
ಅಕ್ರಮ ಗೋ ಸಾಗಾಟಗಾರರು ಪರಾರಿ
ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಕಾರು ಕಮರಿಗೆ ಉರುಳುತಿದ್ದಂತೆ ಕಾರಿನಲ್ಲಿದ್ದ ಅಕ್ರಮ ಗೋ ಸಾಗಾಟಗಾರರು ಪರಾರಿಯಾಗಿದ್ದು ಕಾರು ಸಂಪೂರ್ಣ ನಜ್ಜು ನುಜ್ಜಾಗಿದೆ. ಗಾಯಗೊಂಡಿರುವ ಹಸುವಿಗೆ ಚಿಕಿತ್ಸೆ ನೀಡಲಾಗಿದೆ. ಇನ್ನುಳಿದ 5 ಗೋವುಗಳನ್ನು ಮುಂಡಾಜೆಯ ಸ್ಮಶಾನದಲ್ಲಿ ದಫನ ಮಾಡಲಾಗಿದೆ.
ಕಾರಿನ ನೋಂದಣಿ ಸಂಖ್ಯೆಯನ್ನು ಪೋಲಿಸರು ಪರಿಶೀಲಿಸಿದ್ದು ಅದು ನಕಲಿಯಾಗಿದ್ದು, ಕಾರಿನ ಚಾಸ್ಸಿ ನಂಬರ್ ಆಧಾರದಲ್ಲಿ ವಾಹನ ಮಾಲೀಕನ ಸುಳಿವು ಸಿಕ್ಕಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೋಲಿಸರು ತಂಡವನ್ನು ರಚಿಸಿದ್ದಾರೆ. ಪ್ರಕರಣ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದೆ.