ಬಂಟ್ವಾಳ: ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿದ್ದ ಬಂಟ್ವಾಳ ರೋಟರಿ ಕ್ಲಬ್ 2018-19 ನೇ ಸಾಲಿನ ಸಾಧನೆಗಾಗಿ 22 ಪ್ರಶಸ್ತಿಗಳನ್ನು ಗೆದ್ದುಕೊಂಡು ತನ್ನ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.
ನಾಲ್ಕು ಕಂದಾಯ ಜಿಲ್ಲೆಗಳನ್ನು ಹೊಂದಿರುವ ರೋಟರಿ ಜಿಲ್ಲೆ 3181ರಲ್ಲಿ ವಿಶೇಷ ಸಾಧನೆ ಮಾಡಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ. ಬಂಟ್ವಾಳ ರೋಟರಿ ಕ್ಲಬ್ ಇದೇ ಮೊದಲಬಾರಿಗೆ ಇಷ್ಟೊಂದು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು ಸಮಗ್ರ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ವರ್ಷಪೂರ್ತಿ ಸಮಾಜಮುಖಿ ಕಾರ್ಯಗಳೊಂದಿಗೆ ಜನಮನ್ನಣೆ ಪಡೆದುಕೊಂಡಿದ್ದ ರೋ. ಮಂಜುನಾಥ ಆಚಾರ್ಯ ನೇತೃತ್ವದ ಬಂಟ್ವಾಳ ರೋಟರಿಕ್ಲಬ್ ತನ್ನ ಸುವರ್ಣ ವರ್ಷಕ್ಕೆ ಪ್ರಶಸ್ತಿಗಳ ಗರಿಯನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಸದಸ್ಯರಲ್ಲಿ ಸುವರ್ಣ ವರ್ಷಾಚರಣೆಯ ಸಂಭ್ರಮವನ್ನೂ ಇಮ್ಮಡಿ ಗೊಳಿಸಿದೆ.
ಶನಿವಾರ ಸಂಜೆ ಮಂಗಳೂರಿನ ಕುಲಶೇಖರದ ಕೋರ್ಡೆಲ್ ಚರ್ಚ್ ಹಾಲ್ ನಲ್ಲಿ ನಡೆದ “ಸಂತೃಪ್ತಿ- 2019” ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ರೋಟರಿ ಜಿಲ್ಲಾ ಗವರ್ನರ್ ಅವರಿಂದ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಪ್ರಸ್ತುತ ವರ್ಷ ಬಂಟ್ವಾಳ ರೋಟರಿ ಕ್ಲಬ್ ಸುವರ್ಣ ವರ್ಷದ ಸಂಭ್ರಮದಲ್ಲಿದ್ದು, ಕ್ಲಬ್ ನ ಕ್ರಿಯಾಶೀಲ ಅಧ್ಯಕ್ಷ ರೋ. ಮಂಜುನಾಥ ಆಚಾರ್ಯ ಅವರಿಗೆ ಕ್ಲಬ್ ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಗಿತ್ತು.
ಕ್ಲಬ್ ನ ಹಿರಿಯ ನಾಯಕರು ಹಾಗೂ ಸದಸ್ಯರು ತನ್ನ ಮೇಲೆ ಇಟ್ಟಿರುವ ನಂಬಿಕೆಗೆ ಎಳ್ಳಷ್ಟು ಚ್ಯುತಿ ಬಾರದಂತೆ ಮಂಜುನಾಥ ಆಚಾರ್ಯ ಕ್ಲಬ್ ನ್ನು ಒಂದು ವರ್ಷದ ಅವಧಿಯಲ್ಲಿ ಸಾಧನೆಯ ಪಥದಲ್ಲಿ ಕೊಂಡೊಯ್ದ ರೀತಿ ಅಮೋಘವಾಗಿತ್ತು. ತಾಲೂಕಿನ ವಿದ್ಯಾರ್ಥಿಗಳಿಗಾಗಿ ಕಲಿಕೆಯ ಹೊಸ ಅವಕಾಶಗಳಿಗೆ ವೇದಿಕೆ ಒದಗಿಸಿದರು, ಸಮಾಜ ಗುರುತಿಸುವಂತಹ ಕಾರ್ಯಗಳನ್ನು ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು, ಕ್ಲಬ್ ನ ಸದಸ್ಯರೇ ಹೆಮ್ಮೆ ಪಡುವಂತೆ ಬಂಟ್ವಾಳ ರೋಟರಿ ಕ್ಲಬ್ ಅನ್ನು ಸಾಧನೆಯ ಉತ್ತುಂಗಕ್ಕೆ ಏರಿಸಿದರ ಫಲವಾಗಿ ಅರ್ಹವಾಗಿಯೇ ಪ್ರಶಸ್ತಿಗಳು ಬಂಟ್ವಾಳ ರೋಟರಿ ಕ್ಲಬ್ ಅನ್ನು ಅರಸಿ ಬಂದಿದ್ದು ರೋಟರಿ ಇತಿಹಾಸಲ್ಲಿಯೇ ಮಂಜುನಾಥ ಆಚಾರ್ಯ ನೇತೃತ್ವದ ಬಂಟ್ವಾಳ ರೋಟರಿ ಕ್ಲಬ್ ತನ್ನ ಕೀರ್ತಿ ಪತಾಕೆಯನ್ನು ಹಾರಿಸಿ, ರೋಟರಿ ಸದಸ್ಯರ ಹಿರಿಮೆ ಹೆಚ್ಚಿಸಿದೆ.