News Kannada
Friday, December 09 2022

ಕರಾವಳಿ

ವಿಶ್ವ ಯೋಗ ದಿನದ ವಿಶೇಷ: ಸುಳ್ಯದ ಗ್ರಾಮಗಳಲ್ಲಿ ಸಂಚಾರಿ ಯೋಗ ತರಬೇತಿ ಶಿಬಿರ

Photo Credit :

ವಿಶ್ವ ಯೋಗ ದಿನದ ವಿಶೇಷ: ಸುಳ್ಯದ ಗ್ರಾಮಗಳಲ್ಲಿ ಸಂಚಾರಿ ಯೋಗ ತರಬೇತಿ ಶಿಬಿರ

ಸುಳ್ಯ: ಜಗತ್ತಿಗೆ ಭಾರತ ನೀಡಿದ ಅತ್ಯಂತ ಶ್ರೇಷ್ಠ ಕೊಡುಗೆ ಯೋಗ. ಯೋಗದ ಮೂಲಕ ಇಡೀ ಜಗತ್ತಿಗೆ ಆರೋಗ್ಯದ ಪಾಠ ಹೇಳಿದ ಹಿರಿಮೆ ಭಾರತಕ್ಕಿದೆ. ಯೋಗದ ಮಹತ್ವವನ್ನು ಒಪ್ಪಿಕೊಂಡು ಯೋಗ ದಿನಾಚರಣೆಯ ಮೂಲಕ ಜಗತ್ತೇ ಒಂದಾಗುತ್ತಿದೆ.

2015ರಿಂದ ಜೂನ್ 21ನ್ನು ವಿಶ್ವ ಯೋಗದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ವಿಶ್ವದ ಬಹುತೇಕ ಎಲ್ಲಾ ದೇಶಗಳಲ್ಲೂ ಯೋಗ ದಿನವನ್ನು ಆಚರಿಸಿ ಎಲ್ಲರೂ ಒಂದಾಗಿ ಒಟ್ಟಾಗಿ ಯೋಗ ಮಾಡುತ್ತಾರೆ. ಇದೀಗ ಯೋಗ ಶಿಕ್ಷಣ ಗ್ರಾಮೀಣ ಪ್ರದೇಶದಲ್ಲಿಯೂ ದೊರೆಯಬೇಕು ಎಂಬ ಕಲ್ಪನೆಯೊಂದಿಗೆ ಸುಳ್ಯದಲ್ಲಿ ಒಂದು ಹೊಸ ಪ್ರಯೋಗ ಆರಂಭವಾಗಿದೆ. ಅಂದರೆ ಪ್ರತಿ ಗ್ರಾಮಗಳಿಗೆ ತೆರಳಿ ಅಲ್ಲಿ ಶಿಬಿರಗಳನ್ನು ನಡೆಸಿ ಜನರಿಗೆ ಯೋಗ ಶಿಕ್ಷಣ ನೀಡುವುದು ಇದರ ಉದ್ದೇಶ. ಯೋಗ ಗುರು ಸಂತೋಷ್ ಮುಂಡಕಜೆ ಈ ರೀತಿಯ ಪ್ರಯೋಗದ ಮೂಲಕ ಗಮನ ಸೆಳೆದಿದ್ದಾರೆ. ಐದನೇ ವಿಶ್ವ ಯೋಗ ದಿನಾಚರಣೆಯ ಸಂದರ್ಭದಲ್ಲಿ ಈ ಯುವಕನ ಪ್ರಯೋಗವು ಹೊಸ ನಿರೀಕ್ಷೆ ಹುಟ್ಟಿಸಿದೆ.

ಏನಿದು ಗ್ರಾಮ ಗ್ರಾಮಗಳಲ್ಲಿ ಯೋಗ.?
ಸುಳ್ಯ ತಾಲೂಕಿನ ಪ್ರತಿ ಮನೆಗಳಿಗೂ ಯೋಗ ಶಿಕ್ಷಣ ತಲುಪಬೇಕು ಎಂಬುದು ಇದರ ಹಿಂದಿರುವ ಯೋಚನೆ. ಅದಕ್ಕಾಗಿ ಸುಳ್ಯ ತಾಲೂಕಿನ ಪ್ರತಿ ಗ್ರಾಮಗಳಿಗೆ ತೆರಳಿ ಅಲ್ಲಿ 15 ದಿನಗಳ ಕಾಲ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು. ಗ್ರಾಮ ಪಂಚಾಯಿತಿ ಸಭಾಭವನ, ದೇವಸ್ಥಾನ, ಶಾಲೆ ಮತ್ತಿತರ ಕೇಂದ್ರಗಳನ್ನು ಆಯ್ಕೆ ಮಾಡಿ ಅಲ್ಲಿ ಆಸಕ್ತರಿಗೆ ಪ್ರತಿ ದಿನ ಬೆಳಗ್ಗೆ ಒಂದು ಗಂಟೆ ಯೋಗ ತರಗತಿ ನಡೆಸಲಾಗುತ್ತದೆ. ಪ್ರತಿ ದಿನ ಎರಡು ಅಥವಾ ಮೂರು ಆಸನಗಳು ಮಾಡುವ ವಿಧಾನ ಅದರ ಉಪಯೋಗ, ಆರೋಗ್ಯ ವೃದ್ಧಿಗೆ ಹೇಗೆ ಸಹಕಾರಿ ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಆರೋಗ್ಯ ಕಾಪಾಡಲು ಬೇಕಾದ ಅತೀ ಅಗತ್ಯವಾದ ಸುಮಾರು 30 ಆಸನಗಳನ್ನು 15 ದಿನಗಳ ಶಿಬಿರದಲ್ಲಿ ತಿಳಿಸಿಕೊಡಲಾಗುತ್ತದೆ. ಅಲ್ಲದೆ ಪ್ರಾಣಾಯಾಮ, ಮುದ್ರೆಗಳು, ನೈತಿಕ ಶಿಕ್ಷಣಗಳನ್ನು ಬೋಧಿಸಲಾಗುತ್ತದೆ. ಉಬರಡ್ಕ ಗ್ರಾಮದಲ್ಲಿ ಈಗಾಗಲೇ 15 ದಿನಗಳ ಯೋಗ ತರಗತಿಗಳು ಪೂರ್ತಿಗೊಂಡಿದೆ. ಮುಂದೆ ಮರ್ಕಂಜ, ಸುಳ್ಯ, ಮಂಡೆಕೋಲು ಮತ್ತಿತರ ಕಡೆಗಳಿಂದಲೂ ಯೋಗ ತರಗತಿಗಳನ್ನು ನಡೆಸಿಕೊಡುವಂತೆ ಕರೆ ಬಂದಿದೆ. ವರ್ಷಪೂರ್ತಿ ಈ ರೀತಿ ತರಗತಿ ಕೊಡುವ ಉದ್ದೇಶ ಇದೆ. ಯಾರು ಕರೆಯುತ್ತಾರೋ ಅಲ್ಲಿಗೆ ತೆರಳಿ ಯೋಗ ಕಲಿಸಲು ಸಿದ್ಧ ಎಂದು ಸಂತೋಷ್ ಹೇಳುತ್ತಾರೆ.

ಯೋಗದ ಜೊತೆ ಬೆಳೆದ ಸಂತೋಷ
ತನ್ನ ನಾಲ್ಕನೇ ತರಗತಿಯಿಂದ ಯೋಗ ಶಿಕ್ಷಣ ಪಡೆಯಲು ಆರಂಭಿಸಿದ ಸಂತೋಷ್ ಕಳೆದ 16 ವರ್ಷಗಳಿಂದ ನಿರಂತರ ಯೋಗಾಭ್ಯಾಸ ಮಾಡುವುದರ ಜೊತೆಗೆ ಹಲವಾರು ಮಂದಿಗೆ ಯೋಗ ಪಾಠ ಕಲಿಸಿದ್ದಾರೆ. ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಯೋಗ ಶಿಕ್ಷಕರಾಗಿರುವ ಸಂತೋಷ್ ವಿವಿಧ ಕಡೆಗಳಲ್ಲಿ ನಡೆಸಿದ ಯೋಗ ತರಗತಿಗಳ ಮೂಲಕ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿಗೆ ಯೋಗ ಕಲಿಸಿಕೊಟ್ಟಿದ್ದಾರೆ. ದೊಡ್ಡ ತೋಟ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿದ್ದಾಗ ಯೋಗ ಕಲಿಯಲು ಆರಂಭಿಸಿದರು. ಪಿ.ಪ್ರೇಮಲತಾ ಯೋಗ ಶಿಕ್ಷಕರಾಗಿದ್ದರು. ಆರನೇ ತರಗತಿಯಲ್ಲಿ ವಿಭಾಗಮಟ್ಟದಲ್ಲಿ, ಎಂಟನೇ ತರಗತಿಯಲ್ಲಿ ರಾಷ್ಟ್ರಮಟ್ಟದಲ್ಲಿ, 10ನೇ ತರಗತಿಯಲ್ಲಿ ಮತ್ತು ಪಿಯುಸಿಯಲ್ಲಿದ್ದಾಗ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಡಿಪ್ಲೋಮಾ ಓದುತ್ತಿದ್ದಾಗ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದರು.

See also  ಮೆಹಂದಿ ಕಾರ್ಯಕ್ರಮದಲ್ಲಿ ನೃತ್ಯ: ಪ್ರಕರಣ ದಾಖಲು

60ಕ್ಕೂ ಹೆಚ್ಚು ಆಸನಗಳ ಪ್ರವೀಣ
ಮುಂಡಕಜೆಯ ರಾಘವ ಮಣಿಯಾಣಿ-ರಾಜೀವಿ ದಂಪತಿಗಳ ಪುತ್ರ ಸುಳ್ಯದಲ್ಲಿ ಮೆಕ್ಯಾನಿಕ್ ಆಗಿರುವ 24 ವರ್ಷದ ಸಂತೋಷ್ ಎಂಟನೇ ತರಗತಿಯವರೆಗೆ ಮಾತ್ರ ಗುರುಗಳಲ್ಲಿ ಯೋಗ ಕಲಿತಿದ್ದರು. ಬಳಿಕ ಪುಸ್ತಕಗಳನ್ನು ಓದಿ, ಪ್ರದರ್ಶನಗಳನ್ನು ನೋಡಿಯೇ ಯೋಗವನ್ನು ಕರಗತ ಮಾಡಿಕೊಂಡಿದ್ದಾರೆ. 60ಕ್ಕೂ ಹೆಚ್ಚು ಆಸನಗಳು, ಪ್ರಾಣಾಯಾಮ, ಸುಮಾರು 40 ಮುದ್ರೆಗಳು, ಅತಿ ವಿಶಿಷ್ಠವಾದ ಜಲನೇತಿ ಕ್ರಿಯೆ, ಜಲಕಪಾಲ ಭಾತಿ, ನೌಳಿಯನ್ನೂ ಮಾಡುತ್ತಾರೆ. ಕಲಿಸುವವರಿಲ್ಲ ಎಂಬ ಕಾರಣಕ್ಕೆ ಯಾರೂ ಯೋಗದಿಂದ ದೂರ ಉಳಿಯಬಾರದು ಗ್ರಾಮೀಣ ಪ್ರದೇಶದ ಜನರಿಗೂ ಯೋಗ ಶಿಕ್ಷಣ ದೊರೆಯಬೇಕು ಎಂಬ ದೃಷ್ಠಿಯಿಂದ ಸಂಚಾರಿ ಯೋಗವನ್ನು ಪ್ರಾರಂಭಿಸಿದ್ದೇನೆ ಎನ್ನುತ್ತಾರೆ ಸಂತೋಷ್.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು