ಬೆಳ್ತಂಗಡಿ: ಒಳ್ಳೆಯ ಕೆಲಸ ಮಾಡಿದರೆ ಉತ್ತಮ ಪ್ರತಿಫಲ ಸಿಗುತ್ತದೆ. ಕೆಟ್ಟ ಕೆಲಸ ಮಾಡಿದರೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ವೇದ, ಶಾಸ್ತ್ರ, ಪುರಾಣಗಳಲ್ಲಿ ಸಾರ್ಥಕ ಬದುಕಿಗೆ ಬೇಕಾದ ಅನುಭವಾಮೃತ ನೀಡಲಾಗಿದೆ. ದೇವರಿಗೆ ಎಲ್ಲರೂ ಸಮಾನ. ಯಾರ ಮೇಲೆಯೂ ರಾಗ-ದ್ವೇಷ ಇರುವುದಿಲ್ಲ ಎಂದು ಶೃಂಗೇರಿಯ ಶ್ರೀ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಅವರು ಗುರುವಾರ ವೇಣೂರಿನಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಿಲಾಮಯ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿ ಆಶೀರ್ವದಿಸಿದರು.
ಅನಾದಿ ಕಾಲದಿಂದ ಅನುಸರಿಸಿಕೊಂಡು ಬಂದ ಸನಾತನ ಧರ್ಮ ಮತ್ತು ಸಂಸ್ಕೃತಿಯ ಪರಂಪರೆಯನ್ನು ನಾವು ಮುಂದುವರಿಸಬೇಕು. ಊರಿನ ದೇವಸ್ಥಾನವನ್ನು ಸುಸ್ಥಿತಿಯಲ್ಲಿಟ್ಟು ನಿರಂತರ ದೇವರ ಪೂಜೆ, ಉತ್ಸವ ಹಾಗೂ ಆರಾಧನೆಯನ್ನು ಶಾಸ್ತ್ರೋಕ್ತವಾಗಿ ಮಾಡಿದರೆ ದೇವರು ಸಂತುಷ್ಟರಾಗಿ ಎಲ್ಲರನ್ನೂ ಅನುಗ್ರಹಿಸುತ್ತಾರೆ. ಊರಿನ ಸರ್ವತೋಮುಖ ಪ್ರಗತಿಯಾಗುತ್ತದೆ. ಭಗವಂತನ ಸೇವೆ, ಗುರುಗಳ ಸೇವೆ ಮತ್ತು ಸಮಾಜ ಸೇವೆಯನ್ನು ಎಲ್ಲರೂ ತಮ್ಮ ಶಕ್ತ್ಯಾನುಸಾರ ಮಾಡಬೇಕು. ದೇವನೊಬ್ಬ ನಾಮ ಹಲವು ಎಂಬಂತೆ ನಾವು ದೇವರನ್ನು ವಿವಿಧ ಹೆಸರಿನಲ್ಲಿ, ಅನೇಕ ರೂಪಗಳಲ್ಲಿ ಆರಾಧನೆ ಮಾಡುತ್ತೇವೆ. ಧರ್ಮದ ಅನುಷ್ಠಾನದೊಂದಿಗೆ ದೇವರಲ್ಲಿ ದೃಢ ಭಕ್ತಿ ಮಾಡಿದರೆ ಅವರ ಅನುಗ್ರಹಕ್ಕೆ ನಾವು ಪಾತ್ರರಾಗುತ್ತೇವೆ. ನಮಗೆ ಯಶಸ್ಸು, ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಶ್ರೀಗಳು ನುಡಿದರು.
ಪ್ರತಿಯೊಬ್ಬರಿಗೂ ಭಗವಂತನಲ್ಲಿ ಶ್ರದ್ಧೆ, ಭಕ್ತಿ ಇರಬೇಕು. ಭಗವಂತನ ಆರಾಧನೆಯಿಂದ ಅನುಗ್ರಹ ಪ್ರಾಪ್ತಿ. ದೇವಸ್ಥಾನವನ್ನು ಕಡೆಗಣಿಸಿದರೆ ಊರಿಗೆ ಸಂಕಷ್ಟ ಅದಕ್ಕಾಗಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಭಗವಂತನ ಆರಾಧನೆ ಮಾಡಿದಾಗ ಇಡೀ ಊರೇ ಅಭಿವೃದ್ಧಿಯಾಗಲು ಸಾಧ್ಯ. ಸಮಸ್ತ ಪ್ರಪಂಚದ ದೇಶವನ್ನು ಪ್ರೀತಿಸುವ ಏಕೈಕ ದೇಶ ಭಾರತ, ಇದಕ್ಕೆ ಕಾರಣ ಸನಾತನ ಹಿಂದೂ ಧರ್ಮದಿಂದಾಗಿ ಸಂಸ್ಕಾರಗಳು ಬೆಳೆದ ಕಾರಣ ಈ ಭಾವನೆ ಭಾರತೀಯರಲ್ಲಿದೆ. ನಮ್ಮ ಬದುಕನ್ನು ಸಜ್ಜನಿಕೆಯಿಂದ ನಡೆಸಿದಾಗ ಗೌರವ ಪ್ರಾಪ್ತಿಯಾಗುತ್ತದೆ. ಪ್ರತಿಯೊಬ್ಬರೂ ಭಗವಂತನ ಸೇವೆ, ಗುರುಸೇವೆ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಊರ ಭಕ್ತರು ತಮ್ಮ ಸಂಪೂರ್ಣ ಇಚ್ಚಾಶಕ್ತಿಯಿಂದ ಮತ್ತು ಭಕ್ತಿಯಿಂದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿದರೆ ನಮ್ಮ ನಿರೀಕ್ಷೆಗಿಂತ ವೇಗವಾಗಿ ಮತ್ತು ಸುಂದರವಾಗಿ ದೇವಸ್ಥನ ನಿರ್ಮಾಣವಾಗಲು ಸಾಧ್ಯ. ಅಂತಹ ನಿತ್ಯ ಸ್ವರೂಪಿ ಭಗವಂತನ ಸೇವೆಗೆ ಅಜಿಲ ಸೀಮೆಯ ಎಲ್ಲರೂ ಶ್ರಮಿಸಿದಾಗ ಮಹಾಲಿಂಗೇಶ್ವರ ದೇವಸ್ಥಾನವು ಅತೀಶೀಘ್ರವಾಗಿ ನಿರ್ಮಾಣಗೊಳ್ಳುತ್ತದೆ ಎಂದು ಆಶೀರ್ವದಿಸಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೆ ಪ್ರಭುಗಳು. ಹೃದಯ ಶ್ರೀಮಂತಿಕೆಯೊಂದಿಗೆ ದೇವರ ಸೇವೆ ಹಾಗೂ ಸಮಾಜ ಸೇವೆ ಮಾಡಬೇಕು. ಹೃದಯ ಶ್ರೀಮಂತಿಕೆಯಿಂದ ನಾವು ಎಲ್ಲರ ಪ್ರೀತಿ, ವಿಶ್ವಾಸ ಮತ್ತು ಗೌರವಕ್ಕೆ ಪಾತ್ರರಾಗುತ್ತೇವೆ.
ಸಾರ್ಥಕ ಬದುಕಿಗೆ ಧಾರ್ಮಿಕ ಸಂದೇಶ ನೀಡುವುದೇ ದೇವಾಲಯಗಳ ಉದ್ದೇಶವಾಗಿದೆ. ದೇವರ ಘನತೆ, ಗೌರವಕ್ಕೆ ಸರಿಯಾದ ದೇವಾಲಯ ನಿರ್ಮಾಣ ಮಾಡಬೇಕು. ಇತ್ತೀಚೆಗೆ ಜೀರ್ಣೋದ್ಧಾರಗೊಂಡ ದೇವಾಲಯಗಳು ಆಕರ್ಷಕ ವಿನ್ಯಾಸ ಹಾಗೂ ಮರದ ಕೆತ್ತನೆಯೊಂದಿಗೆ ಉತ್ತಮವಾಗಿ ಮೂಡಿ ಬರುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ದೇವರನ್ನು ಹೃದಯದಲ್ಲಿ ಇಟ್ಟಾಗ ಅತಿಕ್ರಮಣ ಮತ್ತು ಅಹಂಕಾರ ನಡೆಯುವುದಿಲ್ಲ. ಭಗವಂತನ ಕಲ್ಪನೆಯನ್ನು ದೇವಾಲಯ ಕೊಡುತ್ತದೆ. ಧಾರ್ಮಿಕ ಕ್ಷೇತ್ರಗಳು ಊರಿನಲ್ಲಿ ಪ್ರಧಾನವಾಗಬೇಕು. ಅದಕ್ಕಾಗಿ ಊರಿನ ಪ್ರತಿಯೊಬ್ಬರೂ ಭಗವಂತನನ್ನು ಹೃದಯದಲ್ಲಿ ಇಟ್ಟಾಗ ದೇವಾಲಯ ಜೀರ್ಣೋದ್ಧಾರ ಕಷ್ಟದ ಮಾತಲ್ಲ ಎಂದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಕಳೆದ 70ವರ್ಷಗಳಿಂದ ನೋಡಿದ್ದೇವೆ. ಶ್ರೀಸಾಮಾನ್ಯರು ಜೀವನಶೈಲಿ, ಆರ್ಥಿಕ ಸ್ಥಿತಿಯನ್ನು ಬದಲಾಯಿಸಿದ್ದಾರೆ. ಭಕ್ತಿ, ಶ್ರದ್ಧೆ ಹೆಚ್ಚಿದಾಗ ಪ್ರಜೆಗಳೇ ಪ್ರಭುಗಳಾಗಿ ಸುಂದರ ಶಿಲಾಮಯ ದೇವಸ್ಥಾನಗಳ ನಿರ್ಮಾಣ ಮಾಡಬಹುದು. ದೇವಾಲಯದಲ್ಲಿ ಶಿಲಾಮಯ ಹೆಚ್ಚಾಗಬೇಕಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ಮೂಲಕ ಪುರಾತನ, ಮತ್ತು ಶಿಲಾಮಯ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡುವ ಕಾರ್ಯ ಮಾಡುತ್ತಿದ್ದು ಅದರ ಮೂಲ ಚಿತ್ರಣವನ್ನು ಉಳಿಸುವ ಕಾರ್ಯ ಮಾಡುತ್ತಿದೆ. ಈಗಾಗಲೇ ಸುಮಾರು 248 ದೇವಸ್ಥಾನಗಳ ಜೀರ್ಣೋದ್ಧಾರವಾಗಿದೆ ಎಂದರು
ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಅಯನಾ ವಿ. ರಮಣ್ ಮತ್ತು ಬಳಗದವರು ಸುಶ್ರಾವ್ಯವಾಗಿ ಪ್ರಾರ್ಥನೆ ಹಾಡಿದರು. ಎ. ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಜೀರ್ಣೋದ್ಧಾರ ಕಾರ್ಯದ ಪ್ರಗತಿ ಸಾದರ ಪಡಿಸಿದರು.
ಶಾಸಕ ಹರೀಶ್ ಪೂಂಜಾ, ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ, ಮಾಜಿ ಮುಖ್ಯ ಸಚೇತಕ ಕೆ. ವಸಂತ ಬಂಗೇರ, ಉದ್ಯಮಿ ಶ್ರೀಪತಿ ಭಟ್, ಉದ್ಯಮಿ ಸುರೇಶ್ ಶೆಟ್ಟಿ ಗುಡ್ಮೆ, ಉದ್ಯಮಿ, ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮದ ಧರ್ಮದರ್ಶಿ ಬಿ. ರಘುನಾಥ ಸೋಮಯಾಜಿ, ಅದ್ಯಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಭಂಡಾರಿ, ಮತ್ತು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿಯ ಕಾಯಾಧ್ಯಕ್ಷ ಪಿ. ಧರಣೇಂದ್ರ ಕುಮಾರ್ ವಂದಿಸಿದರು. ಸುಂದರ ಹೆಗ್ಡೆ ಮತ್ತು ಕಿಶೋರ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸ್ವಾಮೀಜಿಗಳನ್ನು, ಡಾ. ಹೆಗ್ಗಡೆಯವರನ್ನು, ಅತಿಥಿ ಗಣ್ಯರನ್ನು ವಿಶೇಷ ಆಕರ್ಷಕ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.