News Kannada
Tuesday, September 27 2022

ಕರಾವಳಿ

ಜಲಸಂರಕ್ಷಣೆಗೆ ಹೊಸ ಪಾಠ ಹೇಳುವ ಸ್ನೇಹ ಶಾಲೆ - 1 min read

Photo Credit :

ಜಲಸಂರಕ್ಷಣೆಗೆ ಹೊಸ ಪಾಠ ಹೇಳುವ ಸ್ನೇಹ ಶಾಲೆ

ಸುಳ್ಯ: ಶಾಲೆಯ ತರಗತಿಗಳು ಆರಂಭಗೊಂಡು ಶಿಕ್ಷಕರು ಈ ವರ್ಷ ಕಲಿಸುವ ಸಿಲೆಬಸ್‍ನ ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಇಂಗು ಗುಂಡಿಯನ್ನು ಖಡ್ಡಾಯವಾಗಿ ಮಾಡಬೇಕು ಎಂಬ ಸೂಚನೆ ನೀಡಲಾಗುತ್ತದೆ. ಹತ್ತು ದಿನದಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಯ ಸಮೀಪ ಮಳೆ ನೀರು ಇಂಗಿಸಲು ಒಂದು ಇಂಗು ಗುಂಡಿ ನಿರ್ಮಿಸಬೇಕು ವಿದ್ಯಾರ್ಥಿಗಳಿಗೆ ಹೀಗೊಂದು ಟಾಸ್ಕ್ ನ್ನು ನೀಡುವ ಮೂಲಕ ಸುಳ್ಯದ ಸ್ನೇಹ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜಲಸಂರಕ್ಷಣೆಯ ಹೊಸ ಪಾಠವನ್ನು ಬೋಧಿಸಲಾಗುತ್ತದೆ. ಶಾಲಾ ಪಠ್ಯ ಚಟುವಟಿಕೆಯಂತೆಯೇ ಇಂಗುಗುಂಡಿ ನಿರ್ಮಾಣ ಇಲ್ಲಿ ಪಠ್ಯ ವಿಷಯದಂತೆ ಸೇರ್ಪಡೆ ಮಾಡಲಾಗಿದೆ. ಮಕ್ಕಳಲ್ಲಿ ಜಲಸಂರಕ್ಷಣೆಯ ಜಾಗೃತಿ ಮೂಡಿಸುವ ವಿನೂತನ ಪಾಠ ಗಮನ ಸೆಳೆದಿದೆ.

ಇಂಗು ಗುಂಡಿ ನಿರ್ಮಾಣ ಹೇಗೆ..?
ಶಾಲೆಯ ಐದನೆಯ ತರಗತಿಯಿಂದ 10ನೇ ತರಗತಿವರೆಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಮನೆಯ ಸಮೀಪ ಹಿತ್ತಲಲ್ಲಿ ಎರಡು ಅಡಿ ಆಳ, ಎರಡು ಅಡಿ ಅಗಲ ಮತ್ತು ಎರಡು ಅಡಿ ಉದ್ದದ ಒಂದು ಇಂಗುಗುಂಡಿ ನಿರ್ಮಿಸಬೇಕು. ಬೇರೆಯವರ ಸಹಾಯ ಪಡೆಯದೆ ಖಡ್ಡಾಯವಾಗಿ ವಿದ್ಯಾರ್ಥಿಗಳೇ ಇಂಗು ಗುಂಡಿಯನ್ನು ನಿರ್ಮಾಣ ಮಾಡಬೇಕು. ಮಾತ್ರವಲ್ಲದೆ ಆ ಇಂಗು ಗುಂಡಿಯ ಸಮೀಪ ನಿಂತು ಪ್ರತಿ ವಿದ್ಯಾರ್ಥಿಯೂ ಒಂದು ಭಾವ ಚಿತ್ರ ತೆಗೆದು ವಾಟ್ಸಾಪ್ ಮೂಲಕ ಶಾಲೆಗೆ ಕಳಿಸಿಕೊಡಬೇಕು ಇದು ಟಾಸ್ಕ್. ಇದಕ್ಕೆ ಹತ್ತು ದಿನಗಳ ಕಾಲಾವಕಶವನ್ನೂ ನೀಡಲಾಗಿತ್ತು, ಪೇಟೆಯಲ್ಲಿ ವಾಸಿಸುವ ಮಕ್ಕಳಿಗೆ ಮನೆಯಲ್ಲಿ ಇಂಗು ಗುಂಡಿ ನಿರ್ಮಿಸಲು ಸ್ಥಳ ಇಲ್ಲದೇ ಇದ್ದಲ್ಲಿ ಅಂತಹಾ ಮಕ್ಕಳು ಶಾಲೆಯ ಸ್ಥಳದಲ್ಲಿ ಇಂಗು ಗುಂಡಿ ಮಾಡಬೇಕು. ದಿನ ಕಳೆದಂತೆ ಶಾಲೆಯ ವಾಟ್ಸಾಪ್ ನಂಬರ್ ಗೆ ಮಕ್ಕಳ ಇಂಗು ಗುಂಡಿಯ ಚಿತ್ರಗಳು ಬಂದು ತುಂಬಿತ್ತು. ಹೇಳಿದ ದಿನಕ್ಕಿಂತ ಮೊದಲೇ ಐದರಿಂದ 10ನೇಯ ತರಗತಿವರೆಗಿನ ಎಲ್ಲಾ 105 ವಿದ್ಯಾರ್ಥಿಗಳು ಇಂಗು ಗುಂಡಿ ನಿರ್ಮಾಣ ಮಾಡಿ ಚಿತ್ರಗಳನ್ನು ಕಳಿಸಿಕೊಟ್ಟಿದ್ದಾರೆ. ಈ ಪೋಟೋಗಳನ್ನು ಸೇರಿಸಿ ಬೃಹದಾಕಾರದ ಫ್ಲೆಕ್ಸ್ ಮುದ್ರಿಸಿ ಶಾಲೆಯಲ್ಲಿ ಪ್ರದರ್ಶಿಸಲಾಗಿದೆ. ಶಾಲೆಯ ಗೋಡೆಯಲ್ಲಿ ತಮ್ಮ ಮತ್ತು ಇಂಗು ಗುಂಡಿಗಳ ಚಿತ್ರ ನೋಡಿ ಪ್ರತಿ ದಿನ ಮಕ್ಕಳು ಸಂಭ್ರಮಿಸುವುದರ ಜೊತೆಗೆ ಶಾಲೆಗೆ ಆಗಮಿಸುವವರನ್ನು ಸೆಳೆಯುವ ಫ್ಲೆಕ್ಸ್ ಖುಷಿ ಕೊಡುತಿದೆ.

ಜನ್ಮದಿನದಂದು ಒಂದು ಗಿಡ ನೆಡಲು ಸೂಚನೆ:

ಸ್ನೇಹ ಶಾಲೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆಯವರ ಪುತ್ರ ಹಾಗು ಶಾಲೆಯ ಹಳೆಯ ವಿದ್ಯಾರ್ಥಿ ಅಕ್ಷರ ದಾಮ್ಲೆ ಈ ಹೊಸ ಆಶಯವನ್ನು ಮುಂದಿರಿಸಿದರು. ಅದರಂತೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಮತ್ತು ಶಿಕ್ಷಕರು ಮಕ್ಕಳಿಗೆ ಜಲ ಸಂರಕ್ಷಿಸಬೇಕಾದ ಅಗತ್ಯತೆ ಮತ್ತು ಇಂಗು ಗುಂಡಿಗಳ ಮಹತ್ವವನ್ನು ವಿವರಿಸಿದಾಗ ಮಕ್ಕಳು ಉತ್ಸಾಹದಿಂದ ಇಂಗು ಗುಂಡಿ ನರ್ಮಾಣ ಕಾರ್ಯದಲ್ಲಿ ತೊಡಗಿಕೊಂಡರು. ಮಕ್ಕಳೇ ಆ ಇಂಗುಗುಂಡಿಯನ್ನು ನಿರ್ವಹಣೆ ಮಾಡಬೇಕು ಮತ್ತು ಪ್ರತಿ ವರ್ಷ ಒಂದು ಇಂಗುಗುಂಡಿಯನ್ನು ನಿರ್ಮಾಣ ಮಾಡಬೇಕು. ಅಲ್ಲದೆ ತಮ್ಮ ಜನ್ಮ ದಿನದಂದು ಆ ಇಂಗುಗುಂಡಿಯ ಸಮೀಪದಲ್ಲಿ ಒಂದು ಗಿಡವನ್ನು ನೆಡಲು ಸೂಚನೆ ನೀಡಲಾಗಿದೆ. ಮುಂದೆ ಪ್ರತಿ ಮಕ್ಕಳ ಮನೆಗೆ ತೆರಳಿ ಇಂಗುಗುಂಡಿ ಮತ್ತು ಗಿಡವನ್ನು ನೋಡಬೇಕೆಂಬುದು ಶಾಲಾ ಆಡಳಿತ ಮಂಡಳಿಯ ಆಶಯ.

See also  ಕನ್ನಡದಲ್ಲಿ ಮಾತು ಆರಂಭಿಸಿ, ವೀರೇಂದ್ರ ಹೆಗ್ಗಡೆಯವರನ್ನು ಶ್ಲಾಘಿಸಿದ ಮೋದಿ

ಇಂಗುಗುಂಡಿಯಿಂದ ಶಾಲಾ ವಠಾರದಲ್ಲಿ ಜಲ ಸಮೃದ್ಧಿ:
ಇಂಗು ಗುಂಡಿಯ ಮೂಲಕ ಶಾಲಾ ಪರಿಸರವನ್ನು ಜಲಸಮೃದ್ಧವಾಗಿಸಿದ ಇತಿಹಾಸ ಸ್ನೇಹ ಶಾಲೆಯದ್ದು. 22 ವರ್ಷಗಳ ಹಿಂದೆ ಸ್ನೇಹ ಶಾಲೆ ಆರಂಭವಾದಾಗ ಸುತ್ತಲ ಮೂರು ಎಕ್ರೆ ಸ್ಥಳದಲ್ಲಿ ಅಲ್ಲಲ್ಲಿ ಇಂಗುಗುಂಡಿಗಳನ್ನು ನಿರ್ಮಾಣ ಮಾಡಿ ಸುತ್ತಲೂ ಮರ ಗಿಡಗಳನ್ನು ನೆಟ್ಟು ಬೆಳೆಸಿದರು. ಇಂಗುಗುಂಡಿಗಳ ಮೂಲಕ ಮಳೆಗಾಲ ಪೂರ್ತಿ ಭೂಮಿಗೆ ನೀರು ಇಂಗುತ್ತದೆ. ಇದರ ಪರಿಣಾಮವೆಂಬಂತೆ ಇಲ್ಲಿ ಬರದ ಬರೆ ಇದುವರೆಗೂ ಬಂದಿಲ್ಲ. ಕಡು ಬೇಸಿಗೆಯಲ್ಲೂ ಕೆರೆ ಮತ್ತು ಬಾವಿಯಲ್ಲಿ ನೀರು ಬತ್ತಿದ ಅಥವಾ ಕಡಿಮೆಯಾದ ಇತಿಹಾಸವಿಲ್ಲ ಸದಾ ನೀರು ತುಂಬಿರುತ್ತದೆ. ಮಾತ್ರವಲ್ಲ ಇಲ್ಲಿ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಯಬೇಕಾಗಿ ಬಂದಿಲ್ಲ ಎನ್ನುತ್ತಾರೆ ಶಾಲೆ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ. ಇದರ ಫಲವಾಗಿ ಶಾಲೆಯ ಸುತ್ತಲೂ ಮರ ಗಿಡಗಳು ಕೂಡ ಚೆನ್ನಾಗಿ ಬೆಳೆದು ಸದಾ ಹಸಿರು ಸೂಸುತ್ತಾ ಇರುತ್ತವೆ. ಇದೀಗ ಶಾಲೆಯ ಯಶೋಗಾಥೆಯ ಹಿನ್ನಲೆಯಲ್ಲಿ ಜಲಸಂರಕ್ಷಣೆ ಸಂದೇಶ ವಿದ್ಯಾರ್ಥಿಗಳ ಮೂಲಕ ಮನೆ ಮನೆ ತಲುಪಸಿ ಜಲಸಂರಕ್ಷಣೆಯ ಮುನ್ನುಡಿ ಬರೆಯುವ ಪ್ರಯತ್ನ ಶಾಲೆಯದ್ದು.

“ಶಾಲೆಯ ಪ್ರತಿ ಮಗುವೂ ಒಂದು ಇಂಗು ಗುಂಡಿಯನ್ನು ಖಡ್ಡಾಯವಾಗಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಮಕ್ಕಳಲ್ಲಿ ಜಲಸಂರಕ್ಷಣೆಯ ಜಾಗೃತಿ ಉಂಟಾದರೆ ಆ ಸಂದೇಶ ಮಕ್ಕಳ ಮೂಲಕ ಪ್ರತಿ ಮನೆ ಮನೆಗೆ ಮತ್ತು ಸಮಾಜಕ್ಕೆ ತಲುಪುತ್ತದೆ. ನೀರಿನ ಬವಣೆಗೆ ನಾವೇ ಪರಿಹಾರ ಕಂಡು ಕೊಳ್ಳಬಹುದು ಎಂಬುದು ನಮ್ಮ ಆಶಯ. ಈ ಯೋಜನೆಯನ್ನು ಪ್ರತಿ ಶಾಲೆಯಲ್ಲಿಯೂ ಅಳವಡಿಸಿಕೊಳ್ಳಬಹುದು”.
-ಡಾ.ಚಂದ್ರಶೇಖರ ದಾಮ್ಲೆ
ಸ್ನೇಹ ಶಾಲೆಯ ಅಧ್ಯಕ್ಷ

`ಶಾಲೆಯಿಂದ ಹೇಳಿದಂತೆ ಮನೆಯಲ್ಲಿ ಇಂಗು ಗುಂಡಿ ಮಾಡಿ ಅದಕ್ಕೆ ಮಳೆಯ ನೀರು ತುಂಬಿ ಇಂಗುವುದು ನೋಡುವಾಗ ತುಂಬಾ ಖುಷಿ ಆಗುತ್ತಿದೆ. ಪ್ರತಿದಿನ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಬಂದು ಇಂಗು ಗುಂಡಿಯಲ್ಲಿ ಹೇಗೆ ನೀರು ತುಂಬುತ್ತದೆ, ಅದು ಹೇಗೆ ಭೂಮಿಯ ಒಳಗೆ ಇಂಗುತ್ತದೆ ಎಂಬ ನೀರಿಂಗಿಸುವಿಕೆಯ ಪ್ರಕ್ರಿಯೆ ನೋಡುವುದೇ ಬಲು ಖುಷಿಯ ವಿಚಾರ”
– ಪವನ್, ಕೀರ್ತನ್, ಪ್ರಣಾಂ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು