ಸುಳ್ಯ: ಮಂಡೆಕೋಲು ಗ್ರಾಮದ ಮಡಿವಾಳಮೂಲೆಯಲ್ಲಿ ಟರ್ಪಾಲಿನ ಡೇರೆಯಲ್ಲಿ ವಾಸವಾಗಿದ್ದ ಕುಟುಂಬವೊಂದಕ್ಕೆ ಸುಳ್ಯದ ಯುವ ಬ್ರಿಗೇಡ್ ತಂಡ ಶ್ರಮದಾನದ ಮೂಲಕ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
ಮಡಿವಾಳಮೂಲೆ ಕಾಲೊನಿಯಲ್ಲಿ ಪಕೀರ ಎಂಬವರ ಕುಟುಂಬ ಟರ್ಪಲ್ ಹಾಕಿಕೊಂಡು ಡೇರೆಯಲ್ಲಿ ವಾಸವಾಗಿತ್ತು. ಯುವ ಬ್ರಿಗೇಡ್‍ನ ಕಾರ್ಯಕತರು ಮಡಿವಾಳಮೂಲೆಗೆ ಹೋಗಿದ್ದಾಗ ಡೇರೆಯಲ್ಲಿ ಕುಟುಂಬವೊಂದು ವಾಸವಾಗಿದ್ದುದನ್ನು ಗಮನಿಸಿದರು. ಅವರನ್ನು ವಿಚಾರಿಸಿ ಅವರ ಸಮಸ್ಯೆ ಅರಿತ ಯುವಕರು ಅವರಿಗೆ ಮನೆ ಕಟ್ಟಿಕೊಡಲು ನಿರ್ಧರಿಸಿದರು. ಅವರಂತೆ ದಾನಿಗಳ ನೆರವಿನಿಂದ ಯುವ ಬ್ರಿಗೇಡ್ ಕಾರ್ಯಕರ್ತರು ಕೆಂಪು ಕಲ್ಲು, ಮರಳು, ಸಿಮೆಂಟ್ ಶೀಟು, ಸಿಮೇಂಟ್ ಕಂಬ ಖರೀದಿಸಿ ತಾವೇ ಕೊಂಡು ಹೋಗಿ ಆ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
ಕೆಂಪು ಕಲ್ಲಿನಿಂದ ತಳಪಾಯ ಹಾಕಿ ಸ್ವಲ್ಪ ಎತ್ತರಕ್ಕೆ ಗೋಡೆಯನ್ನು ನಿರ್ಮಿಸಲಾಯಿತು. ಸಿಮೆಂಟ್ ಕಂಬ ಬಳಸಿ ಅದಕ್ಕೆ ಛಾವಣಿಯನ್ನು ನಿರ್ಮಿಸಿ ಸೀಟ್ ಅಳವಡಿಸಲಾಯಿತು. ಅರ್ಧ ಗೋಡೆಯ ಮೇಲೆ ಬಡಿಗೆಗಳನ್ನು ಕಟ್ಟಿ ಅದಕ್ಕೆ ಪ್ಲಾಟಿಕ್ ಹೊದಿಸಿ ಗೋಡೆಯನ್ನು ನಿರ್ಮಿಸಿ ಬಾಗಿಲನ್ನೂ ಜೋಡಿಸಿ ಭದ್ರಪಡಿಸಲಾಯಿತು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಯುವ ಬ್ರಿಗೇಡ್ ಕಾರ್ಯಕರ್ತರು ಮಳೆಯನ್ನೂ ಲೆಕ್ಕಿಸದೆ ದಿನಪೂರ್ತಿ ದುಡಿದು ಒಂದೇ ದಿನದಲ್ಲಿ ಕುಟುಂಬಕ್ಕೆ ಸೂರು ನಿರ್ಮಿಸಿ ಕೊಟ್ಟರು. ಸೋಲಾರ್ ಪ್ಯಾನಲ್ ಅಳವಡಿಸಿ ದೀಪವನ್ನೂ ಉರಿಸಿ ಮನೆಯನ್ನು ಬೆಳಗಿ ಯುವಕರ ತಂಡ ಮರಳಿದರು.