ಬೆಳ್ತಂಗಡಿ: ಕೃಷಿ ಅಭಿಯಾನದ ಪೂರ್ವ ಭಾವಿ ಮತ್ತು ಕೃಷಿ ಇಲಾಖೆಗಳ ವಿವಿಧ ವಿಭಾಗಗ ಪ್ರಗತಿ ಪರಿಶೀಲನಾ ಸಭೆ ಶಾಸಕ ಹರೀಶ ಪೂಂಜ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ತಾಲೂಕಿನ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ನಡೆಯಿತು.
ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಜು. 15ರಿಂದ ಕಳೆದ ವರ್ಷದಂತೆ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಧ್ಯೇಯವಾಕ್ಯದಡಿ ರೈತ ಸಂಪರ್ಕ ಮತ್ತು ಕೃಷಿ ಅಭಿಯಾನವನ್ನು ನಡೆಸುವುದೆಂದು ತೀರ್ಮಾನಿಸಲಾಯಿತು. ಅಭಿಯಾನದಲ್ಲಿ ಎಲ್ಲಾ ವಿಭಾಗದವರೂ ಸಂಪೂರ್ಣ ತೊಡಗಿಸಿಕೊಂಡು ರೈತರಿಗೆ ಅತೀ ಹೆಚ್ಚಿನ ಪ್ರಯೋಜನ ಸಿಗುವಂತೆ ನೋಡಿಕೊಳ್ಳಬೇಕು. ಎಲ್ಲಾ ಪಂಚಾಯಿತಿಗಳಿಗೆ ಮಾಹಿತಿ ನೀಡಬೇಕು. ಮುಂದಿನ ದಿನಗಳಲ್ಲಿ ನಡೆಯುವ ಪಿಡಿಓ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು. ಮುಂದೆ ಕೃಷಿ ಮೇಳ ಮಾಡುವುದಿದ್ದಲ್ಲಿ ಅದರ ಕುರಿತು ವಿಚಾರ ವಿಮರ್ಶೆ ನಡೆಸಲಾಗುವುದು ಎಂದು ಶಾಸಕರು ತಿಳಿಸಿದರು.
ಅಭಿಯಾನವನ್ನು 48 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಸಲಾಗುತ್ತಿದ್ದು, ದಿನದಲ್ಲಿ 4-5 ಗ್ರಾಪಂಗಳಲ್ಲಿ ರೈತ ಸಂಪರ್ಕ ಮತ್ತು ಕೃಷಿ ಅಭಿಯಾನವನ್ನು ನಡೆಸುವಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ಶಾಸಕರು ಸೂಚಿಸಿದರು.
ಸರ್ವರ್ ತೊಂದರೆಯಿಂದಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಕೃಷಿ ಸಂಬಂಧಿತ ಕೆಲ ಯೋಜನೆಗಳಿಗೆ ಅರ್ಜಿ ತುಂಬಿಸುವುದು ಕಷ್ಟವಾಗುತ್ತಿದೆ ಎಂದು ಸಭೆಯಲ್ಲಿ ಗಮನಕ್ಕೆ ತರಲಾಯಿತು. ಆದಾಗ್ಯೂ ಬೆಳಗ್ಗೆ ಬೇಗ ಮತ್ತು ತಡ ಸಂಜೆ ಅರ್ಜಿಗಳನ್ನು ಅಂತರ್ಜಾಲದ ಮೂಲಕ ಅಪ್ಲೋಡ್ ಮಾಡಲಾಗುತ್ತಿದೆ. ಹೀಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನಾ ನಿಧಿ, ಹವಾಮಾನ ಆಧಾರಿತ ಫಸಲ್ ಬೀಮಾ ಯೋಜನೆಯಲ್ಲಿ ನಮ್ಮ ತಾಲೂಕಿನಲ್ಲಿ ಅತೀ ಹೆಚ್ಚು ಜನರು ತೊಡಗಿಸಿಕೊಂಡಿದ್ದಾರೆ. ದ.ಕ.ಜಿಲ್ಲೆಯಲ್ಲಿ ನಮ್ಮ ತಾಲೂಕು ಮೊದಲ ಸ್ಥಾನದಲ್ಲಿದೆ ಎಂದು ಶಾಸಕರಿಗೆ ಮಾಹಿತಿ ನೀಡಲಾಯಿತು.
ರೇಷ್ಮೆ, ಮೀನುಗಾರಿಕೆಗಳಿಗೆ ಬರುವ ವಿವಿಧ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು. ಮುದ್ರಾ ಯೋಜನೆಯಲ್ಲಿ ಸಾಲ ಕೊಡಲು ಬ್ಯಾಂಕ್ಗಳು ಹಿಂದೇಟು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಬಾರದು ಎಂದು ಬ್ಯಾಂಕ್ ಅಧಿಕಾರಿಗೆ ಸೂಚಿಸಿದರು.
ಕೃಷಿ ಇಲಾಖೆಯ ಪ್ರಭಾರ ಸಹಾಯಕ ಕೃಷಿ ನಿರ್ದೇಶಕಿ ಪ್ರೇಮಾ ಡಿ. ಕಾಂಬ್ಳೆ, ಕೃಷಿ ಅಧಿಕಾರಿಗಳಾದ ಚಿದಾನಂದ ಎಸ್. ಹೂಗಾರ್, ಹುಮೇರ ಜಬೀನ್ ಕೃಷಿ ಅಭಿಯಾನಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಿದರು. ತಾಲೂಕಿನ ವಿವಿಧ ಇಲಾಖೆಗಳಾದ ತಾಲೂಕು ಪಂಚಾಯಿತಿ, ತೋಟಗಾರಿಕೆ, ಶಿಕ್ಷಣ, ಪಶುಸಂಗೋಪನಾ, ಅರಣ್ಯ, ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸೇರಿದಂತೆ 13 ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದು, ಸಲಹೆ, ಸೂಚನೆಗಳನ್ನು ನೀಡಿದರು.