News Kannada
Tuesday, February 07 2023

ಕರಾವಳಿ

ಜೂನ್ ಮುಗಿದರೂ ಮಳೆಯಿಲ್ಲ, ದಿಗಿಲು ಹುಟ್ಟಿಸುತ್ತಿದೆ ಬಾನು

Photo Credit :

ಜೂನ್ ಮುಗಿದರೂ ಮಳೆಯಿಲ್ಲ, ದಿಗಿಲು ಹುಟ್ಟಿಸುತ್ತಿದೆ ಬಾನು

ಸುಳ್ಯ: ಜೂನ್ ಮುಗಿಯುತ್ತಾ ಬಂದರೂ ಸರಿಯಾಗಿ ಮಳೆ ಸುರಿಯುತ್ತಿಲ್ಲ. ಇನ್ನೂ ಮೋಡವಿಲ್ಲದ ಶುಭ್ರ ಬಾನು, ಉರಿ ಬಿಸಿಲು, ಸೆಕೆ ದಿಗುಲು ಹುಟ್ಟಿಸುತ್ತಿದೆ. ಮಳೆಯಿಲ್ಲದೆ ಕೃಷಿಕರು, ಜನರು ಆಕಾಶದತ್ತ ನೋಡುವ ದಿನಗಳು. ಎಲ್ಲಡೆ ಮಳೆಯದ್ದೇ ಚರ್ಚೆಯಾಗುವ ಇಂದಿನ ದಿನಗಳಲ್ಲಿ ಪ್ರತಿ ದಿನ ಸುರಿಯುವ ಮಳೆಯ ಕಣ ಕಣಗಳನ್ನೂ ಲೆಕ್ಕವಿರಿಸಿ ದಾಖಲಿಸುವ ಪಿಜಿಎಸ್‍ಎನ್ ಪ್ರಸಾದ್ ಅವರ ಮಳೆ ದಾಖಲೆ ಕೆಲವೊಂದು ಕುತೂಹಲಕಾರಿ ಅಂಶಗಳನ್ನು ತೆರದಿಡುತ್ತಿದೆ.

ಅವರ ಲೆಕ್ಕ ಪ್ರಕಾರ ಹೆಚ್ಚು ಮಳೆ ಸುರಿಯುವ ಆದ್ರ್ರಾ ನಕ್ಷತ್ರ ಸಮಯದಲ್ಲಿಯೂ ಮಳೆಯ ಪ್ರಮಾಣ, ಮಳೆಗಾಲದ ಲಕ್ಷಣ ಕಡಿಮೆಯಾಗಿದೆ. ನಕ್ಷತ್ರಗಳ ಆಧಾರದಲ್ಲಿ ವರ್ಷದ ಮಳೆಯ ಲೆಕ್ಕವನ್ನು ವಿಂಗಡಿಸಿ ಹೇಳಲಾಗುತ್ತದೆ. ಜೂನ್ 22ರಿಂದ ಜುಲೈ 5ರವರೆಗೆ ಆದ್ರಾ ನಕ್ಷತ್ರ ಮಹಾ ಮಳೆ ಸುರಿಯಬೇಕಾದ ದಿನಗಳು. ಆದರೆ ಕಳೆದ ಐದು ದಿನಗಳಲ್ಲಿ ಸರಿಯಾಗಿ ಮಳೆ ಸುರಿದಿಲ್ಲ. ಕೇವಲ 50 ಮಿ.ಮಿ. ಮಳೆಯಷ್ಟೇ ಬಂದಿದೆ. ಕೃಷಿಕರು ನಿರೀಕ್ಷೆ ಇಟ್ಟಿದ್ದ ಆದ್ರಾ ಮಳೆ ಕೈ ಕೊಡುವುದೇ ಎಂಬ ಆತಂಕ ಕಾಡಿದೆ. ಇವರ ದಾಖಲೆ ಪ್ರಕಾರ ಈ ನಕ್ಷತ್ರದ ಅವಧಿಯಲ್ಲಿ 1976ರಿಂದ 2018ರ ತನಕವೂ ಜೂನ್ 22,23,24ರಲ್ಲಿ ಇಷ್ಟೂ ವರ್ಷಗಳಲ್ಲಿ ಮಳೆ ದಾಖಲಾಗಿದೆ. ಆದರೆ ಈ ಬಾರಿ ಜೂನ್ 24 ಒಂದು ಹನಿ ಮಳೆಯೂ ದಾಖಲಾಗದ ದಿನವಾಗಿ ಇತಿಹಾಸದ ಪುಟ ಸೇರಿತು. 1976ರಿಂದ ಈಚೆಗೆ ಆದ್ರ್ರಾ ಮಳೆ ನಕ್ಷತ್ರದ ಅವಧಿಯಲ್ಲಿ ಸರಾಸರಿ 554 ಮಿ.ಮೀ.ಮಳೆ ಸುರಿಯುತ್ತಿದೆ. ಗರಿಷ್ಟ 1998 ರಲ್ಲಿ 1319 ಮಿ.ಮಿ.ಆಗಿದ್ದು, ಕನಿಷ್ಟ ಮಳೆ 1996 ರಲ್ಲಿ 54 ಮಿ.ಮೀ. ಅಷ್ಟೇ ಸುರಿದಿತ್ತು. 1996 ರಲ್ಲಿ ಸ್ವಾತಿ ಮಳೆಯೂ (032 ಮಿ.ಮೀ.) (ಸರಾಸರಿ 122 ಮಿ.ಮೀ) ಕೈಕೊಟ್ಟ ಕಾರಣ 1997 ರ ಬೇಸಗೆಯಲ್ಲಿ ನೀರಿನ ಕೊರತೆ ಉಂಟಾಗಿತ್ತು.

ಜೂನ್ 21-22 ರಿಂದ ಜುಲೈ 4-5 ಮಳೆ ನಕ್ಷತ್ರ ಆದ್ರ್ರಾದ ವೈಭವ. ಎಲ್ಲ ಕೃಷಿ ಚಟುವಟಿಕೆಗಳು ಮುಂದುವರಿಯಬೇಕಾದರೆ ಆದ್ರ್ರಾ ಮಳೆ ಚೆನ್ನಾಗಿ ಸುರಿಯಲೇಬೇಕು. ಆದ್ರ್ರಾ ಮಹಾ ಮಳೆ ನಕ್ಷತ್ರದಲ್ಲಿ ಚೆನ್ನಾದ ಮಳೆ ಬಂದರೆ ಮಾತ್ರ ಭೂಮಿಯಲ್ಲಿ ಒರತೆ ಆಗಿ, ಮುಂದೆ ಸ್ವಾತಿ (ಅಕ್ಟೋಬರ್ 24 ರಿಂದ ನವೆಂಬರ್ 5) ಮಹಾ ಮಳೆ ನಕ್ಷತ್ರದಲ್ಲಿ ಮಳೆ ಹೆಚ್ಚು ಸುರಿದರೆ ಮುಂದಿನ ವರ್ಷ ಬೇಸಗೆಯಲ್ಲಿ ನೀರಿಗೆ ಕೊರತೆಯಾಗದು ಎಂದು ಹಿಂದಿನಿಂದಲೂ ನಂಬಿಕೊಂಡು ಬಂದ ಮಾತು ಎಂಬುದು ಪ್ರಸಾದರ ಅಭಿಪ್ರಾಯ

ಮೇಷ- ಮೀನ ಹನ್ನೆರಡು ರಾಶಿಗಳನ್ನು ಸೂರ್ಯನ ಚಲನೆಯೊಂದಿಗೆ ಇಪ್ಪತ್ತೇಳು ಮಹಾನಕ್ಷತ್ರಗಳಾಗಿ ವಿಂಗಡಿಸಿ, ಇಂತಹ ನಕ್ಷತ್ರದ ಅವಧಿಯಲ್ಲಿ ವಾತಾವರಣ ಹೀಗೇ ಇರುತ್ತದೆ ಎಂಬ ಕರಾರುವಕ್ಕಾದ ಲೆಕ್ಕಾಚಾರವನ್ನು ಜಲವಿಜ್ಞಾನಿಯೂ, ಖ್ಯಾತ ಗಣಿತಜ್ಞನೂ ಆದ ವರಾಹಮಿಹಿರ ಪ್ರಪಂಚದ ಮುಂದಿಟ್ಟಿದ್ದರು. ಎಪ್ರಿಲ್ ನಿಂದ ಮಾರ್ಚ್ ತನಕ ಹಂಚಿ ಹೋಗುವ ಅಶ್ವಿನಿ ನಕ್ಷತ್ರದಿಂದ ರೇವತಿ ನಕ್ಷತ್ರದವರೆಗೆ ಸಾಮಾನ್ಯವಾಗಿ ಹನ್ನೆರಡರಿಂದ ಹದಿನಾಲ್ಕು ದಿನಗಳಲ್ಲಿ ಸೂರ್ಯನು ಒಂದೊಂದು ನಕ್ಷತ್ರವನ್ನು ಪ್ರವೇಶಿಸುವುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹಾನಕ್ಷತ್ರಗಳೆಂದು ಕರೆಯುವುದು ವಾಡಿಕೆ.

See also  ಲಾಕ್ ನೌಡ್ ನಲ್ಲಿ ಮದುವೆ: ಜಿಕೆ ಗಾರ್ಡನ್ ಸಿಟಿಯಿಂದ ವಿಶೇಷ ಆಫರ್

ಇಪ್ಪತ್ತೇಳರಲ್ಲಿ ಸುಮಾರು ಹದಿನೇಳು ನಕ್ಷತ್ರಗಳು ಮಳೆಯ ದೃಷ್ಟಿಯಿಂದ ಪ್ರಮುಖವಾದವುಗಳು ಎಂದು ಪಿಜಿಎಸ್‍ಎನ್ ಪ್ರಸಾದ್ ಹೇಳುತ್ತಾರೆ.

ಬೇಸಗೆಯಲ್ಲಿ ಮಳೆ ತರುವ ರೇವತಿ, ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮುಂಗಾರಿನಲ್ಲಿ ಮೃಗಶಿರಾ, ಆದ್ರ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಘ, ಹಿಂಗಾರಿನಲ್ಲಿ ಪೂರ್ವಫಲ್ಗುಣಿ ಅಥವಾ ಹುಬ್ಬಾ, ಉತ್ತರಾ, ಹಸ್ತಾ, ಸ್ವಾತಿ, ವಿಶಾಖಾ, ಅನುರಾಧಾ ಇವೇ ಆ ಮಹಾಮಳೆ ನಕ್ಷತ್ರಗಳು.

ಸುರಿವ ಮಳೆಯಲ್ಲಿ ಶೇ.50 ಸಮುದ್ರಕ್ಕೆ, ಶೇ.30 ಪರ್ವತ ಪ್ರದೇಶಕ್ಕೆ, ಶೇ.20 ಮಾತ್ರ ಭೂಮಿಗೆ ಹಂಚಿಹೋಗುತ್ತದೆ ಎಂದು ಆಧುನಿಕ ಕೃಷಿಪದ್ಧತಿಯ ಪಿತಾಮಹ ಪರಾಶರ ಅಂದೇ ಕಂಡುಕೊಂಡಿದ್ದರು. ಆದ್ದರಿಂದ ಶೇ.20 ರ ಮಳೆಯಲ್ಲೇ ಕೃಷಿಕರು ಕೃಷಿ ನಡೆಸಲು ಯೋಜನೆ ಹಾಕಿಕೊಳ್ಳಬೇಕು. ಈ ಕಡಿಮೆಯಾಗುತ್ತಿರುವ ಇಂದು ಸಮರ್ಥ ಜಲ ಸಂರಕ್ಷಣಾ ಕ್ರಮಗಳನ್ನು ಕೈಗೊಂಡರೆ ಮಾತ್ರ ಜೀವ ಜಲ ಉಳಿಸಲು ಸಾದ್ಯ ಎನ್ನುತ್ತಾರವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು