ಬೆಳ್ತಂಗಡಿ: ಬೆಂಗಳೂರು ರಾಜಧಾನಿಯನ್ನು ಅಂದಿನ ಕಾಲದಲ್ಲಿ ನಾಲ್ಕು ಕೋಟೆಗಳ ಮಧ್ಯೆ ಅಭಿವೃದ್ಧಿಪಡಿಸುವ ಚಿಂತನೆ ಮಾಡಿರುವ ನಾಡಪ್ರಭು ಕೆಂಪೇ ಗೌಡರ ಶ್ರೇಷ್ಠತೆಯನ್ನು ನಾವು ಅರ್ಥೈವಿಸಿಕೊಳ್ಳಬೇಕು. ಅವರ ಆಡಳಿತದ ಕಾಲದಲ್ಲಿ ಸಾವಿರಾರು ಎಕರೆಯಲ್ಲಿ 20ಕ್ಕೂ ಹೆಚ್ಚು ಕೆರೆಗಳ ನಿರ್ಮಾಣವಾಗಿದೆ. ಹೀಗಾಗಿ ಅವರ ದೂರದರ್ಶಿತ್ವದ ಚಿಂತನೆಗಳು ನಮಗೆಲ್ಲರಿಗೂ ಆದರ್ಶವಾಗಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಸೇರಿ ಎಲ್ಲರೂ ನೀರು ಸಂರಕ್ಷಿಸುವ ಸಂಕಲ್ಪ ಮಾಡಿ ನಾಡಪ್ರಭು ಕೆಂಪೇಗೌಡ ದಿನಾಚರಣೆ ಆಚರಿಸೋಣ ಎಂದು ಶಾಸಕ ಹರೀಶ್ ಪೂಂಜಾ ಕರೆ ನೀಡಿದರು.
ಅವರು ಗುರುವಾರ ಬೆಳ್ತಂಗಡಿ ಹಳೆಕೋಟೆ ವಾಣಿ ವಿದ್ಯಾಸಂಸ್ಥೆಗಳ ಸಭಾಂಗಣದಲ್ಲಿ ಬೆಳ್ತಂಗಡಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ತಾಲೂಕು ಇದರ ಜಂಟಿ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡರು ದೇವಾಲಯಗಳ ಜತೆಗೆ ಕಲ್ಯಾಣಿಗಳನ್ನು(ಕೆರೆಗಳನ್ನು) ನಿರ್ಮಿಸಿ ನೀರು ಇಂಗಿಸುವ ಕಾರ್ಯವನ್ನು ಮಾಡಿದ್ದರು. ಕೆಂಪೇಗೌಡರ ಆಡಳಿತ ಕಾಲದಲ್ಲಿ ದೂರದರ್ಶಿತ್ವದ ಚಿಂತನೆಗಳಿದ್ದು, ಸಾವಿರಾರು ಎಕರೆಯುಳ್ಳ ಸುಮಾರು 20 ಹೆಚ್ಚು ಕೆರೆಗಳನ್ನು ನಿರ್ಮಿಸಿದ್ದರು. ಅದನ್ನು ಪ್ರಸ್ತುತ ದಿನಗಳಲ್ಲಿ ಉಳಿಸಿಕೊಂಡು ಅಭಿವೃದ್ಧಿ ಕಾರ್ಯ ನಡೆಸಿದ್ದರೆ ಇಂದು ನೇತ್ರಾವತಿ ನದಿ ತಿರುವಿನಂತಹ ಯೋಜನೆಗಳು ಜಾರಿಯಾಗುತ್ತಿರಲಿಲ್ಲ. ದ.ಕ ಜಿಲ್ಲೆಯಲ್ಲಿಯೂ ಮಳೆ ಪ್ರಮಾಣ ಕಡಿಮೆಯಾಗಿದ್ದು, ಇದರಿಂದ ನೀರಿನ ಸಮಸ್ಯೆ ತಲೆದೋರಿದೆ. ಮಳೆ ಕಡಿಮೆಯಾದರೆ ಬಯಲುಸೀಮೆಯ ಸ್ಥಿತಿ ಇಲ್ಲಿಗೂ ಬರಬಹುದು. ಅದಕ್ಕಾಗಿ ನೀರು ಇಂಗಿಸುವಿಕೆ ಮತ್ತು ಜಲಸಂರಕ್ಷಣೆಯ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದರು.
ಉಜಿರೆ ಎಸ್ಡಿಎಂ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ದಿವ ಕೊಕ್ಕಡ ಪ್ರಧಾನ ಭಾಷಣ ಮಾಡಿ, ಪ್ರಸ್ತುತ ದಿನಗಳಲ್ಲಿ ಕೆಂಪೇಗೌಡರ ಆಡಳಿತ ಕಾಲದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮುಂದಿನ ಪೀಳಿಗೆಗೆ ಹೇಗೆ ಸಹಕಾರಿಯಾಗಿದೆ ಎಂದು ಅವರ ಆದರ್ಶಗಳನ್ನು ಮೆಲುಕು ಹಾಕುವ ಅಗತ್ಯವಿದೆ. ಬೆಂಗಳೂರು ನಗರವನ್ನು ನಿರ್ಮಿಸಿ ನಮ್ಮ ಕಣ್ಣಮುಂದೆ ನೋಡುವಂತೆ ಮಾಡಿದ ಕೀರ್ತಿ ಅವರಿಗಿದೆ. ಕೋಟೆ, ಪೇಟೆ, ಕೆರೆ, ಗುಡಿ, ಉದ್ಯಾನ ಈ ಪಂಚ ಅಂಶಗಳ ಮೂಲಕ ಬೆಂಗಳೂರನ್ನು ಅಭಿವೃದ್ಧಿಗೊಳಿಸಿದವರು. ಧರ್ಮ ಪ್ರಜ್ಞೆ, ಧಾರ್ಮಿಕ ಚಿಂತನೆಯನ್ನು ಹೊಂದಿದ್ದ ಅವರು ಮಾನವತಾವಾದಿ, ಪರಿಸರ ಪ್ರೇಮಿಯಾಗಿದ್ದು ಉತ್ತಮ ಆಡಳಿತಗಾರರೂ ಆಗಿದ್ದರು. ಲೋಕಾನುಭವದಿಂದ ಸಾಮ್ರಾಜ್ಯ ಕಟ್ಟಿಕೊಂಡ ಅವರು ಹೋರಾಟಗಾರ, ಕರುಣಾಮಯಿಯಾಗಿದ್ದರೂ ಮೂಢನಂಬಿಕೆಯನ್ನು ವಿರೋಧಿಸಿದ್ದರು. ಧಾರ್ಮಿಕ ಚಿಂತನೆ ಇದ್ದರೆ ಎಲ್ಲರೂ ಹಿತವೆನಿಸಿಕೊಳ್ಳುವರು ಎಂಬುದಕ್ಕೆ ನಾಡಪ್ರಭು ಕೆಂಪೇಗೌಡರೇ ಸಾಕ್ಷಿಯಾಗಿದ್ದಾರೆ ಎಂದರು.