News Kannada
Friday, October 07 2022

ಕರಾವಳಿ

ಮೂಲ ಸೌಕರ್ಯ ವಂಚಿತ ಅರಣ್ಯ ನಿವಾಸಿಗಳ ಜೀವನ ಯಾತನೆ - 1 min read

Photo Credit :

ಮೂಲ ಸೌಕರ್ಯ ವಂಚಿತ ಅರಣ್ಯ ನಿವಾಸಿಗಳ ಜೀವನ ಯಾತನೆ

ಬೆಳ್ತಂಗಡಿ: ನಾವು ಇರುವಲ್ಲಿಯೇ ಇರುತ್ತೇವೆ. ನಮಗೆ ಸೌಲಭ್ಯ ಕಲ್ಪಿಸಬೇಕೆಂದರೆ ಕಾನೂನಿನ ತೊಡಕಗಳು ಬರುತ್ತವೆ. ಇಲ್ಲಿಂದ ಹೊರಗೆ ಬರುತ್ತೇವೆ ಎಂದರೆ ಮತ್ತೆ ಕಾನೂನುಗಳ ತೊಡಕು, ಅನುದಾನದ ಕೊರತೆಯನ್ನು ಎದುರಿಸುತ್ತಾರೆ. ಈ ದ್ವಂದ ಸಮಸ್ಯೆ ಇರುವುದು ಬೇರಾರದ್ದೂ ಅಲ್ಲ, ನೂರಾರು ವರ್ಷಗಳಿಂದ ಕುದುರೇ ಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಜೀವನ ನಿರ್ವಹಣೆ ಮಾಡುತ್ತಿರುವವರದ್ದು. ಈ ತೊಂದರೆಗಳು ಯಾವಾಗ ಮುಗಿಯುತ್ತವೋ ಎಂದು ಕಾಯುವಂತಾಗಿದೆ.

ಬೆಳ್ತಂಗಡಿ ತಾಲೂಕು ಕೇಂದ್ರದಿಂದ 14 ಕಿ.ಮೀ. ಅಂತರದಲ್ಲಿ ಕಿಲ್ಲೂರು ಪ್ರದೇಶದಿಂದ ಸುಮಾರು 6 ಕೀ.ಮಿ ಒಳಗೆ ಅರಣ್ಯ ಪ್ರದೇಶದಲ್ಲಿ ಮಲವಂತಿಗೆ ಗ್ರಾಮದ ಕುದ್ಕೋಳಿ, ಕಾಟಾಜೆ, ಸುರ್ಲಿ, ಕೇಲಾಜೆ, ಪಾತಲಿಕೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಅರಣ್ಯ ನಿವಾಸಿಗಳ ಮುಗಿಯದ ಗೋಳು.

ತಲೆಮಾರುಗಳಿಂದ ಈ ಪ್ರದೇಶದಲ್ಲಿ ಹನ್ನೆರಡು ಆದಿವಾಸಿ ಮಲೆಕುಡಿಯ ಸಮುದಾಯ ಕುಟುಂಬಗಳು ಹಾಗೂ ಒಕ್ಕಲಿಗ ಸಮುದಾಯಕ್ಕೆ ಸೇರಿದ ಒಂಬತ್ತು ಕುಟುಂಬಗಳು ಇಲ್ಲಿ ವಾಸಿಸುತ್ತಿದೆ. ಇತರೆಡೆಗಳಲ್ಲಿ ಜನರು ತಮ್ಮ ಪ್ರದೇಶಗಳ ಅಭಿವೃದ್ದಿಯನ್ನು ಕೇಳುತ್ತಿದ್ದರೆ ಇಲ್ಲಿನ ಹೆಚ್ಚಿನ ಕುಟುಂಬಗಳು ಸರಕಾರದ ಪುನರ್ವಸತಿ ಯೋಜನೆಯ ಅಡಿಯಲ್ಲಿ ಅರಣ್ಯದಿಂದ ಹೊರಬರಲು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಇಲ್ಲಿನ ಕುಟುಂಬಗಳು ದಟ್ಟ ಅಡವಿಯ ನಡುವೆಯೂ ಕೃಷಿಯನ್ನು ನಂಬಿ ಬದುಕನ್ನು ಕಟ್ಟಿಕೊಂಡವರು. ಇಲ್ಲಿನ ಬಹುತೇಕ ಕುಟುಂಬಗಳು ಕಂದಾಯ ಗ್ರಾಮದಲ್ಲಿಯೇ ವಾಸಿಸುತ್ತಿದ್ದು, ಅವರಿಗೆ ಜಾಗದ ಹಕ್ಕುಪತ್ರವೂ ಇದೆ. ನೈಸರ್ಗಿಕವಾಗಿ ಸಿಗುವ ನೀರನ್ನು ಉಪಯೋಗಿಸಿ ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬಹುತೇಕ ಮನೆಗಳು ತಾವೇ ಸ್ವತಹ ನೀರಿನಿಂದ ವಿದ್ಯುತ್ ಅನ್ನು ಉತ್ಪಾದಿಸಿಕೊಳ್ಳುತ್ತಿದ್ದಾರೆ. ಅರಣ್ಯದ ಒಳಗಿರುವ ಈ ಜನರು ಶಿಕ್ಷಣದಿಂದ ಮಾತ್ರ ಬಹುತೇಕ ವಂಚಿತರಾಗಿದ್ದಾರೆ. ಉತ್ತಮ ಶಿಕ್ಷಣ ಪಡೆದವರು ಯಾರೂ ಇಲ್ಲಿಲ. ಅರಣ್ಯ ಮಕ್ಕಳನ್ನು ಅಂಗನವಾಡಿ ಶಿಕ್ಷಣ ಕಲಿಸಬೇಕಾದರೂ ಇಡೀ ದಿವಸ ಅವರಿಗೋಸ್ಕರ ಮೀಸಲಿಡಬೇಕಾದ ಸ್ಥಿತಿ ಈಗಲೂ ಇವರದ್ದು. ತಮ್ಮ ಮುಂದಿನ ತಲೆಮಾರಿಗೆ ಹೀಗಾಗಬಾರದು ಎಂದೇ ಅವರು ಈ ಅರಣ್ಯದಿಂದ ಹೊರಬರಲು ಬಯಸುತ್ತಿದ್ದಾರೆ.

ಇದೀಗ ಇಲ್ಲಿ ಪ್ರಾಣಿಗಳ ಹಾವಳಿಯೂ ಹೆಚ್ಚಾಗುತ್ತಿದ್ದು ಕೃಷಿಯನ್ನು ಉಳಿಸಿಕೊಳ್ಳಲು ಶ್ರಮಪಡಬೇಕಾದ ಸ್ಥಿತಿಯಿದೆ ಜಿಂಕೆ, ನವಿಲು, ವಾನರ, ಕಡವೆಗಳ ಕಾಟ ತಪ್ಪಿದ್ದಲ್ಲ. ಅಡಿಕೆಯ ಹಿಂಗಾರ ಬಿಡುವ ಸಂದರ್ಭದಲ್ಲಿ ಕಡವೆಗಳು ಹಿಂಗಾರವನ್ನೇ ತಿಂದು ಅಡಿಕೆ ಬೆಳೆಯನ್ನೇ ನಾಶಮಾಡುತ್ತಿದೆ. ಇದಕ್ಕಾಗಿ ಖರ್ಚು ಮಾಡಿ ಬಲೆಯ ಬೇಲಿಯನ್ನು ಮಾಡಿದರೆ ಅದನ್ನೂ ಕತ್ತರಿಸಿ ಹಿಂಗಾರವನ್ನು ತಿನ್ನುತ್ತಿದೆ. ಮಳೆಗಾಲ ಬಂತೆಂದರೆ ಈ ಪ್ರದೇಶದ ಕುಟುಂಬದ ಗೋಳು ಕೇಳವವರಿಲ್ಲ. ಅರಣ್ಯ ಇಲಾಖಾ ಕಾನೂನಿನಂತೆ ಇಲಾಖೆಯವರು ಪ್ರದೇಶವನ್ನು ಸುತ್ತುವರಿಯಲು ಕೆಲವೊಂದು ಅಗತ್ಯ ಪ್ರದೇಶದಲ್ಲಿ ಒಂದೆರಡು ಸೇತುವೆ ಹಾಗೂ ಕಿರು ಕಾಲುಸೇತುವೆಯನ್ನು ನಿರ್ಮಿಸಿದ್ದು ಇದರಲ್ಲಿ ಕಾಡು ಪ್ರದೇಶದಿಂದ ಬರುವಂತಹ ನೀರು ಉಕ್ಕಿ ಹರಿಯುತ್ತಿದ್ದು ಅಧಿಕ ಮಳೆ ಬಂದರೆ ಈ ಕಟುಂಬಗಳು ಈ ರಸ್ತೆಯಲ್ಲಿ ಹೋಗುವಂತಿಲ್ಲ. ಮಕ್ಕಳಿಗೆ ಶಾಲೆಯೂ ಇಲ್ಲ, ಕಾರ್ಮಿಕರಿಗೆ ಕೆಲಸವೂ ಇಲ್ಲದಂತಾಗಿದೆ.

See also  ಕಾಂಗ್ರೆಸ್ ಚರ್ಚೆಗೆ ಬರದೆ ಬೆನ್ನು ತೋರಿಸಿ ಓಡುತ್ತಿದೆ: ಧರ್ಮೇಂದ್ರ ಪ್ರಧಾನ್

ಪುನರ್ವಸತಿಯನ್ನು ಹಂಬಲಿಸುತ್ತಿರುವ ಕುಟುಂಬಗಳು
ಈ ಪ್ರದೇಶದ ಬಹುತೇಕ ಕುಟುಂಬಗಳು ಈಗಾಲೆ ಅರಣ್ಯದಿಂದ ಹೊರಬರಲು ಅರಣ್ಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ನಾವು ಹಲವಾರು ವರ್ಷಗಳಿಂದ ಕಷ್ಟಮಯ ಬದುಕಲ್ಲಿ ಜೀವನ ನಡೆಸುತ್ತಿದ್ದು, ನಮ್ಮ ಬದುಕಿಗೆ ನೆಮ್ಮದಿ ಇಲ್ಲ. ಈಗಾಗಲೇ ಹಲವಾರು ಕಡೆ ಅರಣ್ಯವಾಸಿಗಳಿಗೆ ಸೂಕ್ತ ಪರಿಹಾರ ನೀಡಿ ಕಾನೂನಿನಂತೆ ಅವರನ್ನು ಪರಿಹಾರ ನೀಡಿ ಸ್ಥಳಾಂತರ ಮಾಡಿದ್ದಾರೆ. ನಾವು ಕಳೆದ 2 ವರ್ಷಗಳಿಂದ ಇದಕ್ಕಾಗಿ ಅರ್ಜಿ ಸಲ್ಲಿಸಿದ್ದು, ಈ ಭಾಗದ 2 ಕುಟುಂಬಗಳಿಗೆ ಪರಿಹಾರ ನೀಡಿ ಸ್ಥಳಾಂತರ ಮಾಡಿದೆ. ಆದರೆ ಉಳಿದ ಕುಟುಂಬಗಳ ಬಗ್ಗೆ ಇನ್ನೂ ಜಮೀನಿನ ಮೌಲ್ಯಮಾಪನವೇ ಮುಗಿದಿಲ್ಲ, ಯಾವಾಗ ಪುನರ್ವಸತಿ ಸಾಧ್ಯವಾಗಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲವಾಗಿದೆ ಎನ್ನುತ್ತಾರೆ ಇಲ್ಲಿನ ಜನರು.

ಕೂಡಲೇ ತಮ್ಮ ಸ್ಥಳಾಂತರವಾಗಬಹುದು ಎಂದು ಭಾವಿಸಿರುವ ಜನರು ತಮ್ಮ ಕೃಷಿಯನ್ನು ಕಳೆದೆರಡು ವರ್ಷಗಳಿಂದ ಸರಿಯಾಗಿ ನೋಡಿಕೊಂಡಿಲ್ಲ. ಅದರಿಂದಾಗಿ ಅವರ ಆದಾಯವೂ ಇದೀಗ ಕಡಿಮೆಯಾಗುತ್ತಿದೆ. ಅತ್ತ ಕೂಲಿ ಕೆಲಸಕ್ಕೂ ಹೋಗಲಾಗದ ಸ್ಥಿತಿ ಇವರದ್ದು. ಯಾಕೆಂದರೆ ಸುಮಾರು ಆರು.ಕಿ.ಮೀ ನಡೆದೇ ಇವರು ಜನವಸತಿ ಪ್ರದೇಶಗಳಿಗೆ ಹೋಗಬೇಕಾಗಿದೆ. ಅತ್ತ ಕೃಷಿಯನ್ನೂ ಕಳೆದುಕೊಳ್ಳುವ ಇತ್ತ ಪುನರ್ವಸತಿಯೂ ಇಲ್ಲದ ಆತಂಕಕಾರಿಸ್ಥಿತಿಯಲ್ಲಿ ಇವರಿದ್ದಾರೆ.

ಆತ್ಮಹತ್ಯೇಯೇ ಪರಿಹಾರವೇ? ದೇವಕಿ
ಈ ಭಾಗದ ಎಲ್ಲಾ ಕುಟುಂಬಗಳಿಗೆ ಅವರ ಜಮೀನಿನ ದಾಖಲೆ ಆದರೂ ಮಲೆಕುಡಿಯ ಸಮುದಾಯಕ್ಕೆ ಸೇರಿದ ದೇವಕಿ ಅವರ ಕುಟುಂಬಕ್ಕೆ ಮಾತ್ರ ಜಮೀನಿನ ಹಕ್ಕುಪತ್ರವಿಲ್ಲ. ಇವರ ಮನೆಯಿರುವ ಸೂರ್ಲಿ ಪ್ರದೇಶದಲ್ಲಿ ಇರುವ ಇತರೆ ಕುಟುಂಬಗಳು ಪುನರ್ವಸತಿಗೆ ಅರ್ಜಿ ಸಲ್ಲಿದ್ದು ಬಹುತೇಕ ಅರಣ್ಯದಿಂದ ಹೊರಹೋಗಲು ಸಿದ್ದರಾಗಿದ್ದಾರೆ. ಆದರೆ ದೇವಕಿಯವರ ಕುಟುಂಬಕ್ಕೆ ಮಾತ್ರ ಹಕ್ಕುಪತ್ರವಿಲ್ಲದ ಕಾರಣ ಪುನರ್ವಸತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಪತಿ ಕಾಯಿಲೆಯಿಂದ ಸಾವನ್ನಪ್ಪಿದರೂ ತನ್ನ ಮಕ್ಕಳೊಂದಿಗೆ ಇರುವ ಜಮೀನಿನಲ್ಲಿ ಕೃಷಿ ಮಾಡಿ ಬದುಕನ್ನು ನಡೆಸುತ್ತಿದ್ದಾರೆ. ಜಮೀನಿನ ಹಕ್ಕುಪತ್ರಕ್ಕಾಗಿ ಕಂದಾಯ ಇಲಾಖೆ, ಅರಣ್ಯ ಇಲಾಖೆ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುಟುಂಬಕ್ಕೆ ಪರಿಹಾರ ನಿಡಲು ಸಾಧ್ಯವಿಲ್ಲ ಎಂಬುದು ಸರಕಾರದ ಇಲಾಖೆಯ ನಿಲುವಾಗಿದ್ದು ಇದು ಈಕುಟುಂಬದ ನೆಮ್ಮದಿ ಕೆಡಿಸಿದೆ. ಎಲ್ಲರೂ ಕಾಡಿನಿಂದ ಹೊರಹೋದರೆ ತಾವು ಕಾಡುಪ್ರಾಣಿಗಳ ನಡುವೆ ಬದುಕಲು ಸಾಧ್ಯವಿಲ್ಲ. ಮಕ್ಕಳೊಂದಿಗೆ ಏನು ಮಾಡಬೇಕು ಎಂದು ತಿಳಿಯದಾಗಿದೆ ಎನ್ನುತ್ತಿದ್ದಾರೆ ಈ ಕುಟುಂಬದವರು.

ನಮಗೆ ಕಾಡಿನ ಬದುಕು ಬೇಸತ್ತು ಹೋಗಿದೆ. ಕೃಷಿ ಮಾಡಿದರೂ ಕಾಡುಪ್ರಾಣಿಗಳ ಹಾವಳಿ, ಸರಿಯಾದ ಸಂಪರ್ಕ ರಸ್ತೆಯೂ ಇಲ್ಲ. ಕಾಡಿನಿಂದ ನಾಡಿಗೆ ಹೊರಬರಲು ನಾವು ಕಾಯುತ್ತಿದ್ದೇವೆ. ಇದಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದು ಸರ್ವೆ ಮಾಡಿ ಹೋಗಿದ್ದಾರೆಯೇ ಹೊರತು ಪರಿಹಾರ ಸಿಗುತ್ತಿಲ್ಲ. ಇಂದೋ ನಾಳೆಯೋ ಪರಿಹಾರ ಸಿಗಬಹುದು ಎಂಬ ಭರವಸೆಯಿಂದ ಇದ್ದ ಕೃಷಿಯನ್ನೂ ನಿಲ್ಲಿಸಿದೇವೆ. ನಮ್ಮ ಬದುಕು ಕಷ್ಟದಲ್ಲಿದೆ.
ನಾರಾಯಣ ಮಲೆಕುಡಿಯ, ಪಾತಲಿಕೆ

ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಪ್ರಯತ್ನಿಸಿದರೆ ನಮಗೆ ಸರಿಯಾದ ಹಾದಿ ಸಿಗುತ್ತಿಲ್ಲ. ಸರಕಾರದ ನಿಯಮಗಳೇ ನಮಗೆ ಅರ್ಥವಾಗುತ್ತಿಲ್ಲ. ನಾವು ಯಾರದೇ ಮಧ್ಯವರ್ತಿಗಳ ಮೊರೆಹೋಗದೆ ಅರಣ್ಯ ಹಾಗೂ ಕಂದಾಯ ಇಲಾಖೆಯ ಬಳಿ ನ್ಯಾಯಕ್ಕಾಗಿ ಮೊರೆಹೋಗುತ್ತಿದ್ದೇವೆ. ನಮಗೆ ಸೂಕ್ತ ಪರಿಹಾರ ನೀಡಿ ನಾವು ಅರಣ್ಯ ಪ್ರದೇಸವನ್ನು ಬಿಟ್ಟು ಬೇರೆ ಕಡೆ ಹೋಗಲು ಸಿದ್ಧ.
ಬಾಲಕೃಷ್ಣ ಮಲೆಕುಡಿಯ

See also  ಧರ್ಮಸ್ಥಳ ಬಾಹುಬಲಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು