News Kannada
Wednesday, October 05 2022

ಕರಾವಳಿ

ಮಂಗಳೂರು-ಬೆಂಗಳೂರು ರಾ.ಹೆ. ಅಗಲೀಕರಣ: ಭೂಮಿ ಕಳೆಕೊಂಡವರಿಗೆ ಮನೆ ಖರೀದಿಗೂ ಹಣವಿಲ್ಲ! - 1 min read

Photo Credit :

ಮಂಗಳೂರು-ಬೆಂಗಳೂರು ರಾ.ಹೆ. ಅಗಲೀಕರಣ: ಭೂಮಿ ಕಳೆಕೊಂಡವರಿಗೆ ಮನೆ ಖರೀದಿಗೂ ಹಣವಿಲ್ಲ!

ಬಂಟ್ವಾಳ: ಅನೇಕ ಗೊಂದಲಗಳೊಂದಿಗೆ ಆಮೆಗತಿಯಲ್ಲಿ ಸಾಗುತ್ತಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಬಿ.ಸಿ. ರೋಡ್-ಅಡ್ಡಹೊಳೆ ಚತುಷ್ಪಥ ರಸ್ತೆಯ ಭೂಸ್ವಾಧೀನದ ಮೌಲ್ಯ ನಿಗದಿಯ ತಾರತಮ್ಯ ಖಂಡಿಸಿ, ಕಲ್ಲಡ್ಕದ ಜನತೆ ಮತ್ತೊಂದು ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ. ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಎಚ್‍ಎಐ)ವು ಹೆಚ್ಚುವರಿ ಜಮೀನನ್ನು ಸ್ವಾಧೀನ ಪಡಿಸಲು ಅತೀ ಕಡಿಮೆ ಮೌಲ್ಯ ನಿಗದಿ ಪಡಿಸಲಾಗಿದೆ ಎಂಬ ಆರೋಪ ಕಲ್ಲಡ್ಕದ ಜನತೆಯಿಂದ ಕೇಳಿಬಂದಿದ್ದು, ಶಾಸಕರು, ಸಂಸದರು ಮಧ್ಯಪ್ರವೇಶಿಸಿ ನ್ಯಾಯ ಒದಗಿಸುವರೇ ಎಂಬ ನಿರೀಕ್ಷೆಯಲ್ಲಿದ್ದಾರೆ.

ಕಳೆದ 2013ರಲ್ಲಿ ಕಲ್ಲಡ್ಕದಲ್ಲಿ ಹಾದು ಹೋಗುವ ಚತುಷ್ಪಥ ರಸ್ತೆಯ ಪ್ರಸ್ತಾಪ ಬಂದಾಗ, ಕಲ್ಲಡ್ಕದಲ್ಲಿ ಅಂಡರ್ ಪಾಸ್ ನಿರ್ಮಾಣವಾದಲ್ಲಿ, ಕಲ್ಲಡ್ಕವೇ ಮಾಯವಾಗುವ ಅಪಾಯವಿದೆ, ನಿವಾಸಿಗಳಿಗೆ ಶಾಶ್ವತ ಸಮಸ್ಯೆ ಎದುರಾಗುತ್ತದೆ ಎಂಬ ಬಗ್ಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ ಕಲ್ಲಡ್ಕದಲ್ಲಿ “ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಉಳಿಸಿ ಹೋರಾಟ ಸಮಿತಿ’ ಅಸ್ತಿತ್ವಕ್ಕೆ ಬಂದು, ಸಂಘಟನಾತ್ಮಕ ಹೋರಾಟ ಆರಂಭಗೊಂಡಿತ್ತು. ಸಮಿತಿಯ ಒತ್ತಾಯಕ್ಕೆ ಮಣಿದು ಅಂಡರ್ ಪಾಸ್ ಅನ್ನು ಕೈಬಿಟ್ಟು ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಾಧಿಕಾರ ಜೈ ಎಂದಿತ್ತು. ಅದರಂತೆ ಇತ್ತೀಚಿನವರೆಗೂ ರಸ್ತೆ ಅಗಲೀಕರಣವೋ, ಮೇಲ್ಸೇತುವೆ ನಿಮಾಣವೋ ಎಂಬ ಬಗ್ಗೆ ಸ್ಪಷ್ಟ ಪಡಿಸದೇ ಇರುವ ಪ್ರಾಧಿಕಾರ, ಇದೀಗ ಭೂಸ್ವಾಧೀನಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ಈಗ ಏನು ಸಮಸ್ಯೆ..
ಗೋಳ್ತಮಜಲು ಗ್ರಾಮವನ್ನು ಸೆಮಿ ಅರ್ಬನ್ ಎಂದು ಗುರುತಿಸಿರುವ ಪ್ರಾಧಿಕಾರ 2014ರ ಮೌಲ್ಯದಂತೆ ಜಮೀನು ಹಾಗೂ ಕಟ್ಟಡಗಳ ಮೌಲ್ಯ ನಿಗದಿ ಮಾಡಿದೆ, ಇದು ಅವೈಜ್ಞಾನಿಕ ಎನ್ನುತ್ತಿರುವ ನಾಗರೀಕರು, 2019ರ ವ್ಯಾಲ್ಯುವೇಶನ್ ನಂತೆ ಮೌಲ್ಯ ನಿಗದಿ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ನಿಯಮದ ಪ್ರಕಾರ 1.5ರಷ್ಟು ಮೌಲ್ಯ ನೀಡಲಾಗಿದೆ ಎಂದು ಹೇಳಲಾಗಿದೆಯಾದರೂ, ನಿಗದಿಪಡಿಸಿರುವ ಮೌಲ್ಯ ತೀರಾ ಕಡಿಮೆಯಾಗಿದೆ ಎನ್ನುವುದು ನಾಗರೀಕರ ಅಳಲು. ಒಂದು ಚದರ ಮೀಟರ್ ಗೆ ಪ್ರಾಧಿಕಾರ 97 ರೂ ನಂತೆ ಹಣ ನಿಗದಿಮಾಡಿದ್ದು, ಸೆಂಟ್ಸ್ ಗೆ 3885ರಂತೆ ಒಂದು ಎಕ್ರೆಗೆ 39 ಸಾವಿರದಂತೆ ದರ ನಿಗದಿ ಮಾಡಲಾಗಿದೆ. ಕಮರ್ಶಿಯಲ್ ಹಾಗೂ ರೆಸಿಡೆನ್ಸಿಯ ಜಮೀನುಗಳಿಗೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಹಣ ನಿಗದಿ ಮಾಡಲಾಗಿದೆಯಾದರೂ, ಯಾರೊಬ್ಬರಿಗೂ ಸಮಾಧಾನ ತರುವಂತಿಲ್ಲ. ಆದರೆ ಸದ್ಯದ ಮಟ್ಟಿಗೆ ಕಲ್ಲಡ್ಕದಲ್ಲಿನ ಜಮೀನಿಗೆ ಸೆಂಟ್ಸ್ ಗೆ 4 ರಿಂದ 6 ಲಕ್ಷದವರೆಗೆ ಬೇಡಿಕೆ ಇದ್ದು, ಪ್ರಾಧಿಕಾರ 2019ರ ಭೂಸ್ವಾಧೀನ ಪ್ರಕ್ರಿಯೆಯ ನಿಯಮಾವಳಿಯಂತೆ ಮೌಲ್ಯ ನಿಗದಿ ಮಾಡಿದ್ದರೂ ಚದರ ಮೀಟರ್ ಗೆ 6 ಸಾವಿರದಂತೆ, ಪ್ರತೀ ಸೆಂಟ್ಸ್ ಗೆ 2.40 ಲಕ್ಷ ದಷ್ಟು ಹಣ ನೀಡಬೇಕಿತ್ತು. ಆದರೆ ಹಾಗಾಗಿಲ್ಲ.

ಪ್ರಾಧಿಕಾರ ಗ್ರಾಮೀಣ ಪ್ರದೇಶಗಳಲ್ಲಿ ಮೌಲ್ಯದ 4.5 ರಷ್ಟು ಹೆಚ್ಚಿನ ಮೌಲ್ಯ ನೀಡಿದ್ದು, ಸೆಮಿ ಅರ್ಬನ್ ಗೆ ಇದನ್ನು ಮತ್ತಷ್ಟು ಹೆಚ್ಚಿಸಬೇಕಿತ್ತು. ಆದರೆ ಅತ್ತ ನಗರವೂ ಅಲ್ಲ, ಇತ್ತ ಗ್ರಾಮೀಣವೂ ಅಲ್ಲದ ಸೆಮಿ ಅರ್ಬನ್ ಆಗಿ ಕಲ್ಲಡ್ಕವನ್ನು ಗುರುತಿಸಿರುವುದರಿಂದ ಇದೀಗ ಕಲ್ಲಡ್ಕದ ಜನತೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.

See also  ನ.29-30ರಂದು `ಮಂಗಳೂರು ಲಿಟ್ ಫೆಸ್ಟ್–2019’

ಪರಿಹಾರದ ಹಣ ಜಮೀನು ಖರೀದಿಗೂ ಸಾಲುತ್ತಿಲ್ಲ
ಪ್ರಾಧಿಕಾರ ನಿಗದಿ ಪಡಿಸಿರುವ ಜಮೀನಿನ ಮೌಲ್ಯ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ವಾಸ್ತವ್ಯದ ಮನೆಗಳನ್ನು ಕಳೆದುಕೊಳ್ಳುತ್ತಿರುವ ಮನೆಮಂದಿ ಹೊಸ ಮನೆಗಳ ಹುಟುಕಾಟಕ್ಕೆ ತೀರಾ ತೊಂದರೆ ಅನುಭವಿಸುವಂತಾಗಿದೆ. ಮನೆ ಸಹಿತ ಜಮೀನಿಗೆ ನಿಗದಿಯಾಗಿರುವ ಪರಿಹಾರದ ಹಣ ಹೊಸ ಜಮೀನು ಖರೀದಿಗೂ ಸಾಲುತ್ತಿಲ್ಲ, ಇನ್ನು ಹೊಸ ಮನೆ ನಿರ್ಮಾಣ ಕೇವಲ ಕನಸಾಗಿಯೇ ಉಳಿಯುವ ಆತಂಕ ಹುಟ್ಟಿಕೊಂಡಿದೆ.

ಶಾಸಕರು-ಸಂಸದರು ಮಧ್ಯೆಪ್ರವೇಶಿಸಲಿ..
ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನೊಂದವರ ಪರವಾಗಿ ನಿಲ್ಲಬೇಕು ಎನ್ನುವುದು ಕಲ್ಲಡ್ಕ ನಿವಾಸಿಗಳ ಒತ್ತಾಯ. ದ.ಕ.ಜಿಲ್ಲಾಧಿಕಾರಿ ಹಾಗೂ ಶಾಸಕರು, ಸಂಸದರು ಇಂತಹಾ ಗಂಭೀರ ಸಮಸ್ಯೆಯ ಬಗ್ಗೆ ಗಮನಹರಿಸಬೇಕು, ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಚತುಷ್ಪಥ ರಸ್ತೆಯ ಕಾಮಗಾರಿ ನಡೆಯುವಂತೆ ಆಸಕ್ತಿ ವಹಿಸಬೇಕು. ಅಲ್ಲದೆ ಕಲ್ಲಡ್ಕಕ್ಕೆ ಫ್ಲೈ ಓವರ್ ನ ಅಗತ್ಯತೆಯ ಕುರಿತಾಗಿ ಪುನರ್‍ ವಿಮರ್ಶೆ ನಡೆಸಬೇಕು ಎಂದು ಸಮಿತಿಯ ಪ್ರಮುಖರು ಆಗ್ರಹಿಸಿದ್ದಾರೆ.

ಸೆಮಿ ಅರ್ಬನ್ ಎಂದು ಕಲ್ಲಡ್ಕವನ್ನು ಗುರುತಿಸಿರುವ ಹೆದ್ದಾರಿ ಪ್ರಾಧಿಕಾರ ಗ್ರಾಮೀಣಪ್ರದೇಶಗಳಲ್ಲಿ ನೀಡಿದ ಜಮೀನು ಮೌಲ್ಯವನ್ನೂ ನೀಡಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಈಗ ನಡೆಯುವ ಹಿನ್ನೆಲೆಯಲ್ಲಿ 2018-19ರ ದರಪಟ್ಟಿಯಂತೆ ಮೌಲ್ಯ ನಿಗದಿ ಮಾಡಲಿ.
ಶಿವರಾಮ್ ಹೊಳ್ಳ(ಸಂತ್ರಸ್ತರು)
ಉದ್ಯಮಿ, ಕಲ್ಲಡ್ಕ

ಕಲ್ಲಡ್ಕದಲ್ಲಿ ಫ್ಲೆಓವರ್ ನಿರ್ಮಾಣಕ್ಕೆ ಪೂರಕವಾಗಿ 45 ಮೀಟರ್ ಬದಲಾಗಿ 40 ಮೀಟರ್ ನಷ್ಟು ಮಾತ್ರ ಭೂಸ್ವಾದೀನ ಪ್ರಕ್ರಿಯೆ ನಡೆಸಲಾಗಿದೆ. ಇಕ್ಕೆಲಗಳಲ್ಲೂ 2.5 ಮೀ. ಭೂಸ್ವಾಧೀನ ಕಡಿಮೆಯಾಗಿರುವುದರಿಂದ ಕೆಲವು ಕಟ್ಟಡಗಳು ಸೇಫ್ ಝೋನ್‍ಗೆ ಬಂದಿವೆ. ಹೀಗಾಗಿ ಭೂ ಸ್ವಾಧೀನದ ಮೌಲ್ಯದ ಮೊತ್ತ ಕಡಿಮೆಯಾಗಿದೆ. ಮೌಲ್ಯವನ್ನು ಎನ್‍ಎಚ್‍ಎಐಯ ತಾಂತ್ರಿಕ ವಿಭಾಗದ ಮೌಲ್ಯಮಾಪಕರು ನಿರ್ಧರಿಸುತ್ತಿದ್ದು, ವ್ಯತ್ಯಾಸಗಳಿದ್ದರೆ ಮೌಲ್ಯದ ಮರುಪರಿಶೀಲನೆಗೆ ಅವಕಾಶವಿದೆ. ಅವರು ನಿರ್ಧರಿಸಿದರೆ ಹೆಚ್ಚುವರಿ ಪರಿಹಾರಕ್ಕೆ ಸೂಚಿಸಿದರೆ ನೀಡಲಾಗುತ್ತದೆ.
ಮಂಜುನಾಥ್, ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರ, ಎನ್‍ಎಚ್‍ಎಐ, ಹಾಸನ, ಬಿಸಿ. ರೋಡ್ ವಿಭಾಗ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು