ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಬೆಟ್ಟ ಪ್ರದೇಶದಲ್ಲಿ ಅಲ್ಲಲ್ಲಿ ಭಾರೀ ಭೂ ಕುಸಿತಗಳು ಸಂಭವಿಸಿದ್ದು, ಸುಮಾರು 10 ಕುಟುಂಬಗಳ ಸುಮಾರು 10ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿ ಸಂಪೂರ್ಣ ನಾಶಗೊಂಡಿದೆಯಲ್ಲದೆ ಸುಮಾರು 4 ಕಿ.ಮೀ. ಉದ್ದಕ್ಕೆ ಹೊಸ ನದಿಯೊಂದು ಸೃಷ್ಟಿಯಾಗಿದೆ.
ಇಲ್ಲಿನ ಕೆಲ ಕುಟುಂಬಗಳು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಕೆಲವರು ಪ್ರಾಣ ಕೈಯಲ್ಲಿ ಹಿಡಿದು ಅಲ್ಲಿಯೇ ವಾಸಿಸುತ್ತಿದ್ದಾರೆ. ಈಗ ಸೃಷ್ಟಿಯಾಗಿರುವ ನದಿಯಲ್ಲಿ ಹಾಗೂ ಇತರೆಡೆ ನೀರು ಹರಿಯುತ್ತಿದ್ದು, ಭೂ ಕುಸಿತದ ಭಯ ಕಾಡುತ್ತಿದೆ. ಮಲವಂತಿಗೆ ಗ್ರಾಮದ ಸಿಂಗನಾರು ಪ್ರದೇಶದ ನಿವಾಸಿ ಗುಲಾಬಿ ಎಂಬುವರ ಮನೆಯ ಅಂಗಳದಲ್ಲಿಯೇ ಹೊಸ ನದಿ ಸೃಷ್ಟಿಯಾಗಿದ್ದು, ಅದು ಅವರ ಸುಮಾರು ಒಂದು ಎಕರೆ ಅಡಕೆ ತೋಟವನ್ನು ಕೊಚ್ಚಿಕೊಂಡು ಹೋಗಿದೆಯಲ್ಲದೆ ಮನೆಯನ್ನೂ ಹಾನಿ ಮಾಡಿದೆ. ರುಕ್ಮಯ್ಯ ಮಲೆಕುಡಿಯ ಎಂಬುವರ 2 ಎಕರೆ ತೋಟ ಮತ್ತು 1 ಎಕರೆ ಗದ್ದೆ ಸಂಪೂರ್ಣ ಕಲ್ಲು ಬಂಡೆಗಳಿಂದ ತುಂಬಿಹೋಗಿದೆ. ಇದೇ ರೀತಿ ಸುರೇಶ ಎಂಬುವರ ಒಂದು ಎಕರೆ ಅಡಕೆ ತೋಟ ನೆಲಸಮವಾಗಿದೆ.
ಈ ಪ್ರದೇಶದ ಸಮೀಪ ನಂದಿಕಾಡು ಎಂಬಲ್ಲಿನ ನಿವಾಸಿ ರುಕ್ಮಿಣಿ ಎಂಬವರ ಮನೆಯ ಹಿಂಭಾಗದಲ್ಲಿ ಭಾರೀ ಗುಡ್ಡವನ್ನು ಕುಸಿದು ಬಿದ್ದಿದ್ದು ಮನೆಯ ಮೇಲ್ಛಾವಣಿಯ ತನಕ ಮಣ್ಣು ತುಂಬಿದ್ದು ಗೋಡೆ ಕುಸಿತವಾಗುವ ಸ್ಥಿತಿಯಲ್ಲಿದೆ. ಇವರ ಅನಾರೋಗ್ಯ ಪೀಡಿತ ಮಗನನ್ನು ಬೆಡ್‍ಶೀಟಿನಲ್ಲಿ ಸುತ್ತಿ ಹೊತ್ತುಕೊಂಡು ಸುಮಾರು 5 ಕಿ.ಮೀ ದೂರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಬಿಡಲಾಗಿದೆ. ಸನಿಹದ ಪುಟ್ಟಮ್ಮ ಎಂಬುವರ ಕೃಷಿ ನಾಶಗೊಂಡಿದ್ದರೆ, ಚನನ ಮಲೆಕುಡಿಯ ಎಂಬುವರ ಮನೆಯ ಅಂಗಳದಲ್ಲೇ ಹೊಸ ತೊರೆಯೊಂದು ನಿರ್ಮಾಣವಾಗಿ ತೋಟವನ್ನು ಸಂಪೂರ್ಣಕೊಚ್ಚಿ ಕೊಂಡು ಹೋಗಿದೆ. ಬಾಬಿ ಹೆಂಗ್ಸು ಎಂಬುವರ ತೋಟ ಗುಡ್ಡ ಕುಸಿತವಾಗಿ ನಷ್ಟ ಉಂಟಾಗಿದೆ.
ಮಲವಂತಿಗೆ ಗ್ರಾಮದ ಸಿಂಗನಾರು, ನಂದಿಕಾಡು ಪ್ರದೇಶದಲ್ಲಿ 5 ದಿನದ ಹಿಂದೆಯೇ ಭಾರೀ ಭೂ ಕುಸಿತಗಳು ಸಂಭವಿಸಿ ನಷ್ಟಗಳು ಉಂಟಾಗಿದ್ದರೂ ಯಾವುದೇ ಅಧಿಕಾರಿ ವರ್ಗ ಇಲ್ಲಿಗೆ ತಲುಪಿಲ್ಲ. ಕುಸಿತದಿಂದ ಭಯಗೊಂಡು ಅಲ್ಲಿನ ಕೆಲ ನಿವಾಸಿಗಳು ಸಂಬಂಧಿಕರ ಮನೆಯಲ್ಲಿ ಆಶ್ರಯಪಡೆದುಕೊಂಡಿದ್ದರೆ ಇನ್ನು ಕೆಲವರು ಅಲ್ಲಿಯೇ ಇದ್ದರು. ಒಂದು ಕುಂಟುಂಬ ಕರಿಯಾಲು ಎಂಬಲ್ಲಿನ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಶುಕ್ರವಾರ ಸಂಜೆ ಭೂ ಕಂಪನದ ಅನುಭವವಾಯಿತು. ಮನೆಯ ಹಿಂಬದಿಯಲ್ಲಿ ನೋಡಿದಾಗ ಭಾರೀ ಶಬ್ದದೊಂದಿಗೆ ಆಳೇತ್ತರದಲ್ಲಿ ನೀರು ಸಹಿತ ಬೃಹತ್ ಬಂಡೆಗಳು ಉರುಳುತ್ತಾ ಬರುವುದು ಕಂಡುಬಂತು. ಇದನ್ನು ನೋಡಿ ಮನೆಯಿಂದ ಹೊರಗೆ ದೂರಕ್ಕೆ ಬಂದೆವು. ಸುಮಾರು ಅರ್ಧಗಂಟೆಗಳ ಕಾಲ ಕುಸಿತ ಸಂಭವಿಸಿದೆ. ನನ್ನ ತೋಟದಲ್ಲಿ ಹೊಸ ನದಿಯೊಂದು ಹರಿಯುತ್ತಿದೆ. ಭೂಮಿಯಲ್ಲಿ ಯಾವುದೇ ಕೃಷಿ ಮಾಡುವ ಹಾಗಿಲ್ಲ. ಸರಕಾರ ನಮ್ಮ ಬೆಂಬಲಕ್ಕೆ ಬರಬೇಕಾಗಿದೆ- ರುಕ್ಮಯ್ಯ ಮಲೆಕುಡಿಯ