News Kannada
Tuesday, September 27 2022

ಕರಾವಳಿ

ಸುರಿದ ಮಳೆಗೆ ಚಾರ್ಮಾಡಿಯಲ್ಲಿ ಭೂಕುಸಿತ: ಭರದ ದುರಸ್ತಿ - 1 min read

Photo Credit :

ಸುರಿದ ಮಳೆಗೆ ಚಾರ್ಮಾಡಿಯಲ್ಲಿ ಭೂಕುಸಿತ: ಭರದ ದುರಸ್ತಿ

ಬೆಳ್ತಂಗಡಿ: ಸುಪ್ರಸಿದ್ಧ ಚಾರ್ಮಾಡಿ ಕಣಿವೆಯಲ್ಲಿ ಘಾಟಿ ರಸ್ತೆಯಲ್ಲಿ ಮಳೆಗಾಲದಲ್ಲಿ ಇಳಿಯುವಾಗ ಅಥವಾ ಹತ್ತುವಾಗ ನೀರಿನ ಜಲಪಾತಗಳು, ಬಳುಕುವ ಝರಿಗಳನ್ನು ನೋಡುವುದೇ ಒಂದು ಸೊಬಗಿತ್ತು. ಆದರೆ ಈ ಬಾರಿ ಮಾತ್ರ ಎಲ್ಲಿ ನೋಡಿದರಲ್ಲಿ ಭೂ ಕುಸಿತದ ದೃಶ್ಯಗಳೇ ಕಾಣಸಿಗುತ್ತಿವೆ.

ಭರದ ದುರುಸ್ತಿ: ಸುರಿದ ಭಾರೀ ಮಳೆಯಿಂದಾಗಿ ಒಂದು ತಿಂಗಳಿನಿಂದ ಚರ್ಮಾಡಿ ಘಾಟ್ ರಸ್ತೆಯಲ್ಲಿ ಬಾರೀ ಭೂಕುಸಿತದಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು ಇದೀಗ ಮಳೆ ಕಡಿಮೆಯಾಗುತ್ತಿದ್ದಂತೆಯೇ ಸುಮಾರು ಹತ್ತಕ್ಕೂ ಹೆಚ್ಚು ಮಣ್ಣು ತೆಗೆಯುವ ಯಂತ್ರಗಳು ಹಾಗೂ ಹತ್ತಾರು ಕಾರ್ಮಿಕರು ನಿರಂತರವಾಗಿ ಕೆಲಸ ಮಾಡುತ್ತಿದ್ದು ಮಣ್ಣು ತಗೆಯುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕೆಲವೆಡೆ ಬಂಡೆಕಲ್ಲುಗಳು ಉರುಳಿ ಬಿದ್ದಿದ್ದು ಅವುಗಳನ್ನು ಒಡೆಯುವ ಕಾರ್ಯ ಮಾಡಲಾಗುತ್ತಿದೆ.

ಎಲ್ಲಿ ನೋಡಿದರಲ್ಲಿ ಭೂ ಕುಸಿತ: ಚಾರ್ಮಾಡಿಗೆ ಏಷ್ಯಾಖಂಡದಲ್ಲೆ ಅತ್ಯಂತ ರಮಣೀಯ ಜಾಗವೆಂಬ ಖ್ಯಾತಿ ಇದೆ. ಹಿಂದೆ ಪ್ರಕೃತಿಯ ಸೊಬಗನ್ನು ನೀಡುವ ಜಲಪಾತಗಳಿಗೆ ಪ್ರಖ್ಯಾತವಾಗಿದ್ದ ಚಾರ್ಮಾಡಿ ಘಾಟ್ ನಲ್ಲಿ ಸಂಚರಿಸಿದರೆ ಇದೀಗ ಎಲ್ಲಿ ನೋಡಿದರಲ್ಲಿ ಭೂಕುಸಿತದ ಭೀಕರ ದೃಶ್ಯಗಳೇ ಕಣಲು ಸಿಗುತ್ತಿದೆ. ಘಾಟಿಯಲ್ಲಿ ಕುಸಿದಿರುವುದು ಎಲ್ಲಿ ಎಂದು ಗುರುತಿಸುವುದಕ್ಕಿಂತಲೂ ಎಲ್ಲಿ ಕುಸಿದಿಲ್ಲ ಎಂದು ಹೇಳುವುದೇ ಸುಲಭವಾಗಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯಲ್ಲಿ ಒಂದನೇ ತಿರುವಿನಿಂದ ಆರಂಭಿಸಿ ಕೊಟ್ಟಿಗೆಹಾರದಲ್ಲಿನ ಮಲಯಮಾರುತದ ವರೆಗೂ ಅಲ್ಲಲ್ಲಿ ಗುಡ್ಡ ಜರೆದು ಬಿದ್ದಿದೆ.

ಮಣ್ಣು ಪಾಲಾದ ಹಳೆಯ ಕಾಮಗಾರಿಗಳು: ಸಾಮಾನ್ಯವಾಗಿ ಘಾಟಿಯಲ್ಲಿ ಹತ್ತನೇ ತಿರುವಿನಿಂದ ಕೆಳಗೆ ಭೂಕುಸಿತಗಳಾಗುತ್ತಿದ್ದವು ಆದರೆ ಈ ಬಾರಿ ಕೆಳಗಡೆ ಆಗಿರುವುದಕ್ಕಿಂತಲೂ ಹೆಚ್ಚಾಗಿ ಮೇಲ್ಭಾಗದಲ್ಲಿ ಭೂ ಕುಸಿತಗಳಾಗಿವೆ. ಕೆಲ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಭೂ ಕುಸಿತಗಳಾಗಿದ್ದು ರಸ್ತೆಯ ಬಹುಭಾಗವನ್ನೇ ಕಸಿದುಕೊಂಡಿದೆ. ಬೆಟ್ಟದ ಮೇಲಿನ ಜಲಪಾತಗಳು ಕೆಲವು ಕಣ್ಮರೆಯಾಗಿವೆ. ಅಣ್ಣಪ್ಪಬೆಟ್ಟದಿಂದ ಮಲೆಯ ಮಾರುತದ ವರೆಗಿನ ಪ್ರದೇಶಗಳಲ್ಲಿ ಶೇ 90 ಭಾಗದಲ್ಲಿಯೂ ರಸ್ತೆಯ ಮೇಲೆ ಮಣ್ಣು ಕುಸಿದು ಬಿದ್ದಿದೆ ಕಿರು ಸೇತುವೆಗಳು ಬಿರುಕುಬಿಟ್ಟಿದೆ, ಮೋರಿಗಳು ನೀರುಪಾಲಾಗಿವೆ. ಹೆಚ್ಚಿನ ಪ್ರದೇಶಗಳಲ್ಲಿ ತಡೆಗೋಡೆಗಳಿಗೆ ಹಾನಿಯಾಗಿರುವುದು ಕಂಡು ಬರುತ್ತಿದೆ. ಸುಮಾರು ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ದೊಡ್ಡ ಪ್ರಮಾಣದ ಭೂಕುಸಿತಗಳಾಗಿವೆ ಸಣ್ಣ ನೀರಿನ ಹರಿವಿದ್ದ ಜಾಗದಲ್ಲಿ ದೊಡ್ಡ ಹಳ್ಳಗಳೇ ಸೃಷ್ಟಿಯಾಗಿದೆ. ಲೆಕ್ಕ ಮಾಡಲು ಸಾಧ್ಯವಿಲ್ಲದಷ್ಟು ಸಣ್ನ ಮಟ್ಟದ ಭೂಕುಸಿತಗಳಾಗಿರುವುದು ಘಾಟಿಯಲ್ಲಿ ಸಂಚರಿಸಿದರೆ ಕಂಡು ಬರುತ್ತದೆ.

ಸರಿಪಡಿಸುವ ಕಾರ್ಯ ವೃರ್ಥವಾಗಲಿದೆಯೇ ?
ಎರಡು ಜಿಲ್ಲೆಗಳನ್ನು ಜೋಡಿಸುವ ಹೆದ್ದಾರಿ ಇದಾಗಿರುವುದರಿಂದ ಇದೀಗ ಸಮರೋಪಾದಿಯಲ್ಲಿ ರಸ್ತೆಯನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ತಡೆಗೋಡೆಗಳು ಕುಸಿದು ಹೋಗಿರುವ ಪ್ರದೇಶಗಳಲ್ಲಿ ಮೇಲಿನಿಂದ ಕುಸಿದು ಬಿದ್ದಿರುವ ಮಣ್ಣನ್ನೇ ತಡೆಗೋಡೆಯಂತೆ ಇಡಲಾಗಿದೆ. ಇದು ಈ ಮಳೆಯಲ್ಲಿ ಎಷ್ಟು ದಿನ ಉಳಿಯಲು ಸಾಧ್ಯ ಎಂದು ಕಾದು ನೋಡಬೇಕಾಗಿದೆ.

ಸುಮಾರು ಐದಕ್ಕೂ ಹೆಚ್ಚು ಕಡೆ ರಸ್ತೆ ಕೊಚ್ಚಿಹೋಗಿದ್ದು ಅಪಾಯಕಾರಿ ಸ್ಥಿತಿಯಿದೆ. ಇಲ್ಲಿ ಉಳಿದಿರುವ ರಸ್ತೆಯ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ತಡೆಗೋಡೆಯನ್ನು ಕಟ್ಟಲಾಗಿದೆ. ರಸ್ತೆಯ ಕೆಳ ಭಾಗದಲ್ಲಿ ಭಾರೀ ಪ್ರಪಾತಗಳೇ ಇದೆ. ರಸ್ತೆಯನ್ನು ಭಧ್ರಪಡಿಸುವ ಯಾವುದೇ ಕಾರ್ಯಗಳನ್ನು ಈ ವರೆಗೆ ಮಾಡಲಾಗಿಲ್ಲ. ಕೆಲವೆಡೆ ಕೇವಲ ಒಂದು ವಾಹನ ಕಷ್ಟಪಟ್ಟು ಹೋಗಲು ಮಾತ್ರ ಅವಕಾಶವಿದ್ದು ದೊಡ್ಡ ವಾಹನಗಳ ಸಂಚಾರ ಅಸಾಧ್ಯವಾಗಿದೆ. ಕಟ್ಟಿರುವ ತಡೆಗೋಡೆಗಳು ವಾಹನಗಳಿಗೆ ರಸ್ತೆ ಕುಸಿದಿದೆ ಎಂದು ಸೂಚನೆ ನೀಡುವುದಕ್ಕೆ ಮಾತ್ರ ಸೀಮಿತವಾಗಿದೆ. ಅದರಿಂದ ಬೇರೆ ಯಾವುದೇ ಪ್ರಯೋಜನವಾಗಲಾರದು. ಘಾಟಿಯ ಮೇಲ್ಬಾಗದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ ಪ್ರದೇಶದಲ್ಲಿ ವಾಹನಸಂಚಾರ ಈಗಲೂ ಅತ್ಯಂತ ಅಪಾಯಕಾರಿಯಾಗಿಯೇ ಇದೆ. ಹಲವೆಡೆ ಭೂಕುಸಿತವಾದೆಡೆಯಲ್ಲಿ ನೀರು ಹರಿಯುತ್ತಿದೆ. ಅಪಾಯಕಾರಿ ಸ್ಥಿತಿಯಲ್ಲಿ ಮರಗಳು ಬಂಡೆಗಳು ಇವೆ. ಅವುಗಳನ್ನು ತೆರವುಗೊಳಿಸಿದರೆ ಮತ್ತಷ್ಟು ಕುಸಿತದ ಭಯವಿದ್ದು ಅದನ್ನು ಹಾಗೆಯೇ ಬಿಡಲಾಗಿದೆ. ಮಳೆ ಜೋರಾಗಿ ಬಂದರೆ ಮತ್ತೆ ಭೂಕುಸಿತದ ಅಪಾಯ ಸದಾ ಇದೆ.

See also  ಡಿಕೆಶಿ ಬಂಧನ ಖಂಡಿಸಿ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಅವೈಜ್ಞಾನಿಕ ಕಾಮಗಾರಿ: ಭೂ ಕುಸಿತದಿಂದಾಗಿ ಭಾರೀ ಪ್ರಮಾಣದಲ್ಲಿ ಮಣ್ಣು ಮರಗಳು ಹಾಗೂ ಕಲ್ಲುಗಳು ಘಾಟಿರಸ್ತೆಯಲ್ಲಿ ಶೇಖರಣೆಯಾಗಿತ್ತು. ಇದೀಗ ರಸ್ತೆಯನ್ನು ಸರಪಡಿಸುವ ನಿಟ್ಟಿನಲ್ಲಿ ಅದೆಲ್ಲವನ್ನೂ ನೇರವಾಗಿ ಘಾಟಿಯ ಕೆಳಭಾಗಕ್ಕೆ ಸುರಿಯಲಾಗಿದೆ. ಈಗಾಗಲೆ ಘಾಟಿಯ ಕೆಳಬಾಗದಲ್ಲಿ ಕುಸಿತಗಳಾಗಿದ್ದು ಇದೀಗ ಘಾಟಿಯಿಂದ ಕೆಳಕ್ಕೆ ತಳ್ಳಿರುವ ಮರಗಳು ಕಲ್ಲು ಮಣ್ಣು ಬೆಟ್ಟ ಪ್ರದೇಶಗಳಲ್ಲಿ ಅಲ್ಲಲ್ಲಿ ತಡೆದುನಿಂತಿದ್ದು ಮಳೆ ಜೋರಾದರೆ ಮತ್ತೆ ನದಿಗಳ ಮೂಲಕ ಕೆಳ ಪ್ರದೇಶಗಳಿಗೆ ಹರಿಯಲಿದೆ. ಇದು ಇನ್ನಷ್ಟು ಅಪಾಯಕಾರಿಯಾಗಿದೆ.

ಅಂತಿಮ ನಿರ್ಧಾರವಷ್ಟೇ ಬಾಕಿ: ಇದೀಗ ಬಹುತೇಕ ಪ್ರದೇಶಗಳಲ್ಲಿ ಮಣ್ಣನ್ನು ತೆರವುಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ಮುಂದಿನ ತಿಂಗಳಿನಿಂದ ಸಣ್ಣ ವಾಹನಗಳ ಸಂಚಾರಕ್ಕೆ ತಾತಕಾಲಿಕವಾಗಿ ಅವಕಾಶ ಮಾಡಿಕೊಡುವ ಗುರಿಯೊಂದಿಗೆ ಈ ಕಾರ್ಯವನ್ನು ಮಾಡಲಾಗಿದೆ. ಆದರೆ ಹಿರಿಯ ಅಧಿಕಾರಿಗಳು ಘಾಟಿರಸ್ತೆಯ ಬಗ್ಗೆ ಪರಿಶೀಲನೆ ನಡೆಸಿದ ಬಳಿಕವಷ್ಟೇ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಬೇಕಾಗಿದೆ ಶಾಶ್ವತ ಪರಿಹಾರ: ಚಾಮಾಡಿ ಘಾಟ್ ರಸ್ತೆಯನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕೆಲವೊಂದು ಯೋಜನೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರೂಪಿಸಿದ್ದಾರೆ. ಬಹುಕೋಟಿಯ ಈ ಯೋಜನೆಗಳು ಇದೀಗ ಕೇಂದ್ರಸರಕಾರದ ಮುಂದಿದ್ದು ಭೂ ಕುಸಿತ ಹಾಗೂ ಪ್ರವಾಹದ ಹಿನ್ನಲೆಯಲ್ಲಿ ಈ ಯೋಜನೆಗಳಿಗೆ ಇದೀಗ ಹೆಚ್ಚಿನ ಮಹತ್ವ ಸಿಗಲಿದ್ದು ರಸ್ತೆಯನ್ನು ಉಳಿಸಿಕೊಳ್ಳಬೇಕಾದರೆ ಶಾಶ್ವತ ಪರಿಹಾರಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಬಹುಕೋಟಿ ನೀರಿನಲ್ಲಿ ಕೊಚ್ಚಿ ಹೋಗಲಿದೆ ಎನ್ನುತ್ತಾರೆ ಸ್ಥಳೀಯ ಜನರು.

ಇನ್ನಷ್ಟು ದುರ್ಬಲ ಗೊಳ್ಳಲಿದೆ ಘಾಟಿ: ರಸ್ತೆಯನ್ನು ಸರಿಪಡಿಸಲು ಇನ್ನಷ್ಟು ಅಗೆಯುವ, ಬಗೆಯುವ ಕಾರ್ಯ ನಡೆಯುತ್ತದೆ. ಇದರಿಂದ ಘಾಟಿ ಇನ್ನಷ್ಟು ದುರ್ಬಲಗೊಳ್ಳುತ್ತದೆ. ಕೇಂದ್ರ ಸರಕಾರ ಕೋಟಿ ಕೋಟಿ ಹಣ ಮಂಜೂರುಗೊಳಿಸಿದರೆ ಇಂಜಿನಿಯರುಗಳ, ಗುತ್ತಿಗೆದಾರರ, ಜನಪ್ರತಿನಿಧಿಗಳಿಗೆ ಲಾಭವಷ್ಟೇ ಹೊರತು ಚರ್ಮಾಡಿಯ ಸೌಂದರ್ಯಕ್ಕಲ್ಲ. ಅಲ್ಲಿನ ಸೂಕ್ಷ್ಮ ಪರಿಸರ ಯಂತ್ರೋಪಕರಣಗಳ ಭರಾಟೆಯಿಂದ ಇನ್ನಷ್ಟು ಹದಗೆಡಲಿದೆ ಎನ್ನುತ್ತಾರೆ ಪರಿಸರ ತಜ್ಞರು.

ಹತ್ತು ವರ್ಷಗಳ ಹಿಂದೆಯೇ ಚಾರ್ಮಾಡಿ ಘಾಟಿ ರಸ್ತೆಯ ಕೆಲವು ಕಡೆ ಅಲ್ಲಲ್ಲಿ ಗುಡ್ಡ ಕುಸಿತ ಆಗುತ್ತಿತ್ತು. ಆ ಸಂದರ್ಭದಲ್ಲಿ ಹೈದರಾಬಾದಿನ ಕಂಪೆನಿಯೊಂದು ಜರ್ಮನ್ ತಂತ್ರಜ್ಞಾನ ಬಳಸಿ, ವಿಶೇಷ ಪರಿಣತರಿಂದ, ವಿಶಿಷ್ಟವಾದ ತಡೆಗೋಡೆಗಳನ್ನು ನಿರ್ಮಾಣ ಮಾಡಿತ್ತು. ಅವರು ನಿರ್ವಹಿಸಿದ ಕಾಮಗಾರಿಗಳು ಯಾವುದೇ ಕುಸಿತವಾಗದೆ ಭದ್ರವಾಗಿವೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು