ಬೆಳ್ತಂಗಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರುಡ್‍ಸೆಟ್ ಮತ್ತಿತರ ಹಲವಾರು ಯೋಜನೆಗಳ ಮೂಲಕ ಜನೋಪಯೋಗಿ ಕಾರ್ಯಗಳನ್ನು ಕಳೆದ ಐದು ದಶಕಗಳಿಂದ ಮಾಡುತ್ತಾ ಬಂದಿರುವ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 52ನೇ ವರ್ಧಂತ್ಯುತ್ಸವವು ಕ್ಷೇತ್ರದಲ್ಲಿ ಅ. 24ರಂದು ನಡೆಯಲಿರುವುದು.
ಈ ಸಂದರ್ಭ ಮಹೋತ್ಸವ ಸಭಾಭವನದಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಹಿಸಲಿದ್ದಾರೆ. ಶಾಸಕ ಹರೀಶ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅತಿಥಿಗಳಾಗಿರುತ್ತಾರೆ ಎಂದು ಡಿ. ಹಷೇಂದ್ರ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಛದ್ಮವೇಷ ಸ್ಪರ್ಧೆ ನಡೆಯಲಿದೆ. ಸಂಜೆ ನಡೆಯುವ ಸಭೆಯಲ್ಲಿ ಪ್ರತಿಭಾ ಪುರಸ್ಕಾರ, ಕ್ಷೇತ್ರದ ಹಿರಿಯ ನೌಕರರ ಸಮ್ಮಾನ, ಹೆಗ್ಗಡೆ ಅವರಿಂದ ನೂತನ ಯೋಜನೆಗಳ ಪ್ರಕಟಿಸುವ ಕಾರ್ಯಕ್ರಮ ನಡೆಯಲಿದೆ. ಹೆಗ್ಗಡೆಯವರು 1968ರ ಅ. 24 ರಂದು ಇಪ್ಪತ್ತು ವರ್ಷ ವಯಸ್ಸಿನಲ್ಲಿ ಕ್ಷೇತ್ರದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು. ಆ ಬಳಿಕ ಅವರು ಕ್ಷೇತ್ರದ ಆಧುನಿಕ ನಿರ್ಮಾತೃ ಎಂದೆನಿಸಿಕೊಂಡಿದ್ದಾರೆ. ಪ್ರಮುಖವಾಗಿ ಬೃಹತ್ ಗೋಮಟೇಶ್ವರನ ಮೂರ್ತಿ ಸ್ಥಾಪನೆ, ಗ್ರಾಮಾಭಿವೃದ್ದಿ ಯೋಜನೆಯ ಆರಂಭ, ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ, ಭಜನಾ ಕಮ್ಮಟ, ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಇತ್ಯಾದಿ ಹಲವಾರು ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ಕೇಂದ್ರ ಸರಕಾರ ಹೆಗ್ಗಡೆಯವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.