ಬಂಟ್ವಾಳ: ಶಾರ್ಟ್ ಸರ್ಕ್ಯೂಟ್ ನಿಂದ ಪ್ಲೈವುಡ್ ಮಿಲ್ ವೊಂದಕ್ಕೆ ಬೆಂಕಿ ತಗಲಿದ ಘಟನೆ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಎಂಬಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.
ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಶಾಲೆಯ ಮುಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲು ವಿನ ಕೆ. ಹಮೀದ್ ಮಾಲಕತ್ವದ ಕೋಸ್ಟಲ್ ವುಡ್ ಪ್ರೋಡಕ್ಸ್ ಮಿಲ್ ಗೆ ಬೆಂಕಿ ತಗಲಿದೆ. ಘಟನೆಯಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾಗಿದೆ ಎಂದು ಪ್ರಾಥಮಿಕ ಹಂತದಲ್ಲಿ ಅಂದಾಜಿಸಲಾಗಿದೆ.
ಬುಧವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಮಿಲ್ ನ ಒಳಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಇಲ್ಲಿ ಕೆಲಸ ಮಾಡುತ್ತಿದ್ದ ಭದ್ರತಾ ಸಿಬ್ಬಂದಿ ಅವರು ಮಾಲಕರಿಗೆ ತಿಳಿಸಿದ್ದು, ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅರ್ಧ ತಾಸಿನ ಬಳಿಕ ಬೆಂಕಿ ಮಿಲ್ ಒಳಭಾಗದಲ್ಲಿ ವ್ಯಾಪಿಸಿದೆ. ಒಟ್ಟು ನಾಲ್ಕು ಘಟಕದ ಅಗ್ನಿ ಶಾಮಕ ದಳವು ಮೂರುವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುಲ್ಲಿ ಯಶಸ್ವಿಯಾಗಿದ್ದು, ಸಂಭಾವ್ಯ ಅಪಾಯವನ್ನು ತಪ್ಪಿಸಿದೆ.
ಬೆಂಕಿಯ ಕೆನ್ನಾಲಿಗೆಗೆ ಪ್ಲೈವುಡ್ ತಯಾರಿಸಲು ಒಣಗಿಸಿದ ಕೋರ್, ಸ್ಪೇಸ್, ಸೀಟ್ ಗಳು ಸುಟ್ಟು ಕರಕಲಾಗಿದೆ. ಅದಲ್ಲದೆ, ಯಂತ್ರೋಪಕರಣಗಳು, ವಿದ್ಯುತ್ ಪರಿಕರಗಳು, ಮಿಲ್ ನ ಮೇಲ್ಭಾಗದ ಶೀಟ್ ಗಳು ಸುಟ್ಟು ಹೋಗಿವೆ.
ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬಂಟ್ವಾಳದ 2 ಅಗ್ನಿ ಶಾಮಕ ವಾಹನ, ಕದ್ರಿ, ಪಾಂಡೇಶ್ವರ ಅಗ್ನಿ ಶಾಮಕ ವಾಹನ ಹಾಗೂ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆ ಪಾಲ್ಗೊಂಡಿದ್ದರು.