ಬೆಳ್ತಂಗಡಿ: ಭೀಕರ ಪ್ರವಾಹಕ್ಕೆ ಕೊಚ್ಚಿ ಹೋದ ಚಾರ್ಮಾಡಿ ನದಿ ಪಾತ್ರಗಳಲ್ಲಿ ತಡೆಗೋಡೆ ಹಾಗೂ ಅಂತರ ಎಂಬಲ್ಲಿಗೆ ದೊಡ್ಡ ಸೇತುವೆಯ ನಿರ್ಮಾಣಕ್ಕೆ ಸಹಕರಿಸುವುದಾಗಿ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಅವರು ಗುರುವಾರ ಕಳೆದ ಆ. 9 ರಂದು ಸಂಭವಿಸಿದ ಜಲಸ್ಫೋಟದ ಸಂದರ್ಭ ನಾಶವಾದ ಚಾರ್ಮಾಡಿ ಪ್ರದೇಶದ ಅರಣ ಪಾದೆಗೆ ಶಾಸಕ ಹರೀಶ ಪೂಂಜ ಅವರ ವಿನಂತಿಯ ಮೇರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಬಂಟ್ವಾಳದಿಂದ ಇಲ್ಲಿಗೆ ಬಂದಿದ್ದೇನೆ. ಇಲ್ಲಿ ಬಂದು ನೋಡಿದಾಗ ನಿಸರ್ಗದ ವಿಕೋಪ ಎಷ್ಟಾಗಿದೆ ಅಂತ ತಿಳಿಯಿತು. ನದಿಯ ಪಾತ್ರ ಸಂಪೂರ್ಣ ಬದಲಾವಾಣೆಯಾಗಿದೆ. ಹಲವಾರು ವರ್ಷಗಳಿಂದ ಬೆಳೆಸಿದ ಕೃಷಿ ನಾಶವಾಗಿದೆ. ಜನ ಸಂಕಷ್ಟದಲ್ಲಿದ್ದಾರೆ. ವೆಂಟೆಡ್ ಡ್ಯಾಂ ಇರುವಲ್ಲಿ ಅಧಿಕ ಹಾವಳಿಯಾಗಿದೆ. ಪ್ರವಾಹದಲ್ಲಿ ಬಂದ ದೊಡ್ಡ ಬಂಡೆಗಳನ್ನು ನೋಡಿ ಆಶ್ಚರ್ಯವಾಗಿದೆ. ಹಾನಿಗಳಿಗೆ ಸರಕಾರ ಈಗಾಗಲೇ ಪರಿಹಾರ ಘೋಷಣೆ ಈಗಾಗಲೇ ಮಾಡಿದೆ. ಕೃಷಿ ನಾಶಕ್ಕೆ ಒಂದು ಹೆಕ್ಟೇರ್‍ಗೆ 38 ಸಾವಿರ ಹಾಗು ಮನೆ ನಿರ್ಮಾಣಕ್ಕೆ 5 ಲಕ್ಷ ನೀಡಲಾಗುತ್ತದೆ ಎಂಬುದನ್ನು ಈಗಾಲೇ ತಿಳಿಸಲಾಗಿದೆ ಎಂದರು.
ಜನರು ಇಲ್ಲಿ ತಡೆ ಗೋಡೆ ಹಾಗೂ ಸೇತುವೆಯ ಬೇಡಿಕೆಯನ್ನು ಇಟ್ಟಿದ್ದಾರೆ. ಅವರ ಅಹವಾಲಿಗೆ ಅನುಸಾರವಾಗಿ ಇಲ್ಲಿನ ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಸುಮಾರು ಎರಡೂವರೆ ಕಿ.ಮೀ.ನಷ್ಟು ಶಾಶ್ವತ ತಡೆಗೋಡೆ ಹಾಗು ದೊಡ್ಡ ಸೇತುವೆಗೆ ಕೂಡಲೇ ಮಂಜೂರಾತಿ ನೀಡುತ್ತೇನೆ ಎಂದರು.
ನನ್ನ ಇಲಾಖೆಗೆ ಸಂಬಂಧಪಟ್ಟಂತೆ ಎಲ್ಲಾ ವಿಭಾಗಗಳ ಪರಿಶೀಲನೆ ನಡೆಸುತ್ತಿದ್ದೇನೆ. ಕರಾವಳಿಯ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚೆ ಆಗಿದೆ. ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ನಮ್ಮ ಆಡಳಿತಾವಧಿಯಲ್ಲಿ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕರಾವಳಿ ಪ್ರದೇಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬೇಕಾಗಿದೆ. ಅಷ್ಟೇ ಅಲ್ಲದೆ ನೆರೆಯ ರಾಜ್ಯಗಳಿಂದ ಏನೆಲ್ಲಾ ಪರಿಣಾಮಗಳಾಬಹುದು ಎಂಬ ಬಗ್ಗೆಯೂ ಚರ್ಚೆ ಆಗಬೇಕಾಗಿದೆ. ಕೋಸ್ಟಲ್ ಸೆಕ್ಯುರಿಟಿ ಫೋರ್ಸ್‍ಗೆ ಹೆಚ್ಚಿನ ಬಲವನ್ನು ಕೊಡಬೇಕು ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿ ಭದ್ರಪಡಿಸಲು ಒತ್ತು ನೀಡಲಿದ್ದೇನೆ ಎಂದರು.
ಹೊರ ರಾಜ್ಯದಿಂದ ಬರುತ್ತಿರುವ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮಕ್ಕೆ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೋಲಿಸರ ನೈಟ್ ಬೀಟ್‍ನ್ನು ಜನಸ್ನೇಹಿಯಾಗಿ ಮಾಡುವಲ್ಲಿ ನೀಲ ನಕಾಶೆಯನ್ನು ವರಿಷ್ಠಾಧಿಕಾರಿಗಳು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ. ದೇಶವಿರೋಧಿ, ರಾಜ್ಯ ವಿರೋಧಿಗಳ ಹುಟ್ಟಡಗಿಸಲು ಸಕಲ ಪ್ರಯತ್ನಗಳನ್ನು ಗೃಹ ಇಲಾಖೆ ಮಾಡಲಿದೆ ಎಂದರು.
ಪರಿಹಾರಕ್ಕೆ ಇರುವ ನಿಯಮಗಳು ಸ್ಪಷ್ಟವಾಗಿರುವುದರಿಂದ ಯಾವುದೇ ಗೊಂದಲ ಇಲ್ಲ. ನೆರೆ ಬಂದಾಗ ಹೇಗೆ ಮತ್ತು ಏನು ಮಾಡಬೇಕು ಎಂಬುದರ ಬಗ್ಗೆ ಚಿಂತನೆ ಸರಕಾರದಲ್ಲಿ ಇದೆ. ಇಲ್ಲಿನ ಭೌಗೋಳಿಕತೆಗೆ ಅನುಸಾರವಾಗಿ ದೀರ್ಘಾವಧಿ ಪರಿಹಾರವನ್ನು ತಜ್ಞರ ಜೊತೆ ಚರ್ಚಿಸಿ ಅನುಷ್ಠಾನಕ್ಕೆ ತರಲಿದ್ದೇವೆ. ಬರುವಂತಹ ದಿನಗಳಲ್ಲಿ ನೀರಿನ ಬಳಕೆಯ ಬಗ್ಗೆಯೂ ದೂರದೃಷ್ಟಿಯ ಯೋಜನೆಗಳನ್ನು ತರಲಾಗುವುದು. ಪಶ್ಚಿಮ ಘಟ್ಟ ಪ್ರದೇಶಗಳು ಅತೀ ಸೂಕ್ಷ್ಮ ಪರಿಸರವನ್ನು ಹೊಂದಿರುವಂತಹದು. ಹೀಗಾಗಿ ಇಲ್ಲಿನ ಭೌಗೋಳಿಕತೆಗೆ ಮನುಷ್ಯನಿಂದ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಮನುಷ್ಯನ ಕ್ರಿಯಾ ಚಟುವಟಿಕೆಗಳಿಗೆ, ಅಭಿವೃದ್ದಿಗೆ ತೊಂದರೆಯಾಗದಂತೆ ಪ್ರಕೃತಿಯನ್ನು ಉಳಿಸಬೇಕು. ಎಕೋ ಸೆನ್ಸಿವಿಟಿ ಮೈಟೆನ್ ಮಾಡಬೇಕಾಗಿದೆ. ಹಾನಿಯಾದ ಐದು ಪಟ್ಟಿನಷ್ಟು ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆಯ ಮೂಲಕ ಮಾಡಬೇಕಾಗುತ್ತದೆ. ಅರಣ್ಯ ಮಾಫಿಯಾದ ಬಗ್ಗೆ ಗಮನ ಹರಿಸುತ್ತೇನೆ ಎಂದರು.
ತೋಟದಲ್ಲಿರುವ ಮರಳನ್ನು ತೆರವುಗೊಳಿಸಲು ಕೃಷಿಕರಿಗೆ ಈಗಾಗಲೇ ಅನುಮತಿಯನ್ನು ಸಂಬಂಧಪಟ್ಟ ಇಲಾಖೆ ನೀಡಿದೆ. ಇನ್ನು ನದಿಗೆ ತಡೆಗೋಡೆಯನ್ನು ಕಟ್ಟುವ ಸಂದರ್ಭದಲ್ಲಿ ನದಿಯಲ್ಲಿರುವ ಹೂಳನ್ನು ತೆಗೆದು ಬದಿಗೆ ಹಾಕಲಾಗುವುದು. ಯಾವುದಕ್ಕೂ ಮಳೆ ಸಂಪೂರ್ಣವಾಗಿ ನಿಲ್ಲಬೇಕಾಗುತ್ತದೆ ಎಂದು ಶಾಸಕ ಹರೀಶ ಪೂಂಜ ವಿವರಿಸಿದರು.
ಸಚಿವರ ಜೊತೆ ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಶೈಲಜಾ, ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಎಸ್.ಪಿ. ಲಕ್ಷ್ಮೀಪ್ರಸಾದ್, ಸರ್ಕಲ್ ಸಂದೇಶ್ ಪಿ.ಜಿ., ತಾ.ಪಂ. ಸದಸ್ಯರಾದ ಶಶಿಧರ ಎಂ. ಕಲ್ಮಂಜ, ಕೊರಗಪ್ಪ ಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಕಾರ್ಯದರ್ಶಿ ಸೀತಾರಾಮ ಬಿ.ಎಸ್., ಪಿಡಿಓ ಪ್ರಕಾಶ್ ಶೆಟ್ಟಿ ನೊಚ್ಚ, ತಹಸೀಲ್ದಾರ ಗಣಪತಿ ಶಾಸ್ತ್ರೀ, ಕಂದಾಯ ನಿರೀಕ್ಷಕ ರವಿ ಕುಮಾರ್, ಧರ್ಮಸ್ಥಳ ಠಾಣಾಧಿಕಾರಿ ಅವಿನಾಶ ಗೌಡ, ಸ್ಥಳೀಯರಾದ ಕೃಷ್ಣ ಭಟ್, ಕೃಷ್ಣ ಕುಮಾರ್, ಉಮೇಶ್ ಚಾರ್ಮಾಡಿ, ರವಿ ಕುಮಾರ್, ಮುಂಡಾಜೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಎನ್.ಎಸ್.ಗೋಖಲೆ, ನಾರಾಯಣ ಫಡ್ಕೆ ಮತ್ತಿತರರು ಇದ್ದರು.