ಬೆಳ್ತಂಗಡಿ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ನಡೆಯುತ್ತಿರುವ ಎಸ್.ಡಿ.ಎಂ. ರೊಟೋಲಾಯರ್ಸ್ ಕಪ್ ಚೆಸ್ ಪಂದ್ಯಾಟದ ಎರಡನೇ ದಿನ ನಡೆದ ಟೂರ್ನಮೆಂಟಿನ ಮೂರನೇ ಪಂದ್ಯಾಟದಲ್ಲಿ ಅಚ್ಚರಿಯ ಫಲಿತಾಂಶ ಬಂದಿದ್ದು, ಅಗ್ರ ಶ್ರೇಯಾಂಕಿತ ಆಟಗಾರ ತಮಿಳುನಾಡಿನ ಗ್ರ್ಯಾಂಡ್ ಮಾಸ್ಟರ್ ವಿಷ್ಣು ಪ್ರಸನ್ನರನ್ನು ಜಾರ್ಖಂಡ್ ರಾಜ್ಯದ 18ನೇ ಶ್ರೇಯಾಂಕದ ಸ್ವರಾಜ್ ಪಲಿತ್ ಕೆಡಹಿ ಗೆಲುವಿನ ನಗೆ ಬೀರಿದರು.
43ನೇ ನಡೆಯ ನಂತರ ತೀವ್ರ ಹಿನ್ನಡೆಯನ್ನು ಕಂಡ ಗ್ರ್ಯಾಂಡ್ ಮಾಸ್ಟರ್ ವಿಷ್ಣು ಪ್ರಸನ್ನ ತನ್ನ ಶರಣಾಗತಿಯನ್ನು ಒಪ್ಪಿಕೊಂಡರು.
ಇದು ಈ ಟೂರ್ನಮೆಂಟಿನಮೊದಲ ಅಚ್ಚರಿಯ ಫಲಿತಾಂಶವಾಗಿದ್ದು, ಉಳಿದಂತೆ ಶ್ರೇಯಾಂಕಿತ ಆಟಗಾರರು ತಮ್ಮ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. 2000ಕ್ಕೂ ಅಧಿಕ ಫಿಡೇ ರೇಟಿಂಗ್ ಹೊಂದಿರುವ 15ಮಂದಿ ಆಟಗಾರರು ಭಾಗವಹಿಸಿರುವ ಈ ಪಂದ್ಯಾಕೂಟ ಅತ್ಯಂತ ಕಠಿಣವಾಗಿದ್ದು, ಫಲಿತಾಂಶ ಯಾವ ಏರುಪೇರಾದರೂ ಅಚ್ಚರಿಯಿಲ್ಲ ಎಂದು ಪಂದ್ಯಾಟದ ತೀರ್ಪುಗಾರರು ಅಭಿಪ್ರಾಯಿಸಿದ್ದಾರೆ.