ಬೆಳ್ತಂಗಡಿ: ನೀರಲ್ಲಿ ಮುಳುಗಿ ಬಾಲಕನೊಬ್ಬ ಮೃತಪಟ್ಟ ಘಟನೆ ವೇಣೂರು ಸನಿಹದ ಆರಂಬೋಡಿಯಲ್ಲಿ ಶುಕ್ರವಾರ ಸಂಭವಿಸಿದೆ.
ಮೃತ ಬಾಲಕನನ್ನು ಹೊಸಂಗಡಿ ಗ್ರಮದ ಪೇರಿ ಜನತಾ ಕಾಲೋನಿ ನಿವಾಸಿ ರವಿ ಅವರ ಪುತ್ರ ಅಭಿಷೇಕ್(12) ಎಂದು ಗುರುತಿಸಲಾಗಿದೆ. ಈತ ಮಾರೂರು ಸ.ಹಿ.ಪ್ರಾ. ಶಾಲೆಯ 6 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.
ವಿಪರೀತ ಮಳೆಯ ಕಾರಣ ಶುಕ್ರವಾರ ಶಾಲೆಗೆ ರಜೆ ನೀಡಲಾಗಿತ್ತು. ಈ ಸಂದರ್ಭ ಸಹೋದರ ದೀಕ್ಷಿತ್ ಹಾಗೂ ನೆರೆಯ ಬಾಲಕರೊಂದಿಗೆ ಅಭಿಷೇಕ್ ಜತೆಯಾಗಿ ನೀರಲ್ಲಿ ಆಟವಾಡಲು ತೆರಳಿದ್ದ. ಈ ವೇಳೆ ಹಳ್ಳದಲ್ಲಿ ತುಂಬಿದ್ದ ನೀರಿನಲ್ಲಿ ಅಭಿಷೇಕ್ ಈಜಾಡಲೆಂದು ಇಳಿದಿದ್ದು, ಆದರೆ ಮೇಲೆ ಬರಲಾಗದೆ ಮೃತಪಟ್ಟಿದ್ದಾನೆ.
ಭಯದಿಂದ ಘಟನೆಯನ್ನು ಉಳಿದ ಮಕ್ಕಳು ಪೋಷಕರಿಗೆ ತಿಳಿಸಿರಲಿಲ್ಲ. ಸಂಜೆಯಾದರೂ ಅಭಿಷೇಕ್ ವಾಪಾಸು ಆಗದೇ ಇದ್ದಾಗ ಮನೆ ಮಂದಿ ಹಾಗೂ ಸಂಬಂಧಿಕರು ಹುಡುಕಾಟ ನಡೆಸಿದ್ದಾರೆ. ಪೆರಿಯೊಟ್ಟು ಬಳಿಯ ಹಳ್ಳವೊಂದರ ಬದಿಯಲ್ಲಿ ಅಭಿಷೇಕ್ ನ ಅಂಗಿ ಪತ್ತೆಯಾಗಿತ್ತು. ಸಂಶಯಗೊಂಡ ಸ್ಥಳೀಯರು ಹಳ್ಳದ ನೀರಿನಲ್ಲಿ ಹುಡುಕಾಟ ನಡೆಸಿದಾಗ ಅಭಿಷೇಕ್ ನ ಮೃತದೇಹ ನೀರಿನಲ್ಲಿ ಪತ್ತೆಯಾಗಿದೆ. ಮೂಡಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತ ಬಾಲಕನ ತಂದೆ ರವಿ ನೀಡಿದ ದೂರಿನಲ್ಲಿ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.