ಬೆಳ್ತಂಗಡಿ: ವನಸಂಪತ್ತು ಅಂದರೆ ಏನು ಎಂಬುದನ್ನು ಮುಂದಿನ ಪೀಳಿಗೆ ಅರಿತುಕೊಳ್ಳುವ ಉದ್ದೇಶದಿಂದ ಕರ್ನಾಟಕ ಅರಣ್ಯ ಇಲಾಖೆಯು ರಾಜ್ಯದೆಲ್ಲೆಡೆ ಪ್ರತಿ ತಾಲೂಕಿಗೊಂದರಂತೆ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ನಿರ್ಮಿಸಿ ಪರಿಚಯಿಸುವ ಮೂಲಕ ಅರಣ್ಯ ರಕ್ಷಣೆಯ ಸಂದೇಶ ಸಾರಿದೆ.
ಪ್ರಸಕ್ತ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಮೇಲಂತಬೆಟ್ಟು ಹಾಗೂ ಲಾೈಲ ಗ್ರಾಮದ ಗಡಿಯಲ್ಲಿರುವ ಕಲ್ಲಗುಡ್ಡೆ ಪ್ರದೇಶದಲ್ಲಿ 25 ಎಕ್ರೆ ಸ್ಥಳವಕಾಶದಲ್ಲಿ ಆಕರ್ಷಕ ವೃಕ್ಷ ಉದ್ಯಾನ ಲೋಕಾರ್ಪಣೆಗೆ ಸಿದ್ಧವಾಗುತ್ತಿದೆ.
ಕಾಡು ನಾಡಾಗುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ಮುಂದಿನ ಪೀಳಿಗೆಗೆ ಪ್ರಕೃತಿಯ ನೈಜಸ್ವರೂಪ ತೆರೆದಿಡುವ ಸದುದ್ದೇಶದಿಂದ ರಮಾನಾಥ ರೈ ಅರಣ್ಯ ಸಚಿವರಾಗಿದ್ದ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿದ್ದ ಈ ಯೋಜನೆ ಕಳೆದ ಮಾರ್ಚ್ 2018ರಿಂದ ಕಾಮಗಾರಿ ಆರಂಭಗೊಂಡು ಇದೀಗ ಉದ್ಘಾಟನೆ ಹಂತದಲ್ಲಿದೆ.
ವಿಶಾಲ ಪಾರ್ಕ್ ಯೋಜನೆ
ಈಗಾಗಲೇ ದ.ಕ. ಜಿಲ್ಲೆಯ ಮಂಗಳೂರಿನ ಬೆಂಗ್ರೆ, ಬಂಟ್ವಾಳದ ಕುರ್ಸುಗುಡ್ಡೆ, ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ ಸುಬ್ರಹ್ಮಣ್ಯ ಸಮೀಪ ನಿರ್ಮಾಣ ಹಂತದಲ್ಲಿದೆ. ಪುತ್ತೂರು ವೃಕ್ಷ ಉದ್ಯಾನ ಉದ್ಘಾಟನೆಗೊಂಡಿದ್ದು, ಬೆಳ್ತಂಗಡಿ ಪಾರ್ಕ್ ಉದ್ಘಾಟನೆಗೆ ಸಜ್ಜಾಗಿದೆ. ಪ್ರಾದೇಶಿಕ ಅರಣ್ಯ ವಲಯ ಬೆಳ್ತಂಗಡಿಗೆ ಒಳಪಡುವ 32 ಸಾವಿರ ಎಕ್ರೆಯಲ್ಲಿ 25 ಎಕ್ರೆ ಪ್ರದೇಶವನ್ನು ವೃಕ್ಷೋದ್ಯಾನಕ್ಕೆ ಮೀಸಲಿಡುವ ಮೂಲಕ ಜಿಲ್ಲೆಯಲ್ಲೇ ವಿಸ್ತೃತ ಪಾರ್ಕ್ ಜನಸಾಮಾನ್ಯರಿಗೆ ಪ್ರವಾಸಿಗರಿಗೆ ಲಭ್ಯವಾಗಲಿದೆ.
ನಿರ್ಮಾಣ ವೆಚ್ಚ ರೂ. 59 ಲಕ್ಷ
ಅರಣ್ಯ ಇಲಾಖೆಯಿಂದ ಈ ವರೆಗೆ ಸುಮಾರು 59 ಲಕ್ಷ ರೂ. ವೆಚ್ಚದಲ್ಲಿ ಮುಖ್ಯ ದ್ವಾರ, ವಾಕಿಂಗ್ ಟ್ರಾಕ್ ಬದು ನಿರ್ಮಾಣ, ಮಕ್ಕಳ ಆಟದ ಸ್ಥಳ, ಶೌಚಾಲಯ, ವಿರಮಿಸಲು 24 ಆಸನ, ಕಸದ ಬುಟ್ಟಿ, 5 ಸಾವಿರದ ಲೀ. ಸಾಮಥ್ರ್ಯದ ಎರಡು ಓವರ್ ಹೆಡ್ ನೀರಿನ ಟ್ಯಾಂಕ್, ವೆಸ್ಟರ್ನ್ ಘಾಟ್ ಗಿಡಗಳು, ಬೋರ್ವೆಲ್, ಅರಣ್ಯ ರಕ್ಷಕ ಉಳಿದುಕೊಳ್ಳುವ ಕೊಠಡಿ ಸೇರಿದಂತೆ ಅವಶ್ಯಕತೆಗಳನ್ನು ಪೂರೈಸಲಾಗಿದೆ.
ಮಕ್ಕಳಿಗೆ ಆಟದ ಮೈದಾನ
ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಇದು ಅತ್ಯುತ್ತಮ ಚಿಂತನೆಯಾಗಿದೆ. ಹೆಚ್ಚಾಗಿ ಬೆಂಗಳೂರು ಮೈಸೂರುಗಳಲ್ಲಿ ವಾಕಿಂಗ್ ಪಾರ್ಕ್ ಕಾಣಲು ಸಾಧ್ಯ. ಆದರೆ ಗ್ರಾಮೀಣ ಭಾಗದಲ್ಲೂ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶವಾಗಿದೆ. ಮತ್ತೊಂದೆಡೆ ಪ್ರಾಕೃತಿಕ ಮಡಿಲಲ್ಲಿ ವಾಯುವಿಹಾರ, ಯೋಗ, ಪ್ರಾಣಾಯಾಮ, ಧ್ಯಾನ ಕ್ರಿಯೆಗಳಿಗೆ ಅತ್ಯುತ್ತಮ ಕೊಡುಗೆಯಾಗಿದೆ. ಮಕ್ಕಳಿಗಾಗಿ ಜಾರುಬಂಡಿ, ತೂಗುಯ್ಯಾಲೆಯ ಹೊರಾಂಗಣ ಪ್ಲೇ ಗ್ರೌಂಡ್ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ.
ಪ್ಲಾಸ್ಟಿಕ್ ಇಲ್ಲವೇ ಇಲ್ಲ
ವೃಕ್ಷೋದ್ಯಾನದೊಳಗೆ ಪ್ಲಾಸ್ಟಿಕ್ ಮುಕ್ತ ಚಿಂತನೆ ಹೊಂದಲಾಗಿದೆ. ಇದಕ್ಕಾಗಿ ನೀರಿನ ಬಾಟಲ್ ಸೇರಿದಂತೆ ತಿಂಡಿ ತಿನಿಸುಗಳು ಒಳ ಪ್ರವೇಶಿಸುವ ಮುನ್ನ ನಿರ್ದಿಷ್ಟ ಮೊತ್ತ ತೆರಬೇಕು. ಬಳಿಕ ಹಿಂದಿರುಗುವಾಗ ಪ್ಲಾಸ್ಟಿಕ್ ವಸ್ತುಗಳನ್ನು ನೀಡಿ ಹಣ ಹಿಂಪಡೆಯುವಂತ ಕಲ್ಪನೆ ಹೊಂದಿದೆ.
ಪ್ರಾಣಿ, ಪಕ್ಷಿಗಳ, ಪರಿಸರದ ಮಾಹಿತಿ ಸಂದೇಶ
ವಿಹಾರಕ್ಕೆ ಬರುವವರಿಗೆ ಪ್ರಾಣಿ, ಪಕ್ಷಿ ಸೇರಿದಂತೆ ಅರಣ್ಯ ಸಂಪತ್ತು, ವೈಜ್ಞಾನಿಕ ಹಿನ್ನೆಲೆ ಒಳಪಡುವ ಮಾಹಿತಿ ಫಲಕವನ್ನು ಅಳವಡಿಸಲಾಗಿದೆ. ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳವ ದೃಷ್ಟಿಯಿಂದ ಶಾಸಕರು ಹೆಚ್ಚಿನ ಅನುದಾನಕ್ಕಾಗಿ ಎಂಆರ್ಪಿಎಲ್ ಹಾಗೂ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ಈ ಮೂಲಕ ಸುಸಜ್ಜಿತ ವಾಕಿಂಗ್ಟ್ರ್ಯಾಕ್, ಸುಂದರೀಕರಣಕ್ಕೆ ಒತ್ತು ಕೊಡುವ ಇರಾದೆ ಹೊಂದಲಾಗಿದೆ.
ಪಶ್ಚಿಮ ಘಟ್ಟದ ವಿವಿಧ ಜಾತಿ ಮರಗಳ ಬೆಳೆಯುವ ಉದ್ದೇಶ
10 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 25 ಅರಣ್ಯ ಜಾತಿಯ ಫಲನೀಡುವ ಗಿಡಗಳನ್ನು ನೆಡಲಾಗಿದ್ದು, ಇಲ್ಲಿರುವ ಕಾಡು ಪ್ರಾಣಿಗಳಿಗೆ ಆಹಾರ ಒದಗಿಸುವ ಚಿಂತನೆಯಿದೆ. ಅರಳಿ, ಆಲ, ಅತ್ತಿ, ಮಾವು, ಹಲಸು, ಹೆಬ್ಬಲಸು, ಬಿದಿರು, ರಾಮಪತ್ರೆ, ನೇರಳೆ, ನೆಲ್ಲಿ, ಹೊಂಗೆ, ಬೇಂಗ, ಸಂಪಿಗೆ, ದಾಲ್ಚಿನ್ನಿ, ಪುನಾರ್ಪುಳಿ ಸೇರಿದಂತೆ ಅನೇಕ ಬಗೆಯ ಗಿಡಗಳು ಇಲ್ಲಿವೆ. ಜಿಂಕೆ, ನವಿಲು ಸೇರಿದಂತೆ ಅಳಿವನಂಚಿನಲ್ಲಿರುವ ಪ್ರಾಣಿಗಳು ಸುತ್ತಮ್ತುತ ಇವೆ. ಈ ನಿಟ್ಟಿನಲ್ಲಿ 1.6 ಕಿ.ಮೀ ಯೊಳಗೆ ಪ್ರಾಣಿಗಳಿಗೆ ಅವಕಾಶ ನೀಡದಂತೆ ಫ್ಯಾನ್ಸಿಂಗ್ ನಿರ್ಮಾಣ ಮಾಡಲಾಗಿದೆ. ಅದರೊಳಗೆ ವಾಕಿಂಗ್ ಟ್ಯ್ರಾಕ್ ನಿರ್ಮಾಣ ಮಾಡಲಾಗಿದೆ.
ವೃಕ್ಷೋದ್ಯಾನ ಸಂಪೂರ್ಣ ಅಭಿವೃದ್ಧಿಗಾಗಿ ಅನುದಾನ ಕೊರತೆಯಿದ್ದು, ಸರಕಾರ ಹಾಗೂ ಎಂಆರ್ಪಿಎಲ್ ನಿಂದ ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ ಮುಂದಿಡಲಾಗಿದೆ. ಜನರ ಉಪಯೋಗಕ್ಕಾಗಿ ಸುಸಜ್ಜಿತ ವೃಕ್ಷ ಉದ್ಯಾನ ಕೊಡುಗೆಯಾಗಿ ನೀಡುವುದು ನಮ್ಮ ಉದ್ದೇಶ.
ಶಾಸಕ ಹರೀಶ್ ಪೂಂಜ
ತಾಲೂಕಿಲ್ಲಿ ಪ್ರಕೃತಿದತ್ತ ಪಾರ್ಕ್ ನಿರ್ಮಾಣದಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಪ್ರವಾಸೋದ್ಯಮ ದೃಷ್ಟಿಯಿಂದಲೂ ನಗರಕ್ಕೆ ಆದಾಯ ತರಲಿದೆ. ಜನರು ಸಾರ್ವಜನಿಕ ಸೊತ್ತು ಎಂಬುದನ್ನು ಗಮನದಲ್ಲಿಟ್ಟು ಸದುಪಯೋಗ ಪಡಿಸಿಕೊಳ್ಳಬೇಕು
ಬಿ.ಸುಬ್ಬಯ್ಯ ನಾಯ್ಕ್, ವಲಯ ಅರಣ್ಯಾಧಿಕಾರಿ, ಬೆಳ್ತಂಗಡಿ.