ಸುಳ್ಯ: ಸಂಪಾಜೆ ಮತ್ತು ಅರಂತೋಡು ಪರಿಸರದಲ್ಲಿ ಬಾಧಿಸಿರುವ ಅಡಿಕೆ ಎಲೆ ಹಳದಿ ರೋಗದ ಕುರಿತು ಅಧ್ಯಯನ ಮತ್ತು ಬದಲಿ ಕೃಷಿಯ ಕುರಿತು ಸರಕಾರಕ್ಕೆ ಪರಿಣಾಮಕಾರಿ ರೀತಿಯಲ್ಲಿ ಹಕ್ಕೊತ್ತಾಯ ಮಂಡಿಸುವ ಸಲುವಾಗಿ ಅಡಿಕೆ ಎಲೆ ಹಳದಿ ಪೀಡಿತ ಪ್ರದೇಶದ ರೈತರ ಅಹವಾಲು ಸ್ವೀಕಾರ ಮತ್ತು ಬದಲಿ ಕೃಷಿಯ ಕುರಿತು ವಿಚಾರ ಸಂಕಿರಣ ಅರಂತೋಡು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ಶಾಸಕ ಎಸ್.ಅಂಗಾರ ಉದ್ಘಾಟಿಸಿದರು. ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಂಟಾಗಿರುವ ಹಳದಿ ಎಲೆ ರೋಗದಿಂದ ನಷ್ಟ ಉಂಟಾಗಿರುವ ಕೃಷಿಕರಿಗೆ ಸಮರ್ಪಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಕೃಷಿ ಮತ್ತು ತೋಟಗಾರಿಕಾ ಸಚಿವರ ಜೊತೆ ಚರ್ಚೆ ನಡೆಸುವುದಾಗಿ ಅವರು ಹೇಳಿದರು. ಕೃಷಿಕರು ಮುಂದಿರಿಸಿದ ಎಲ್ಲಾ ಅಹವಾಲುಗಳನ್ನು ಕ್ರೂಢೀಕರಿಸಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಿ ಸಮಗ್ರ ವಿವರಗಳನ್ನೊಳಗೊಂಡ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿ ಸಮರ್ಪಕವಾದ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ಹಳದಿ ಪೀಡಿತ ಪ್ರದೇಶದ ಸರ್ವೆ: ಡಾ.ಸೆಲ್ವಮಣಿ
ಅಡಿಕೆ ರೋಗಕ್ಕೆ ಹಳದಿ ಎಲೆ ರೋಗ ಬಾದಿಸಿ ಕೃಷಿ ನಾಶವಾದ ಪ್ರದೇಶದ ಸಮಗ್ರ ಸರ್ವೆ ನಡೆಸಲಾಗುದು ಎಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ.ಆರ್ ಹೇಳಿದ್ದಾರೆ. ಹಳದಿ ರೋಗಕ್ಕೆ ಕಾರಣ ಮತ್ತು ಅದರ ಪರಿಹಾರದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕಾಗಿದೆ. ಈ ಕುರಿತು ವಿಜ್ಞಾನಿಗಳ ಜೊತೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು. ಪರ್ಯಾಯ ಕೃಷಿಯನ್ನು ಅನುಕೂಲಕ್ಕೆ ತಕ್ಕಂತೆ ರೈತರೇ ಆಯ್ಕೆ ಮಾಡಬೇಕು. ಸಾಂಬಾರ ಬೆಳೆಗಳನ್ನು ಬೆಳೆಸಲು ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.
ಸುಳ್ಯ ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಸದಸ್ಯರಾದ ಪುಷ್ಪಾ ಮೇದಪ್ಪ, ಉದಯ ಕೊಪ್ಪಡ್ಕ, ಎಪಿಎಂಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್.ಆರ್.ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.