ಬೆಳ್ತಂಗಡಿ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ಇದೇ 22 ರಿಂದ 27 ರ ವರೆಗೆ ನಡೆಯಲಿವೆ.
ನ.25 ರಂದು ಸೋಮವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ಸರ್ವಧರ್ಮ ಸಮ್ಮೇಳನದ ಎಂಬತ್ತ ಏಳನೆ ಅಧಿವೇಶನವನ್ನು ನಿಕಟಪೂರ್ವ ಲೋಕಸಭಾ ಅಧ್ಯಕ್ಷರಾದ ಸುಮಿತ್ರಾ ಮಹಾಜನ್ ಉದ್ಘಾಟಿಸುವರು.
ಇಸ್ಕಾನ್ ಸಂಸ್ಥೆಯ ಗೌರ್ ಗೋಪಾಲ ದಾಸ್ ಅಧ್ಯಕ್ಷತೆ ವಹಿಸುವರು.ಮೈಸೂರಿನ ಫೋಕಸ್ ಅಕಾಡೆಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಟಿ. ರಾಮಾನುಜಮ್, ದಿ ಟೈಮ್ಸ್ ಗ್ರೂಪ್ಸ್ ನ ಉಪ ಮಹಾಪ್ರಬಂಧಕ ಕದ್ರಿ ನವನೀತ ಶೆಟ್ಟಿ ಮತ್ತು ಪುತ್ತೂರಿನ ಖ್ಯಾತ ಲೇಖಕ ಬೊಳುವಾರು ಮಹ್ಮದ್ ಕುಂಞ ಧಾರ್ಮಿಕ ಉಪನ್ಯಾಸ ನೀಡುವರು.
ವಿದ್ವಾನ್ ಡಾ. ಕೆ. ವಾಗೀಶ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮವಿದೆ. ಇದೇ 26 ರಂದು ಮಂಗಳವಾರ ಸಾಹಿತ್ಯ ಸಮ್ಮೇಳನದ ಎಂಬತ್ತೇಳನೆ ಅಧಿವೇಶನವನ್ನು ರಾಜ್ಯದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಉದ್ಘಾಟಿಸುವರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸುವರು.
ಕುಮಟಾದ ಖ್ಯಾತ ಸಾಹಿತಿ ಶ್ರೀಧರ ಬಳಗಾರ, ಉಡುಪಿಯ ವೀಣಾ ಬನ್ನಂಜೆ ಮತ್ತು ಖ್ಯಾತ ವಾಗ್ಮಿ ರಿಚರ್ಡ್ ಲೂಯಿಸ್ ಉಪನ್ಯಾಸ ನೀಡುವರು.
ಬೆಂಗಳೂರಿನ ವಿದ್ವಾನ್ ಅಶೋಕ್ ಕುಮಾರ್ ಮತ್ತು ಬಳಗದವರಿಂದ ಕಥಕ್ ನೃತ್ಯ ರೂಪಕ ಪ್ರದರ್ಶನವಿದೆ.