News Kannada
Sunday, September 25 2022

ಕರಾವಳಿ

ನಾಲ್ಕು ದಶಕಗಳ ಸಾಹಿತ್ಯ ತಪಸ್ಸು: ಪುಸ್ತಕ ರಚನೆಯಲ್ಲಿ ದ್ವಿಶತಕದ ಸಾಧನೆ - 1 min read

Photo Credit :

ನಾಲ್ಕು ದಶಕಗಳ ಸಾಹಿತ್ಯ ತಪಸ್ಸು: ಪುಸ್ತಕ ರಚನೆಯಲ್ಲಿ ದ್ವಿಶತಕದ ಸಾಧನೆ

ಸುಳ್ಯ: ನಾಲ್ಕು ದಶಕಗಳ ಸಾಹಿತ್ಯ ತಪಸ್ಸಿನಲ್ಲಿ ಪುಸ್ತಕ ರಚನೆಯಲ್ಲಿ ದ್ವಿಶತಕದ ಸಾಧನೆ ಮಾಡಿದವರು ಸುಳ್ಯದ ಸಾಹಿತಿ, ನಿವೃತ್ತ ಪ್ರಾಂಶುಪಾಲ, ಅರ್ಥಶಾಸ್ತ್ರಜ್ಞ ಡಾ.ಬಿ.ಪ್ರಭಾಕರ ಶಿಶಿಲ. ಬರಹವನ್ನೇ ಬದುಕಾಗಿಸಿದ ಡಾ.ಶಿಶಿಲರು 40 ವರ್ಷದಲ್ಲಿ ಬರೋಬರಿ 210 ಪುಸ್ತಕಗಳನ್ನು ಬರೆದಿದ್ದಾರೆ. ಇದೀಗ ತನ್ನ ಜೀವನವನ್ನೇ ಪುಸ್ತಕವಾಗಿಸಿದ ಅವರ ಆತ್ಮಕಥನ `ಬೊಗಸೆ ತುಂಬಾ ಕನಸು’ ಬಿಡುಗಡೆಗೆ ಸಿದ್ಧವಾಗಿದೆ.

ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದ ಅರ್ಥಶಾಸ್ತ್ರದ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿ ಪ್ರಾಂಶುಪಾಲರಾಗಿ ನಿವೃತ್ತರಾದ ಡಾ.ಶಿಶಿಲರ ಆತ್ಮ ಕಥನ ನ.15ರಂದು ಬಿಡುಗಡೆಯಾಗಲಿದೆ. ಇವರ ಮೊದಲ ಪುಸ್ತಕ 1979ರಲ್ಲಿ ಬಿಡುಗಡೆಯಾಯಿತು. ಆ ಬಳಿಕ ಅವರು ಹಿಂತಿರುಗಿ ನೋಡಿಲ್ಲ. ವರ್ಷಕ್ಕೆ ಸರಾಸರಿ ಐದು ಕೃತಿಗಳಂತೆ ಒಟ್ಟು 40 ವರ್ಷದಲ್ಲಿ ಈ ಮೇಷ್ಟ್ರು 209 ಕೃತಿಗಳನ್ನು ಹೊರ ತಂದಿದ್ದು 210ನೇ ಪುಸ್ತಕವಾಗಿ ತಮ್ಮ ಆತ್ಮಕಥೆ ರಚಿಸಿದ್ದಾರೆ.

ವಿಶ್ವ ವಿದ್ಯಾನಿಲಯಗಳಲ್ಲಿನ ಎಲ್ಲಾ ತರಗತಿಗಳ ಅರ್ಥಶಾಶ್ತ್ರ ವಿದ್ಯಾರ್ಥಿಗಳಿಗೂ ಸಹಾಯಕವಾಗುವಂತೆ ಅರ್ಥಶಾಸ್ತ್ರ ಕೃತಿಗಳನ್ನು ರಚಿಸಿದ್ದಾರೆ. ಸರಳವಾಗಿ ಸ್ಥಳೀಯ ಕನ್ನಡದ ಸಂಸ್ಕೃತಿಗೆ ಹೋಲಿಕೆಯಾಗುವಂತೆ ಕನ್ನಡ ಅರ್ಥಶಾಸ್ತ್ರ ಪುಸ್ತಕ ರಚಿಸಿರುವ ಕಾರಣ ವಿದ್ಯಾರ್ಥಿಗಳಿಗೂ ಇವರ ಪುಸ್ತಕಗಳು ಅಚ್ಚು ಮೆಚ್ಚು. 152 ಕನ್ನಡ ಮತ್ತು 15 ಇಂಗ್ಲೀಷ್ ಸೇರಿ 167 ಅರ್ಥಶಾಸ್ತ್ರ ಕೃತಿಗಳು ಮತ್ತು ಹಲವಾರು ಸೃಜನಶೀಲ ಕೃತಿಗಳನ್ನೂ, ಅಧ್ಯಯನ ಕಾದಂಬರಿಗಳನ್ನೂ ಹೊರತಂದಿದ್ದಾರೆ. ಬರಹ ಎಂದರೆ ಶಿಶಿಲರಿಗೆ ಪ್ರಾಣವಾಯುವಿದ್ದಂತೆ. ಬರೆಯದೆ ಇರಲಾರದು ಎಂಬುದಕ್ಕೆ ಇವರ `ಏನ್ ಗ್ರಾಚಾರ ಸಾರ್’ ಕೃತಿ ಅತ್ಯುತ್ತಮ ಉದಾಹರಣೆ. 2009ರಲ್ಲಿ ವಾಹನ ಅಪಘಾತವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಕಳೆದ ಸಂದರ್ಭದಲ್ಲಿ ಬರೆದ ಪುಸ್ತಕ ಇದು. ಆಸ್ಪತ್ರೆಯ ಅನುಭವಗಳನ್ನು ಒಳಗೊಂಡು ಆಸ್ಪತ್ರೆಯ ಬೆಡ್‍ನಲ್ಲಿಯೇ ಕೃತಿ ರಚಿಸಿದರು. ಸಾಹಿತ್ಯ ರಚನೆಯಲ್ಲಿ ಹಲವಾರು ಪ್ರಯೋಗಗಳ ಮೂಲಕ ಗಮನ ಸೆಳೆದ ಶಿಶಿಲರು 10-10-2010 ರಂದು ಹತ್ತು ಪುಸ್ತಕಗಳನ್ನು ಒಟ್ಟಿಗೆ ಹೊರ ತಂದು ದಾಖಲೆ ಬರೆದಿದ್ದರು.

 7 ತಿಂಗಳಲ್ಲಿ 700 ಪುಟ ಬರೆದರು

ಹೀಗೆ ಬರಹವನ್ನೇ ಬದುಕಾಗಿಸಿದ ಶಿಶಿಲರಿಗೆ ಕೆಲವು ದಿನ ಏನು ಬರೆಯಬೇಕು ಎಂದು ಹೊಳೆಯಲಿಲ್ಲ. ಒಂದು ದಿನವೂ ಬಿಡದೆ ನಿರಂತರವಾಗಿ ಬರೆಯುವ ವಸ್ತುವಿನ ಹುಡುಕಾಟದಲ್ಲಿದ್ದಾಗ ಶಿಶಿಲರಿಗೆ ಹೊಳೆದದ್ದು ತಮ್ಮದೇ ಬದುಕು. ಬದುಕನ್ನೇ ಪುಸ್ತಕ ರೂಪಕ್ಕಿಳಿಸಲು ಯೋಚಿಸಿ ಬರೆಯಲು ಆರಂಭಿಸಿದರು. 7 ತಿಂಗಳಲ್ಲಿ 700 ಪುಟಗಳನ್ನು ಬರೆದು ಮುಗಿಸಿದರು. ತನ್ನ ಬದುಕಿನ ನಾಲ್ಕನೇ ವರ್ಷದಿಂದ 67ನೇ ವಯಸ್ಸಿನವರೆಗೆ ಪ್ರತಿ ಘಟನೆಯನ್ನೂ ಎಳೆ ಎಳೆಯಾಗಿ 30 ಅಧ್ಯಾಯದಲ್ಲಿ ವಿವರಿಸಿದ್ದಾರೆ. ನೆಗೆಟಿವ್ ವಿಚಾರಗಳನ್ನೂ, ವಿವಾದಗಳನ್ನೂ ನಿರ್ಲಕ್ಷಿಸಿ ಧನಾತ್ಮಕ ಅಂಶಗಳನ್ನೂ, ಸುಂದರ ನಿಮಿಷಗಳನ್ನೂ ಸ್ವಾರಷ್ಯಕರವಾಗಿ ಪುಸ್ತಕದಲ್ಲಿ ಚಿತ್ರಸಿದ್ದೇನೆ ಎನ್ನುತ್ತಾರವರು. ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣ, ವೃತ್ತಿ ಜೀವನದ ಆರಂಭದ ಹಾಸನದ ಒಂದು ವರ್ಷ. 23 ವರ್ಷದ ಯುವ ಅಧ್ಯಾಪಕ 1500 ಸಾವಿರ ವಿದ್ಯಾರ್ಥಿನಿಯರಿಗೆ ಪಾಠ ಮಾಡಿದ ಆ ದಿನಗಳು, ಬಳಿಕ ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯದ ವೃತ್ತಿ ಜೀವನವನ್ನು ವಿವರಿಸಿದ್ದಾರೆ. ಕಾಂತಮಂಗಲದ ಮನೆ, ಪ್ರಕೃತಿಯ ಜೊತೆಗಿನ ನಂಟು, ಯಕ್ಷಗಾನ, ಕಲೆ, ಸಾಹಿತ್ಯ, ನಾಟಕದ ಒಡನಾಟದೊಂದಿಗೆ ಸುಳ್ಯದ ಸಾಂಸ್ಕøತಿಕ ಜಗತ್ತಿನಲ್ಲಿ ತನ್ನನ್ನು ತೆರೆದುಕೊಂಡ ಬಗೆ, ನೆಹರೂ ಸ್ಮಾರಕ ಮಹಾ ವಿದ್ಯಾಲಯದ ವೃತ್ತಿ ಜೀವನದ ಅವಧಿ ಮತ್ತು ಸುಳ್ಯದ ಅಮರಶಿಲ್ಪಿ ಡಾ.ಕುರುಂಜಿ ವೆಂಕಟರಮಣ ಗೌಡ ಅವರೊಂದಿಗಿನ ಹೃದ್ಯವಾದ ಸಂಬಂಧಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸಲಾಗಿದೆ. ಪ್ರಕೃತಿ, ನೆಲ,ಜಲ, ಚಾರಣಗಳ ಕುರಿತಾದ ಆಕರ್ಷಕ ಅನುಭವಗಳನ್ನು ದಾಖಲಿಸಲಾಗಿದೆ. ತನ್ನ ಮದುವೆಯ ಬಗ್ಗೆ `ಮದುವೆಯ ಈ ಬಂಧ’ ಎಂದು ಒಂದು ಅಧ್ಯಾಯವನ್ನೇ ಬರೆದಿದ್ದಾರೆ. ಜೊತೆಗೆ ಪತ್ನಿ, ಮಕ್ಕಳು, ಕುಟುಂಬ, ಮಿತ್ರರು, ಶಿಷ್ಯರು, ಸಹೋದ್ಯೋಗಿಗಳು ಹೀಗೆ ತನ್ನ ಜೀವನ ಯಾತ್ರೆಯ ಭಾಗವಾದ ಪ್ರತಿಯೊಬ್ಬರ ಬಗ್ಗೆಯೂ ಉಲ್ಲೇಖವಿದೆ ಎನ್ನುತ್ತಾರವರು.

See also  ಪುತ್ತೂರು ಕಬಕದಲ್ಲಿ ಅನಧಿಕೃತ ಅಂಗಡಿಗಳ ತೆರವು

 `ಬೊಗಸೆ ತುಂಬಾ ಕನಸು’

ಬೊಗಸೆ ತುಂಬಾ ಕನಸುಗಳನ್ನು ಹೊತ್ತು ವೃತ್ತಿ ಜೀವನಕ್ಕೆ, ಸಾಹಿತ್ಯ ಲೋಕಕ್ಕೆ ಧುಮುಕಿದ ಯುವಕ ಅದನ್ನು ಒಂದೊಂದನ್ನೇ ಸಾಧಿಸುತ್ತಾ ಹೋಗಿ 67ನೇ  ವರ್ಷದಲ್ಲಿಯೂ ಕನಸು ಕಾಣುತ್ತಾ ಸಾಹಿತ್ಯ ಲೋಕದಲ್ಲಿ ವಿಹರಿಸುತ್ತಿರುವ ಹೃದಯ ನನ್ನದು. ತನ್ನ ಕನಸು ಮತ್ತು ಬದುಕಿನ ನಡುವಿನ ಈ ಅವಿನಾಭಾವ ಸಂಬಂಧವೇ ಬೊಗಸೆ ತುಂಬಾ ಕನಸು ಎಂದು ಡಾ.ಪ್ರಭಾಕರ ಶಿಶಿಲರು ವಿವರಿಸುತ್ತಾರೆ.

ಮುಂದೆಯೂ ಬರೆಯುವ ತವಕ:

ಮಹಾಭಾರತ ಆಧಾರಿತ ಶಿಶಿಲರ ಕಾದಂಬರಿ ಪುಂಸ್ತ್ರೀ 14 ಭಾಷೆಗಳಿಗೆ ಅನುವಾದಗೊಂಡಿದೆ. ಸ್ತೀವಾದಿ ಹಿನ್ನೆಲೆಯಲ್ಲಿ ಮೂಡಿ ಬಂದ ಪುಂಸ್ತ್ರೀ ಕಾದಂಬರಿ ಅತ್ಯಂತ ವೈಶಿಷ್ಟ್ಯಪೂರ್ಣವಾದ ಸಾಹಿತ್ಯ ಕೃತಿ. ಮುಂದೆಯೂ ಇದೇ ಮಾದರಿಯ ಸಂಶೋಧನಾತ್ಮಕ ಕಾದಂಬರಿಯನ್ನು ರಚಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ರಾಮಾಯಣದಲ್ಲಿ ಬರುವ ಸೂರ್ಪಣಕಿ ಪಾತ್ರವನ್ನು ಆಧರಿಸಿ ಒಂದು ಕಾದಂಬರಿ ರಚಿಸುವ ಯೋಚನೆ ಇದೆ ಎನ್ನುತ್ತಾರವರು. ತನ್ನ ಎಲ್ಲಾ ಕೃತಿಗಳು ಹೃದಯಕ್ಕೆ ಆಪ್ತ ಅದರಲ್ಲೂ ಯುರೂಫ್ ಪ್ರವಾಸಗಳ ಅನುಭವದ ಕೃತಿ `ದೇಶ ಯಾವುದಾದರೇನು’ ಹೆಚ್ಚು ಪ್ರಿಯವಾದುದು ಎನ್ನುತ್ತಾರೆ ಡಾ.ಶಿಶಿಲರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು