ಮಂಗಳೂರು: “ಕ್ರೀಡಾ ಕ್ಷೇತ್ರದಲ್ಲಿ ಕ್ರೀಯಾಶೀಲವಾಗಿದ್ದರೆ ಜೀವನದ ಕೊನೆಯವರೆಗೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೇವಲ ಹಣಗಳಿಕೆಯೇ ಜೀವನದ ಗುರಿಯಾಗಬಾರದು ಜೀವನದ ಕೊನೆಯಲ್ಲಿ ಗಳಿಸಿದ ಹಣವನ್ನು ಆಸ್ಪತ್ರೆಗಳಿಗೆ ಹಾಕುವುದರಿಂದ ಮುಪ್ಪಿನಲ್ಲಿ ಚಿಂತೆಯ ಚಿತೆಯಲ್ಲಿ ಉರಿಯಬೇಕಾಗುತ್ತದೆ” ಎಂದು ಸಿಂಡಿಕೇಟ್ ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟು ಪುಷ್ಪರಾಜ್ ಹೆಗ್ಡೆ ಹೇಳಿದರು.
ಅವರು ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ 140ನೇ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. “ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಕ್ರೀಡಾ ಪ್ರತಿಭೆಗಳನ್ನು ಸೃಷ್ಟಿಸಿಕೊಟ್ಟ ಶಿಕ್ಷಣ ಸಂಸ್ಥೆ ನಾನು ಇಂದು ಈ ಮಟ್ಟದ ಸಾಧನೆಯನ್ನು ಮಾಡಬೇಕಾದರೆ ಅಲೋಶಿಯಸ್ ಶಿಕ್ಷಣ ಸಂಸ್ಥೆ ಕಾರಣ” ಎಂದರು.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಕ್ಲಿಫರ್ಡ್ ಸಿಕ್ವೇರಾ ಎಸ್.ಜೆ ಇವರು “ಜೆಸ್ವಿಟ್ ಶಿಕ್ಷಣ ಸಂಸ್ಥೆಗಳ ವ್ಯವಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ಕೊಡುತ್ತದೆ, ಗಾಂಧೀಜಿಯವರು ಕೂಡಾ ತಮ್ಮ ಆತ್ಮ ಚರಿತ್ರೆಯಲ್ಲಿ ಕ್ರೀಡಾ ಚಟುವಟಿಕೆಗಳು ಶಿಕ್ಷಣ ಸಂಸ್ಥೆಗಳಲ್ಲಿ ಅಗತ್ಯವಿದೆ ಎಂದು ತನ್ನ ಕೊನೇಯ ದಿನಗಳಲ್ಲಿ ಅನಿಸಿತು ಎನ್ನುತ್ತಾರೆ. ಯುವಜನಾಂಗದಲ್ಲಿ ಸಮಾನತೆ ಮತ್ತು ಶಿಸ್ತನ್ನು ಪಾಲಿಸಲು ಕ್ರೀಡೆಗಳು ಪೂರಕವಾಗುತ್ತದೆ” ಎಂದರು.
ಉಪಪ್ರಾಂಶುಪಾಲೆ ಶಾಲೆಟ್ ಡಿಸೋಜಾರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು, ವಿತ್ತಾಧಿಕಾರಿ ರೆ.ಫಾ. ವಿನೋದ್ ಪೌಲ್ ಎಸ್.ಜೆ ಉಪಪ್ರಾಂಶುಪಾಲ ಮುರಳೀಕೃಷ್ಣ ಜಿ.ಎಮ್, ಸಂಯೋಜಕ ಶ್ರೀ ಆಲ್ವಿನ್ ಸಲ್ಡಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು, ದೈಹಿಕ ಶಿಕ್ಷಕರಾದ ನವೀನ್ ಕುಮಾರ್ ಮತ್ತು ಉಷಾ ಎ.ಜೆ ಕಾರ್ಯಕ್ರಮ ಸಂಯೋಜಿಸಿದರು.