ಸುಳ್ಯ: `ಸಾಲ ನೀಡುವುದು, ಅದರ ವಸೂಲಾತಿ’ ಸಹಕಾರಿ ಸಂಘಗಳ ಕೆಲಸ ಇಂದು ಇಷ್ಟಕ್ಕೇ ಸೀಮಿತವಾಗಿಲ್ಲ. ಜನರ ಆರ್ಥಿಕ ಅಗತ್ಯತೆಯನ್ನು ಪೂರೈಸುವುದರ ಜೊತೆಗೆ ಇಂದು ಇಡೀ ನಾಡಿನ ಅಭಿವೃದಿಗೆ ಸಹಕಾರಿ ಸಂಘಗಳು ನೇತೃತ್ವ ವಹಿಸುತ್ತವೆ. ಬಲಾಡ್ಯವಾಗಿ ಬೆಳೆದಿರುವ ಸಹಕಾರಿ ಸಂಘಗಳು ನಾಡಿಗೆ ಆರ್ಥಿಕ ದೇವಾಲಯ ಇದ್ದಂತೆ ಎಂದು ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷ ಹಾಗು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಸುಳ್ಯ ತಾಲೂಕಿನ ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ಮತ್ತು ಸಂಘದಲ್ಲಿ ಅಳವಡಿಸಿದ ಸೋಲಾರ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಆರ್ಥಿಕ ಬೆಳವಣಿಗೆಗೆ ಸಹಕಾರಿ ಕ್ಷೇತ್ರ ಬಲು ದೊಡ್ಡ ಕೊಡುಗೆ ನೀಡಿದೆ. ಸಹಕಾರಿ ಬ್ಯಾಂಕ್‍ಗಳು ಬಲಾಢ್ಯವಾಗಿ ಬೆಳೆದು ಜನರ ಆರ್ಥಿಕ ಅಗತ್ಯತೆಯನ್ನು ಪೂರೈಸುವ ಶಕ್ತಿಯನ್ನು ಹೊಂದಿದೆ ಎಂದರು.
ಬೆಳೆ ವಿಮೆ ಹಣ ದೊರೆಯುವುದರಲ್ಲಿ ವಾಣೀಜ್ಯ ಬ್ಯಾಂಕ್, ಸಹಕಾರಿ ಬ್ಯಾಂಕ್ ಎಂಬ ಯಾವುದೇ ವ್ಯತ್ಯಾಸ ಇಲ್ಲ. ಎಲ್ಲರಿಗೂ ಒಂದೇ ರೀತಿಯಲ್ಲಿ ಹಣ ಬರುತ್ತದೆ. ಅದೇ ರೀತಿ ಸಾಲ ಮನ್ನಾ ಯೋಜನೆಯಲ್ಲಿ ಅರ್ಹರಾದ ಎಲ್ಲಾ ಕೃಷಿಕರಿಗೂ ಸಾಲ ಮನ್ನಾ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಅಂಗಾರ `ಸಾಲಮನ್ನಾ ಯೋಜನೆಯಲ್ಲಿ ಉಂಟಾಗಿರುವ ಗೊಂದಲವನ್ನು ಸರಿಪಡಿಸಿ ಅರ್ಹರಾದ ಎಲ್ಲಾ ಕೃಷಿಕರಿಗೂ ಸಾಲಮನ್ನಾ ಸೌಲಭ್ಯ ದೊರಕುವಂತೆ ಮಾಡಬೇಕು ಎಂದು ಸಹಕಾರ ಸಚಿವರಲ್ಲಿ ವಿನಂತಿಸಲಾಗಿದೆ. ಅರ್ಹರಾದ ಎಲ್ಲಾ ರೈತರಿಗೂ ಸೌಲಭ್ಯ ದೊರಕಿಸಿ ಕೊಡುವ ಪ್ರಯತ್ನ ನಡೆಸಲಾಗುವುದು. ಅಲ್ಲದೆ ಅಡಕೆ ಹಳದಿ ರೋಗದಿಂದ ನಷ್ಟ ಅನುಭವಿಸಿದ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸುವ ಪ್ರಯತ್ನ ನಡೆಯುತಿದೆ ಎಂದು ಹೇಳಿದರು.
66ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಉದ್ಘಾಟಿಸಿದರು.