ಮೂಡುಬಿದಿರೆ: ಎರಡು-ಮೂರು ವರ್ಷಗಳಾದರೂ ಭೂನಕ್ಷೆಗಳು, ದಾಖಲೆಗಳು ಅರ್ಜಿದಾರರಿಗೆ ಸಿಗದಿರುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮೂಡುಬಿದಿರೆ ತಾಲೂಕು ಕಚೇರಿಗೆ ಭೇಟಿ ನೀಡಿ, ಕಂದಾಯ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದರು.
ಕಡತಗಳನ್ನು ಮೂರು ತಿಂಗಳೊಳಗಾಗಿ ಇತ್ಯರ್ಥಗೊಳಿಸಿ, ಜನರಿಗೆ ಬೇಕಾದ ನಕ್ಷೆ, ದಾಖಲೆಗಳನ್ನು ಕಂದಾಯ ಅಧಿಕಾರಿಗಳು ಮಾಡಿಕೊಡಬೇಕು. ಆದರೆ ನಿಮ್ಮ ಬಳಿ ಬಂದವರಿಗೆ ಕಳೆದ ಮೂರು ವರ್ಷಗಳಿಂದ ನಕ್ಷೆ ಸಹಿತ ದಾಖಲೆಗಳನ್ನು ನೀಡದೆ ಯಾಕೆ ಸತಾಯಿಸುತ್ತಿದ್ದೀರಿ.
ದಾಖಲೆಗಳನ್ನು ಜನರ ಬಳಿ ಬೇಡಿಕೆ ಇಟ್ಟಿರುವ ಆಡಿಯೋ ರೆಕಾರ್ಡ್ ನನ್ನ ಬಳಿ ಇದೆ. ವಯೋವೃದ್ಧರು ಕೂಡ ಬಂದು ನನ್ನ ಬಳಿ ಇಲ್ಲಿಯ ಅವ್ಯವಸ್ಥೆ, ಸತಾಯಿಸುವ ರೀತಿಯ ಬಗ್ಗೆ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಮುಂದೆ ಸೂಕ್ತ ರೀತಿಯಲ್ಲಿ ಜನರ ಕೆಲಸ ಮಾಡದಿದಲ್ಲಿ ಕ್ರಮ ಕೈಗೊಳ್ಳುತ್ತೇನೆ. ಮುಂದಿನ 15 ದಿನಗಳೊಳಗಡೆ ಹಳೇ ಬಾಕಿರುವ ಕಡತಗಳನ್ನು ಇತ್ಯರ್ಥ ಮಾಡಿಕೊಡಬೇಕು ಎಂದು ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.