ಬೆಳ್ತಂಗಡಿ: ನಾಡಿನ ಪುಣ್ಯಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರದಿಂದ ಲಕ್ಷ ದೀಪೋತ್ಸವದ ಸಂಭ್ರಮ ಆರಂಭವಾಗಿದ್ದು, ಸಂಜೆ ಉಜಿರೆಯಿಂದ ಧರ್ಮಸ್ಥಳಕ್ಕೆ ಸಹಸ್ರಾರು ಭಕ್ತಬಂಧುಗಳಿಂದ ಪಾದಯಾತ್ರೆ ನಡೆಯಿತು.
ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ದೇವಳದ ಆಡಳ್ತೆಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಅವರು ಮಧ್ಯಾಹ್ನದ ವೇಳೆ ಏಳನೇ ವರ್ಷದ ಪಾದಯಾತ್ರೆಗೆ ದೀಪಬೆಳಗಿಸಿ ಚಾಲನೆ ನೀಡಿದರು. ಅಲ್ಲಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಶ್ರೀಮಂಜುನಾಥ ಸ್ವಾಮಿಯ ಜಯಘೋಷಗಳೊಂದಿಗೆ, ಭಜನೆಯೊಂದಿಗೆ ಮೆರವಣೆಗೆಯಲ್ಲಿ ಧರ್ಮಸ್ಥಳದತ್ತ ಸಾಗಿದರು. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ಉದ್ಘಾಟನೆ ಸಂದರ್ಭ ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯ ಕೆ ಹರೀಶ್ ಕುಮಾರ್, ಉಜಿರೆ ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮ, ಶ್ರೀ ಕ್ಷೇತ್ರ ಧ.ಗ್ರಾ ಯೋಜನೆಯ ನಿರ್ದೇಶಕ ಡಾ. ಎಲ್.ಹೆಚ್ ಮಂಜುನಾಥ್, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಪ್ರತಾಪ್‍ಸಿಂಹ ನಾಯಕ್, ಎಸ್‍ಡಿಎಂ ಎಜುಕೇಶನ್ ಟ್ರಸ್ಟ್‍ನ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್ ಶೆಟ್ಟಿ, ಎಸ್‍ಡಿಎಂ ಕಾಲೇಜಿನ ಉಪನ್ಯಾಸ ಡಾ.ಶ್ರೀಧರ ಭಟ್, ಉದ್ಯಮಿ ರಾಜೇಶ್ ಪೈ ಉಜಿರೆ, ಉದ್ಯಮಿ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್, ತಾಲೂಕು ಯೋಜನಾಧಿಕಾರಿ ಜಯಕರ್ ಶೆಟ್ಟಿ, ನಿವೃತ್ತ ಎಸ್.ಪಿ ಪಿತಾಂಬರ ಹೆರಾಜೆ, ಗ್ರಾಮೀಣ ಶ್ರೇಷ್ಠತಾ ಕೇಂದ್ರ ನಿರ್ದೇಶಕ ಬೂದಪ್ಪ ಗೌಡ, ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್, ತಾ.ಪಂ ಸದಸ್ಯ ಗೋಪಿನಾಥ್ ನಾಯಕ್, ಉದ್ಯಮಿ ಪ್ರಶಾಂತ್ ಜೈನ್, ರೋಟರಿ ಅಧ್ಯಕ್ಷ ಜಯರಾಮ್ ಎಸ್, ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ, ನ್ಯಾಯವಾದಿ ಧನಂಜಯ ರಾವ್, ಡಾ. ಎಂ.ಎನ್ ದಯಾಕರ್, ಎಸ್‍ಡಿಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಮೋಹನ್, ಲಾೈಲ ಗ್ರಾ.ಪಂ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಕ್ಷೇತ್ರದಲ್ಲಿ ಮೊದಲ ದಿನವಾದ ಇಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಂಜೆಯ ವೇಳೆ ಅಮೃತವರ್ಷಿಣಿ ಸಭಾಭವನದಲ್ಲಿ ಪಾದಯಾತ್ರಿಗಳನ್ನು ಉದ್ದೇಶಿಸಿ ಮಾತನಾಡಿದರು.
ದೀಪೋತ್ಸವದ ನಿಮಿತ್ತ ಸನಿಹದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮೈದಾನದಲ್ಲಿ ರಚಿಸಲಾದ ವಸ್ತುಪ್ರದರ್ಶನ ಮಂಟಪದಲ್ಲಿ ಅಲ್ಲಿನ ಮಳಿಗೆಗಳ ಪ್ರದರ್ಶನ ಮತ್ತು ಮಾರಾಟದ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ವಸ್ತುಪ್ರದರ್ಶನ ಮಳಿಗೆಗಳ ಸನಿಹದಲ್ಲಿರುವ ಮಂಟಪದಲ್ಲಿ ಸಂಜೆ ಸುರಕ್ಷಾ ದಾಸ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ, ಬಳಿಕ ಬೆಂಗಳೂರಿನ ಕನಸು ಕಲಾನಿಕೇತನದವರಿಂದ ಭರತ ನೃತ್ಯ, ಉಡುಪಿ ನೃತ್ಯ ನಿಕೇತನದ ಸುಧೀರ್ ಕೊಡವೂರು ಅವರಿಂದ ನೃತ್ಯ ಕಾರ್ಯಕ್ರಮಗಳು ನಡೆದು ಜನರ ಮನವನ್ನು ಗೆದ್ದವು.
ರಾತ್ರಿ ಒಂಭತ್ತು ಗಂಟೆಯ ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ ನಡೆಯಿತು.
ಇಂದಿನ ಕಾರ್ಯಕ್ರಮ
ಧರ್ಮಸ್ಥಳ ಲಕ್ಷ ದೀಪೋತ್ಸವದ ಎರಡನೇ ದಿನವಾದ ಇಂದು (ಶನಿವಾರ) ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ 5-30ರಿಂದ ಬೆಂಗಳೂರಿನ ಉಸ್ಮಾನ್ ಇವರಿಂದ ಗೀತ ಗಾಯನ ನಡೆಯಲಿದೆ. ಬಳಿಕ ಬೆಂಗಳೂರಿನ ಜನಪದ ಹಾಸ್ಯ ಜಾದೂಗಾರ ಕಡಬ ಶ್ರೀನಿವಾಸ ಇವರಿಂದ ಜಾದೂ ಪ್ರದರ್ಶನ ನಂತರ ಉಡುಪಿ ದರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆಟ್ರ್ಸನವರಿಂದ ನೃತ್ಯ ಸಂಯೋಜಕಿ ರಕ್ಷಾ ಅವರ ನಿರ್ದೇಶನದಲ್ಲಿ ನೃತ್ಯ ವೈವಿಧ್ಯ ಇರಲಿದೆ.
ರಾತ್ರಿ ಒಂಭತ್ತು ಗಂಟೆಯ ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಕೆರೆಕಟ್ಟೆ ಉತ್ಸವ ನೆರವೇರಲಿದೆ.
ನಾಳಿನ ಕಾರ್ಯಕ್ರಮಗಳು
ಮೂರನೇ ದಿನವಾದ ಆದಿತ್ಯವಾರ ಮಧ್ಯಾಹ್ನ 3 ಗಂಟೆಯಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾ ಗೋಷ್ಠಿ ನೆರವೇರಲಿದೆ. ಸ್ಥಳೀಯ ಕಲಾವಿದರಿಂದ ನಾಗಸ್ವರ, ಸ್ಯಾಕ್ಸೋಫೋನ್ ವಾದನ ಪ್ರಸ್ತುತಗೊಳ್ಳಲಿದೆ.
ಸಂಜೆ 5-30 ಗಂಟೆಗೆ ವಿದುಷಿ ಅಪೇಕ್ಷಾ ಸುರೇಶ್ ಬೆಂಗಳೂರು ಇವರಿಂದ ನೃತ್ಯ ಕಾರ್ಯಕ್ರಮ, ಬಳಿಕ ಬೆಂಗಳೂರು ಅನನ್ಯಾ ಭಟ್ ಇವರಿಂದ ಸಂಗೀತ ಮೇಳ ನಂತರ ಬೆಂಗಳೂರು ಶಿವಲೀಲಾ ಸಾಂಸ್ಕೃತಿಕ ಹಾಗು ಚಾರಿಟೇಬಲ್ ಟ್ರಸ್ಟ್‍ನ ಎಂ.ಎಸ್.ಶಾಂತಲಾ ಇವರಿಂದ ನೃತ್ಯ ವೈವಿಧ್ಯ ಸಂಪನ್ನಗೊಳ್ಳಲಿದೆ.
ಅದೇ ರೀತಿ ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ 6 ಗಂಟೆಯಿಂದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ ಮೈಸೂರಿನ ಜಾದೂ ಕಲಾವಿದೆ ಸುಮಾ ರಾಜಕುಮಾರ್ ಇವರಿಂದ ಮಾತನಾಡುವ ಗೊಂಬೆ ಹಾಗು ಜಾದೂ ಪ್ರದರ್ಶನಗೊಳ್ಳಲಿದೆ. ಕೊನೆಯಲ್ಲಿ ಬೆಂಗಳೂರಿನ ನಾಟ್ಯಕಲಾ ಮೈತ್ರಿ ನೃತ್ಯ ಶಾಲೆಯ ವಿದುಷಿ ಮೈತ್ರೀ ಟಿ. ಇವರಿಂದ ಭರತ ನೃತ್ಯ ಪ್ರಸ್ತುತಗೊಳ್ಳಲಿದೆ.