ಸುತ್ತಲೂ ಲಕ್ಷದೀಪಗಳು, ಸಾವಿರಾರು ಭಕ್ತರು, ನೂರಾರು ಅಂಗಡಿಗಳು. ಎಲ್ಲಿ ನೋಡಿದರೂಜನಸಾಗರ.ಇದರ ಮಧ್ಯೆ ಪುಟ್ಟ ಬಾಲಕ ಕೈಯಲ್ಲಿಅದೇನೊ ಹಿಡಿದುಕೊಂಡು ವ್ಯಾಪಾರಕ್ಕೆ ಸಿದ್ಧನಾಗಿ ನಿಂತಿದ್ದ. ಹತ್ತಿರ ಬಂದು ಒಂದು ಡಾಲರ್‍ಗೆ ಹತ್ತು ರುಪಾಯಿ ತೆಗೆದುಕೊಳ್ಳಿ ಎಂದ. ಒಂದು ಡಾಲರ್‍ಗೆ ಎಪ್ಪತ್ತು ರುಪಾಯಿ ದಾಟಿರುವಾಗ ಇದ್ಯಾವ ಡಾಲರ್ ಹತ್ತು ರುಪಾಯಿಗೆ ಸಿಗುತ್ತದೆ ಎಂಬ ಆಶ್ಚರ್ಯದಿಂದ ನೋಡಿದರೆ ಅವನ ಕೈಯಲ್ಲಿ ಮಂಜುನಾಥ ಸ್ವಾಮಿಯ ಚಿತ್ರದ ಲಾಕೆಟ್‍ಇರುವ ಸರಗಳು ಇದ್ದವು.
ಇದಕ್ಕೆ ಆತ ಡಾಲರ್ ಎಂದು ನಾಮಕರಣ ಮಾಡಿಬಿಟ್ಟಿದ್ದ. ಒಂದು ಕೈಯಲ್ಲಿ ಐದಾರು ಡಾಲರ್, ಇನ್ನೊಂದು ಕೈಯಲ್ಲಿ ಅಲ್ಪ ಹಣ, ಹಳೆಯ ಬಟ್ಟೆ, ಮಖದಲ್ಲಿ ಮುಗ್ಧತೆ. ಸ್ಲೇಟ್ ಬಳಪ ಹಿಡಿಯಬೇಕಾದ ಕೈಗಳು ವ್ಯಾಪಾರಕ್ಕೆ ಸಿದ್ಧವಾಗಿರುವುದು ಅಚ್ಚರಿ ಎನಿಸಿತು. ಅವನ ಹೆಸರು ಅಜಯ್. ಆತನನಿಗಿನ್ನೂ ಏಳು ವರ್ಷ ವಯಸ್ಸು. ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವನು. ಶಾಲೆಯನ್ನು ಬಿಟ್ಟು ಇಲ್ಲಿ ಏಕೆ ಬಂದೆ ಎಂಬ ನಮ್ಮ ಪ್ರಶ್ನೆಗಳಿಗೆ ಮೃದು ದನಿಯಲ್ಲಿ ‘ನಮ್ಮ ಅವ್ವ ಕರ್ಕೊಂಡು ಬಂದಾಳ’ ಎಂದ. ನಿನ್ನ ತಾಯಿ ಎಲ್ಲಿ? ಇಷ್ಟೊಂದು ಜನರ ನಡುವೆ ಒಬ್ಬನೇ ಏಕೆ ಅಲೆದಾಡುತ್ತಿರುವೆ? ಎಂದು ಕೇಳಿದಾಗ ‘ನಮ್ಮದೊಂದು ಉಂಗುರದ ಅಂಗಡಿ ಇದೆ. ಅಲ್ಲಿ ಇದ್ದಾರೆ. ನಾನು ಇಲ್ಲೆಲ್ಲಾ ತಿರುಗಾಡಿ ವ್ಯಾಪಾರ ಮಾಡುತ್ತೇನೆ ಎಂದ. ಯಾವ ಶಾಲೆಯಲ್ಲಿ ಓದುತ್ತಿರುವೆ ಎಂಬ ಪ್ರಶ್ನೆಗೆ ಉತ್ತರವೇ ಬರಲಿಲ್ಲ.
ಮತ್ತೆ ಮತ್ತೆ ಕೇಳಿದಾಗ ಊರಲ್ಲಿ ಇದ್ದಾಗ ಹೋಗ್ತಿದ್ದೆ. ಈಗ ಅವ್ವ ಕರ್ಕೊಂಡು ಬಂದಿದಾಳೆ ಎಂಬ ಉತ್ತರ ಬಂತು. ಎಷ್ಟು ವ್ಯಾಪಾರ ಮಾಡುವೆ ಎಂದು ಕೇಳಿದಾಗ ‘ಲೆಕ್ಕ ಬರಾಂಗಿಲ್ಲ’ ಎನ್ನುತ್ತ ಹಣವಿರುವ ಕೈ ಮುಂz ಚಾಚಿದ. ಲೆಕ್ಕ ಬರದೆ ಹೋದರೆ ವ್ಯಾಪಾರ ಹೇಗೆ? ಎಂದರೆ ‘ಎಲ್ಲಾ ಹತ್ತು ರುಪಾಯಿ ಕೊಟ್ಟು ತಗೋತಾರಿ. ಜಾಸ್ತಿ ಕೊಟ್ರು ಉಳದಿರೊದು ನೀನೇ ಇಟ್ಕೊ ಅಂತಾರೆ’ ಎಂದು ಮುಗುಳು ನಗೆ ಬೀರಿದ. ನಾನು ಅವನ ಬಳಿ ಒಂದು ಡಾಲರ್ ಖರೀದಿಸಿದೆ. ನನ್ನ ಅವಶ್ಯಕತೆಗಾಗಿ ಅಲ್ಲ, ಆತನ ಮುಗ್ಧತೆಗಾಗಿ. ಆ ಹುಡುಗನ ಕೈಯಲ್ಲಿ ಎರಡು ನೂರು ರುಪಾಯಿಗಳಿದ್ದವು. ಇದರಲ್ಲಿ ಬಹುಪಾಲು ಹಣ ಆತನ ಮುಗ್ದತೆಯಿಂದ ದೊರಕಿದ್ದೇ ಹೊರತು ಆತನ ವ್ಯಾಪಾರದಿಂದಲ್ಲ. ದೀಪೋತ್ಸವದ ಮಾರುಕಟ್ಟೆ ಒಂದು ಸುತ್ತು ಹಾಕಿದರೆ ಈ ತರಹದ ನಾಲ್ಕೈದು ಪುಟ್ಟ ಮಕ್ಕಳು ಕಾಣಸಿಗುತ್ತಾರೆ. ಇವರೆಲ್ಲರೂ ಶಿಕ್ಷಣ ವಂಚಿತರು. ಜಾತ್ರೆತೇರು ಸಂತೆ ಯಾವ ಯಾವ ಊರಿನಲ್ಲಿ ನಡೆಯುತ್ತದೋ ಅಲ್ಲೆಲ್ಲಾ ಸಾಗಿ ಹೊಟ್ಟೆಪಾಡಿಗಾಗಿ ವ್ಯಾಪಾರ ನಡೆಸುವವರ ಮಕ್ಕಳು.