ಬೆಳ್ತಂಗಡಿ: ಮಳೆಗಾಲಕ್ಕೂ ಮುನ್ನ ಹಾನಿಗೊಳಗಾದ ಧರ್ಮಸ್ಥಳ ಸ್ನಾನಘಟ್ಟ ಸಮೀಪದ ಕಿಂಡಿ ಅಣೆಕಟ್ಟು ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ ಪ್ರವಾಸೋದ್ಯಮಕ್ಕೆ ಹಾಗೂ ಯುವ ಸಮೂಹದ ಕೌಶಲ್ಯ ಅಭಿವೃದ್ಧಿಗಾಗಿ ಶಾಸಕ ಹರೀಶ್ ಪೂಂಜ ಅವರ ಸಲಹೆಯಂತೆ ಕೈಗಾರಿಕೆ ಮತ್ತು ಉದ್ಯೋಗದ ಲಭ್ಯತೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಹೇಳಿದರು.
ಅವರು ಧರ್ಮಸ್ಥಳ ಸರ್ವಧರ್ಮ ಸಮ್ಮೇಳನಕ್ಕೆ ಆಗಮಿಸಿದ ಸಂದರ್ಭ ಧರ್ಮಸ್ಥಳದ ಸ್ವಾನಘಟ್ಟದ ಬಳಿ ನೇತ್ರಾವತಿ ನದಿಗೆ ಕಟ್ಟಲಾಗಿದ್ದ ಕಿಂಡಿ ಆಣೆಕಟ್ಟು ಕಳೆದ ನೆರೆಗೆ ಹಾನಿಗೀಡಾಗಿದ್ದು, ಅದನ್ನು ವೀಕ್ಷಿಸಿ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
ನೆರೆಯಿಂದಾಗಿ ಇಲ್ಲಿನ ಸಾರ್ವಜನಿಕ ಕುಡಿಯುವ ನೀರಿನ ಕಿಂಡಿ ಆಣೆಕಟ್ಟಿಗೆ ಹಾನಿಯಾದ ಹಿನ್ನಲೆಯಲ್ಲಿ ಆರ್.ಸಿ.ಪಿ ಅಬಬ್‍ಮೆಂಟ್ , ಕಾಂಕ್ರೀಟ್ ತಡೆಗೋಡೆ ಮತ್ತು ರಾಂಪ್ ನಿರ್ಮಿಸುವ ಕಾಮಗಾರಿಗಳ ರೂ.2.60 ಕೋಟಿ ವೆಚ್ಚದ ಅಂದಾಜು ಪಟ್ಟಿ ಸರಕಾರಕ್ಕೆ ಕಳುಹಿಸಲಾಗಿದೆ. ಧಾರ್ಮಿಕ ಕ್ಷೇತ್ರವಾಗಿದ್ದು, ಭಕ್ತಾಧಿಗಳ ಸಂಖ್ಯೆಯೂ ಅಧಿಕವಾಗಿರುವ ಕಾರಣ ಇದನ್ನು ಮಳೆಗಾಲದ ಮುಂಚಿತವಾಗಿ ಅಭಿವೃದ್ಧಿ ಪಡಿಲಾಗುವುದು ಎಂದರು.
ಪರಿಸರ ಹಾಗೂ ಕೈಗಾರಿಕೆಗಳು ಪೂರಕವಾಗಿ ಹೋಗಬೇಕು. ಅದಕ್ಕಾಗಿ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಅದಕ್ಕಾಗಿ ಸೂಕ್ತ ಸಂಶೋಧನಗಳೂ ನಡೆಯಬೇಕು. ಪರಿಸರ ಹಾಗು ಆರ್ಥಿಕ ಅಭಿವೃದ್ಧಿ ಜೊತೆಜೊತೆಯಲ್ಲಿ ಸಾಗಬೇಕು ಎಂದರು.
ಬೆಳ್ತಂಗಡಿಯಲ್ಲಿ ಸಾಕಷ್ಟು ವಿದ್ಯಾಸಂಸ್ಥೆಗಳಿವೆ, ಧರ್ಮಕ್ಷೇತ್ರವಿದೆ. ಉತ್ತಮ ಪರಿಸರವಿದೆ. ಎಲ್ಲಾ ರೀತಿಯಲ್ಲಿ ಈ ತಾಲೂಕು ಮುಂಚೂಣಿಯಲ್ಲಿದೆ. ಹೀಗಾಗಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅವರ ಅವಶ್ಯಕತೆಗಳನ್ನು ಪೂರೈಸಲು ಮತ್ತು ತರಬೇತಿ ನೀಡಲು ಶಕ್ತಿ ನೀಡುವಂತಹ ಕಾರ್ಯಕ್ರಮಗಳನ್ನು ಸರಕಾರ ರೂಪಿಸಲಿದೆ ಎಂದರು.
ಪ್ರವಾಸೋದ್ಯಮ ಹೆಚ್ಚುವ ಉದ್ದೇಶದಿಂದ ಸಂಪರ್ಕ ರಸ್ತೆಗಳಿಗಾಗಿ ಸರಕಾರ ಹೆಚ್ಚಿನ ಒತ್ತು ಕೊಡಲಿದೆ.
ಚಾರ್ಮಾಡಿ ರಸ್ತೆ ಹಾಗೂ ಬೇಸಗೆಯಲ್ಲಿ ಧರ್ಮಸ್ಥಳ ಕ್ಷೇತ್ರ ಸೇರಿದಂತೆ ಈ ಭಾಗದ ಜನತೆಗೆ ನೀರು ಪೂರೈಕೆಗೆ ನೆರಿಯಾ ಹೊಳೆಗೆ ಕಿಂಡಿ ಅಣೆಕಟ್ಟು ಕಟ್ಟುವ ಪ್ರಸ್ತಾವ ಕುರಿತು ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೆ ಹಿಂದೆ 14 ಕೋಟಿ ರೂ. ಘೋಷಣೆ ಮಾಡಲಾಗಿದ್ದರೂ, ಕ್ಯಾಬಿನೆಟ್‍ನಲ್ಲಿ ನಿರ್ಧಾರ ಆಗಬೇಕಷ್ಟೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆ ಬಾರದಂತೆ ಈ ಯೋಜನೆ ವಿಚಾರ ಕ್ಯಾಬಿನೆಟ್ ಮುಂದಿಟ್ಟು ಅಗತ್ಯ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತದೆ ಎಂದರು.
ಚಾರ್ಮಾಡಿ ಸೇರಿದಂತೆ ಈ ಭಾಗದ ಎಲ್ಲಾ ರಸ್ತೆಗಳ ಸಂಪೂರ್ಣ ಅಭಿವೃದ್ಧಿಗೆ ಅರಣ್ಯ ಇಲಾಖೆ ತೊಡಕು ವಿಚಾರವಾಗಿ ಮಾದ್ಯಮದ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ಮಳೆಯಾಶ್ರಿತ ಪ್ರದೇಶವಾದ್ದರಿಂದ ಈ ಭಾಗದ ರಸ್ತೆ ಹದಗೆಟ್ಟಿದೆ. ಎಲ್ಲಾ ರಸ್ತೆಗಳ ಸಂಪೂರ್ಣ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದರು.
ಈ ಸಂದರ್ಭ ಶಾಸಕ ಹರೀಶ ಪೂಂಜ, ಡಿ.ಸುರೇಂದ್ರ ಕುಮಾರ್, ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.