ಗುರುಗಣೇಶ ಭಟ್, ಡಬ್ಗುಳಿ
ಧರ್ಮಸ್ಥಳ: ನರನೇ ನಾರಾಯಣ ಎಂದು ಭಾವಿಸಿದರೆ ಪ್ರಾಮಾಣಿಕ ರಾಜಕೀಯ ಮಾಡಬಹುದು ಎಂದು ಲೋಕಸಭೆಯ ನಿಕಟಪೂರ್ವ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದರು.
ಅವರು ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ನಡೆದ 87 ನೇ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರವಿಲ್ಲದ ರಾಜಕೀಯ ನಡೆಸಲಾಗದು ಎಂಬುದು ತಪ್ಪು ಅಭಿಪ್ರಾಯ. ಕೆಟ್ಟದ್ದನ್ನು ತ್ಯಜಿಸಿ, ಒಳ್ಳೆಯದರ ಜೊತೆ ಗುರುತಿಸಿಕೊಂಡರೆ ಎಲ್ಲ ಕ್ಷೇತ್ರಗಳೂ ಸರಿಯಾಗಿ ಕಾರ್ಯನಿರ್ವಹಿಬಹುದು. ಎಲ್ಲ ಧರ್ಮಗಳು ಬೋಧಿಸುವುದೂ ಇದೇ ಎಂದರು.
ಭಗವದ್ಗೀತೆಯ ಸಾಲುಗಳನ್ನು ಅವರು ನೆನಪಿಸಿಕೊಂಡರು. ಸ್ವಹಿತ ಕಾರ್ಯಸಾಧನೆ ಬಿಟ್ಟು ಎಲ್ಲರಿಗಾಗಿ ಕೆಲಸ ನಿರ್ವಹಿಸಬೇಕು. ಸಾರ್ವಜನಿಕ ಸೇವೆಯೇ ನಿಜವಾದ ಧರ್ಮ. ಸಮಾಜಕ್ಕಾಗಿ ದುಡಿಯುವವನೇ ನಿಜವಾದ ಸನ್ಯಾಸಿ ಎಂದು ವ್ಯಾಖ್ಯಾನಿಸಿದರು.
ಉತ್ತಮ ಸಂಬಳದ ಕುರಿತು ಯೋಚಿಸುವ ಬದಲು ಉತ್ತಮ ಜೀವನಕ್ಕಾಗಿ ಯೋಚಿಸಬೇಕು. ಹೃದಯದ ಒಳಗೆ ಜ್ಞಾನದ ಬೆಳಕು ಮಿನುಗಬೇಕು ಎಂದರು.
ಭಾರತೀಯ ಜೀವನಶೈಲಿ ತರಬೇತುದಾರ, ಇಸ್ಕಾನ್ ನ ಹಿರಿಯ ವಿದ್ವಾಂಸ ಗೌರ್ ಗೋಪಾಲ ದಾಸ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಹಕರಾಗಿ ಬದಲಾಗುತ್ತಿರುವುದನ್ನು ಉಲ್ಲೇಖಿಸಿದ ಅವರು ಬದುಕುವುದು ಮುಖ್ಯ, ಗಳಿಸುವುದಲ್ಲ ಎಂದರು.
ದುಬಾರಿ ಮೊತ್ತದ ಗಡಿಯಾರದಿಂದ ಸಮಯ ಹೆಚ್ಚು ಸಿಗುವುದಿಲ್ಲ. ಖುಷಿ ಮತ್ತು ಪ್ರೀತಿಯ ಬದುಕನ್ನು ಆಯ್ದುಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ದ್ವೇಷವನ್ನು ಶತಮೂರ್ಖನೂ ಮಾಡಬಲ್ಲ. ಆದರೆ ಸಜ್ಜನರು ಮಾತ್ರ ಪ್ರೀತಿಸಬಲ್ಲರು ಎಂಬ ಅವರ ಮಾತುಗಳು ಕರತಾಡನ ಗಿಟ್ಟಿಸಿದವು.
ಅವರ ಆಕರ್ಷಕ ಸಂವಹನ ಶೈಲಿ ಪ್ರೇಕ್ಷಕರನ್ನು ತುದಿಗಾಲಲ್ಲಿ ಕೂರಿಸಿತು. ನಾವು ಯಾರಿಂದ ಪ್ರಭಾವಿತರಾಗುತ್ತೇವೆ ಎಂಬುದು ಮುಖ್ಯ. ಸಾಧ್ಯವಾದರೆ ಧನಾತ್ಮಕ ಚಿಂತನೆಯಲ್ಲಿ ತೊಡಗಬೇಕು. ಹುಟ್ಟು ಸಾವಿನ ನಡುವೆ ಎದುರಿಸಬೇಕಾದ ಸವಾಲುಗಳಿಗೆ ಧನಾತ್ಮಕ ಚಿಂತನೆಗಳೇ ಉತ್ತರ ನೀಡುತ್ತವೆ ಎಂದು ಉಚ್ಛರಿಸಿದರು.