ವರದಿ ಮತ್ತು ಚಿತ್ರಗಳು: ಸ್ಕಂದ ಆಗುಂಬೆ
ಧರ್ಮಸ್ಥಳ: ಶತಮೂರ್ಖನೂ ದ್ವೇಷಿಸಬಲ್ಲ, ಆದರೆ ಪ್ರೀತಿಸುವುದು ಸಹೃದಯರಿಗೆ ಮಾತ್ರ ಸಾಧ್ಯವಾಗುವ ವಿಷಯ. ಮನಸ್ಸಿನಲ್ಲಿ ಖುಷಿಗೆ ಜಾಗ ಮೀಸಲಿಡದಿದ್ದರೆ ಬದುಕಿನ ಉದ್ದೇಶವೇ ಅರ್ಥಹೀನವಾಗುತ್ತದೆ ಎಂದು ವ್ಯಕ್ತಿತ್ವ ವಿಕಸನ ಮಾರ್ಗದರ್ಶಿ, ಆಧ್ಯಾತ್ಮಿಕ ಚಿಂತಕ ಗೌರ್‌ಗೋಪಾಲದಾಸ್ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ಅಮೃತವರ್ಷಿಣಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರತ ಅತ್ಯುನ್ನತ ಮೌಲ್ಯಗಳನ್ನು ಒಳಗೊಂಡ ರಾಷ್ಟ್ರ. ಇತರೆ ದೇಶಗಳ ವೈಶಿಷ್ಟ್ಯತೆಯನ್ನು ಗುರುತಿಸುವ ಹಾಗೆ ಭಾರತದ ವಿಶಿಷ್ಟತೆಯನ್ನು ಒಂದು ಪದದಲ್ಲಿ ಇಂತಿಷ್ಟು ಎಂದು ಹೇಳಿ ಮುಗಿಸುವುದು ಕಷ್ಟ. ಆದ್ದರಿಂದಲೇ ಭಾರತವನ್ನು “ಇನ್‌ಕ್ರೆಡಿಬಲ್ ಇಂಡಿಯಾ” ಎನ್ನುವುದು ಎಂದರು.
ಭಾರತೀಯರು ವಿಭಿನ್ನತೆಯನ್ನು ಮೈಗೂಡಿಸಿಕೊಂಡು ಬೆಳೆಯುವವರು. ಚುರುಕುತನ, ಉಳಿತಾಯ ಮಾಡುವ ಛಾತಿ ಹಾಗೂ ಖರ್ಚು ಮಾಡುವ ಮನಸ್ಸು ಇವೆಲ್ಲವೂ ನಮ್ಮಲ್ಲಿರುತ್ತದೆ. ಆದರೆ, ಇವುಗಳಷ್ಟೇ ನಮ್ಮ ವಿಶಿಷ್ಟತೆಯನ್ನು ವರ್ಣಿಸುವ ಅಂಶಗಳಲ್ಲ. ಖಾಲಿಯಾದ ಶಾಂಪೂ ಬಾಟಲಿಗೆ ನೀರು ತುಂಬಿಸಿ ಪೂರ್ತಿಖರ್ಚು ಮಾಡುವುದರಿಂದ ಹಿಡಿದು, ಹಾಳಾದ ಅಂಗಿಯ ಬಳಕೆಯನ್ನು ಒಂದೊಂದೇ ಹಂತದ ಮೂಲಕ ಬದಲಾಯಿಸುತ್ತಾ ಕೊನೆಗೆ ನೆಲ ಒರೆಸುವ ಬಟ್ಟೆಯಾಗಿ ಬಳಸುವ ತನಕ ಭಾರತೀಯರ ವಿಭಿನ್ನತೆಯನ್ನುಗುರುತಿಸಬಹುದು. ಆದರೆ, ಇವೆಲ್ಲವನ್ನೂ ಮೀರಿದ, ಇವುಗಳಾಚೆಯ ಭಾರತೀಯತೆ ಇರುವುದು ಈ ನೆಲದ ಆಧ್ಯಾತ್ಮಿಕ ಜ್ಞಾನದಲ್ಲಿ. ಭಾರತೀಯ ಪರಂಪರೆ ಯುದ್ದಕ್ಕೂ ಆಧ್ಯಾತ್ಮಿಕ ವೈಶಿಷ್ಟ್ಯವನ್ನು ನೋಡಬಹುದು ಎಂದು ಹೇಳಿದರು.
ಅಂತೆಯೇ, ಬದಲಾಗುತ್ತಿರುವ ಜೀವನಕ್ರಮದಿಂದ ನೈಜ ಖುಷಿಯ ಅರ್ಥ ಕಂಡುಕೊಳ್ಳುವಲ್ಲಿ ಜನರು ವಿಫಲವಾಗುತ್ತಿರುವುದನ್ನು ಉದ್ದೇಶಿಸಿ ಮಾತನಾಡಿ, ಸಿರಿವಂತಿಕೆಯಾಗಲಿ, ನಾವು ಬಳಸುವ ವಸ್ತುಗಳಾಗಲಿ ನಮಗೆ ಖುಷಿಯನ್ನುತಂದುಕೊಡುವುದಿಲ್ಲ. ಬದಲಾಗಿ ನಾವು ವಿಷಯಗಳನ್ನು ಹೇಗೆ ಸ್ವೀಕರಿಸುತ್ತೇವೆ, ನಮ್ಮ ಸುತ್ತಲಿನ ಜನರು ಹೇಗಿರುತ್ತಾರೆ, ನಾವು ಈ ಸಮಾಜಕ್ಕೆ ಏನು ಕೊಡುಗೆ ನೀಡುತ್ತೇವೆ ಎನ್ನುವುದರಲ್ಲಿ ನೈಜ ಖುಷಿ ಅಡಗಿದೆ ಎಂದು ತಿಳಿಸಿದರು.
ತಿನ್ನುವ ಐಸ್‌ಕ್ರೀಂ ಕೂಡ ಕರಗುತ್ತದೆ, ಉರಿಯುವ ಮೇಣದ ಬತ್ತಿಯೂ ಕರಗುತ್ತದೆ. ಆದರೆ, ಅವುಗಳ ಉದ್ದೇಶವನ್ನು ಗಮನಿಸಿದಾಗ ಮಾತ್ರ ಯಾವುದು ಒಳ್ಳೆಯ ಉದ್ದೇಶಕ್ಕೆ ಕರಗಿದೆ ಎಂಬುದು ಅರ್ಥವಾಗುತ್ತದೆ. ಬದುಕಿನ ಆಟವೇ ಸಂಘರ್ಷವಾಗಿದ್ದು, ಈ ಸಂಘರ್ಷದ ನಡುವಲ್ಲಿ ನಾವು ಹೇಗೆ ಬದುಕುತ್ತೇವೆ, ಏನೇನು ಮಾಡುತ್ತೇವೆ ಎಂಬ ಆಧಾರದ ಮೇಲೆ ಬದುಕಿನ ಸಾರ್ಥಕತೆ ಅಡಗಿದೆ ಎಂದು ಕಿವಿಮಾತು ಹೇಳಿದರು.