ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ರಾತ್ರಿ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಿತು.
ಬುಧವಾರ ಹೆಗ್ಗಡೆಯವರ ನಿವಾಸದಿಂದ (ಬೀಡಿನಿಂದ) ಸಂಜೆ ಏಳು ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ಮಹೋತ್ಸವ ಸಭಾ ಭವನಕ್ಕೆ ಹೋದ ಬಳಿಕ ಅಲ್ಲಿ ಪಂಚನಮಸ್ಕಾರ ಮಂತ್ರ ಪಠಣ, ಸಮವಸರಣ ಪೂಜಾ ಮಂತ್ರ ಪಠಣ ಆದ ಮೇಲೆ ಶ್ರಾವಕ-ಶ್ರಾವಿಕೆಯರಿಂದ ಅಷ್ಟವಿಧಾರ್ಚನೆ ಪೂಜೆ ನಡೆಯಿತು. ಗಣಧರ ಪರಮೇಷ್ಠಿ ಪೂಜೆ, ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಪೂಜೆ ಮತ್ತು ಶ್ರುತ ಪೂಜೆ ನಡೆಯಿತು. ಸೌಮ್ಯ, ಸಾವಿತ್ರಿ, ಮಂಜುಳಾ ಮತ್ತು ಅಭಿಜ್ಞಾ ಹಾಗೂ ಬಳಗದವರು ಪೂಜಾ ಮಂತ್ರ ಪಠಣ ಮಾಡಿದರು.
ಕ್ಷುಲ್ಲಕ 105 ಶ್ರೀ ನಿರ್ಮಲ ಸಾಗರ್‍ಜಿ ಹಾಗೂ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು. ಶಿಶಿರ್ ಇಂದ್ರರ ನೇತೃತ್ವದಲ್ಲಿ ನಡೆದ ಅಷ್ಟವಿಧಾರ್ಚನೆ ಸಂಗೀತ ಪೂಜಾ ಮಂತ್ರ ಪಠಣದಲ್ಲಿ ಮಲ್ಲಿನಾಥ್ ಜೈನ್, ಸೌಮ್ಯ ಎಸ್. ರಾಜ್, ಅಭಿಜ್ಞಾ ಬಳ್ಳಾಲ್, ಮಂಜುಳಾ, ಎಂ. ಸಾವಿತ್ರಿ ಪುಷ್ಪದಂತ ಹಾಗೂ ಹಿಮ್ಮೇಳದಲ್ಲಿ ಭಗೀರಥ ಮತ್ತು ಶೋಧನ್ ಸಹಕರಿಸಿದರು.
ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು.
ಇದೇ ಸಂದರ್ಭ ಪಾಕ ಪರಿಣತರಾದ ಕನ್ನಡಿಕಟ್ಟೆಯ ರತ್ನರಾಜ ಮತ್ತು ಇರ್ವತ್ತೂರು ಜಯಕೀರ್ತಿ ಜೈನ್ ಅವರನ್ನು ಸನ್ಮಾನಿಸಲಾಯಿತು. ಮಹಾಮಂಗಳಾರತಿ ನಂತರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಬೀಡಿಗೆ ತರಲಾಯಿತು. ಶ್ರೀ ಬಾಹುಬಲಿ ಸೇವಾ ಸಮಿತಿಯ ಸದಸ್ಯರು ಸಹಕರಿಸಿದರು.