ಸುಳ್ಯ: ಶೈಕ್ಷಣಿಕ ಹಿನ್ನಲೆಯುಳ್ಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ ಯುವತಿಯರಿಗೆ ಯುಪಿಎಸ್‍ಸಿ, ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಸೂಕ್ತ ಮಾಹಿತಿ ಮತ್ತು ತರಬೇತಿಯನ್ನು ನೀಡಬೇಕು ಎಂದು ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಸಮಾಜ ಕಲ್ಯಾಣ ಮತ್ತು ಇತರ ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ನೀಡಿದ್ದಾರೆ.
ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪ.ಜಾತಿ ಪ.ಪಂಗಡದ ಕುಂದು ಕೊರತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಲ್ಲಿ ಪ.ಜಾತಿ, ಪ.ಪಂಗಡ ಯುವಕ, ಯುವತಿಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವುದು ಮತ್ತು ಉದ್ಯೋಗ ಪಡೆದು ಕೊಳ್ಳುವುದು ತೀರಾ ಕಡಿಮೆ ಕಂಡು ಬರುತಿದೆ. ಅದು ಬದಲಾಗಬೇಕು ಹೆಚ್ಚು ಹೆಚ್ಚು ಯುವಕರು ಉದ್ಯೋಗ ಪಡೆಯುವಂತಾಗಬೇಕು. ಅದಕ್ಕಾಗಿ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಉನ್ನತ ಪರೀಕ್ಷೆಗಳಿಗೆ ಹಾಜರಾಗಲು, ಅದರ ಅಧ್ಯಯನಕ್ಕಾಗಿ ಸರ್ಕಾರ ಪ್ರೋತ್ಸಾಹ ಧನ ನೀಡುತಿದೆ. ಉದ್ಯೋಗದಲ್ಲಿ ಮೀಸಲಾತಿ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಅಲ್ಲದೆ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತೆ ಪ್ರೋತ್ಸಾಹ ನೀಡಬೇಕು. ಅರ್ಧದಲ್ಲಿ ಶಿಕ್ಷಣ ಮೊಟಕುಗೊಳ್ಳದಂತೆ ಎಚ್ಚರವಹಿಸಬೇಕು ಎಂದು ಅವರು ಸೂಚಿಸಿದರು.