ಮೂಡುಬಿದಿರೆ: ಈ ಬಾರಿಯ ಕಂಬಳವನ್ನು ಮುಖ್ಯಮಂತ್ರಿ ಅವರು ಉದ್ಘಾಟಿಸಲಿದ್ದು ಇತಿಹಾಸ ಪ್ರಸಿದ್ಧ ಮೂಡುಬಿದಿರೆಯಲ್ಲಿ ನಡೆಯುವ ತುಳುನಾಡಿನ ಹೆಮ್ಮೆಯ ಕ್ರೀಡೆ ಕಂಬಳಕ್ಕೆ ಸರ್ವರ ಬೆಂಬಲ ಬೇಕಾಗಿದೆ. ಶ್ರದ್ಧೆ, ಭಕ್ತಿ, ಭಯದಿಂದ ಕಂಬಳವನ್ನು ಕಳೆದ ವರ್ಷ ಅದ್ಧೂರಿಯಾಗಿ ನಡೆಸಿ ಅವಿಭಜಿತ ಜಿಲ್ಲೆಯಲ್ಲಿ ಮಾದರಿ ಕಂಬಳ ಎನಿಸಿಕೊಂಡಿದೆ. ಅಬ್ಬಕ್ಕ 18 ಅಡಿಯ ಪ್ರತಿಮೆ ಲೋಕಾರ್ಪಣೆ ಈ ಬಾರಿಯ ವಿಶೇಷತೆಯಾಗಿದೆ ಎಂದು ಶಾಸಕ, ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.
ಡಿ.21ರಂದು ಒಂಟಿಕಟ್ಟೆ ಕಡಲಕೆರೆ ನಿಸರ್ಗಧಾಮದಲ್ಲಿ ನಡೆಯಲಿರುವ 17ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆಯನ್ನು ಗುರುವಾರ ಇಲ್ಲಿನ ಸ್ವರ್ಣಮಂದಿರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿ, ಕಂಬಳದ ಕರೆ ಇರುವ ಪ್ರದೇಶಕ್ಕೆ ಈಗಾಗಲೇ ವೀರ ರಾಣಿ ಅಬ್ಬಕ್ಕ ಎಂದು ಹೆಸರಿಲಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಕಂಬಳಕ್ಕೆ ಸಂಬಂಧಪಟ್ಟಂತೆ ಮ್ಯೂಸಿಯಂ, ತುಳುನಾಡಿನ ಸಂಸ್ಕೃತಿ, ಕೃಷಿ ಪರಂಪರೆಯನ್ನು ಬಿಂಬಿಸುವ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕಾಗಿದೆ ಎಂದರು.
ಕಾರ್ಯದರ್ಶಿ ಕೆ.ಪಿ ಸುಚರಿತ ಶೆಟ್ಟಿ, ವಿನೋದ್ ಬೊಳ್ಳಾಯರ್, ಕೋಶಾಧಿಕಾರಿ ಭಾಸ್ಕರ್ ಎಸ್.ಕೋಟ್ಯಾನ್, ಉಪಾಧ್ಯಕ್ಷರಾದ ದಯಾನಂದ ಪೈ, ಕೆ.ಪಿ ಜಗದೀಶ್ ಅಧಿಕಾರಿ, ಕೆ.ಆರ್ ಪಂಡಿತ್, ಕೃಷ್ಣರಾಜ ಹೆಗ್ಡೆ, ಮೇಘನಾಥ್ ಶೆಟ್ಟಿ ಉಪಸ್ಥಿತರಿದ್ದರು.