ಬಂಟ್ವಾಳ: ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಮೂವರ ತಂಡವೊಂದು ದಂಪತಿಯ ಮನೆಗೆ ನುಗ್ಗಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮೇರಮಜಲು ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಮೇರಮಜಲು ಗ್ರಾ.ಪಂ.ಸದಸ್ಯಬಡ್ಡೂರು ನಿವಾಸಿ ಯೋಗೀಶ್ ಪ್ರಭು ಹಾಗೂ ಅವರ ಪತ್ನಿ ಶೋಭಾ ಗುಂಪಿನಿಂದ ಹಲ್ಲೆಗೊಳಗಾದಚರಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದ ಗಂಭೀರ ಗಾಯಗೊಂಡಿರುವ ಪ್ರಭು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ವಿವರ: ಶುಕ್ರವಾರ ಬೆಳಗ್ಗೆ 4ರ ಸುಮಾರಿಗೆ ಮನೆಯ ಕಾಲಿಂಗ್‌ಬೆಲ್ ರಿಂಗಣಿಸಿದನ್ನು ಕೇಳಿ ಎದ್ದು ಬಾಗಿಲು ತೆರೆದಾಗ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳ ತಂಡ ಇವರಿಬ್ಬರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ಬೊಬ್ಬೆ ಹೊಡೆದಾಗ ಪರಾರಿಯಾಗಿದೆ.
ಈ ವೇಳೆ ಅವರ ಮನೆಯ ನಾಯಿಯೂ ಬೊಬ್ಬೆ ಹೊಡೆದಿದ್ದು, ಸಮೀಪದ ಮನೆಯವರು ಬಂದು ಪ್ರಭು ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ದುಷ್ಕರ್ಮಿಗಳು ಇವರ ಮನೆಯ ಮತ್ತೊಂದು ಬದಿಯ ಮೂಲಕ ಓಡಿದ್ದು, ಬಿದ್ದಿರುವ ರಕ್ತದ ಕಲೆಯ ಹಿನ್ನೆಲೆ ಘಟನೆಯ ವೇಳೆ ದುಷ್ಕರ್ಮಿಗಳಿಗೂ ಗಾಯವಾಗಿರುವ ಕುರಿತು ಸಂಶಯಿಸಲಾಗಿದೆ.
ಘಟನೆಯ ಕುರಿತು ಶೋಭಾ ಅವರು ಮೇರಮಜಲು ನಿವಾಸಿ ಪ್ರಸಾದ್ ಬೆಳ್ಚಡ ಹಾಗೂ ಆತನ ಸಹಚರರ ವಿರುದ್ಧ ದೂರು ನೀಡಿದ್ದು, ಈ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿ ಆತನ ಹೆಸರನ್ನು ತನ್ನ ಗಂಡ ಹೇಳಿದ್ದಾರೆ ಎಂದು ಗಂಡನ ವಿರುದ್ಧ ದ್ವೇಷಕಟ್ಟಿ ಈ ಹಿಂದೆಯೂ ಹಲ್ಲೆ ನಡೆಸಿದ್ದ. ಹೀಗಾಗಿ ಆತನೇ ಈ ಕೃತ್ಯ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮೀಪ್ರಸಾದ್ , ಬಂಟ್ವಾಳ ಉಪವಿಭಾಗ ಎಎಸ್‌ಪಿ ಸೈದುಲ್ ಅಡಾವತ್, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಗ್ರಾಮಾಂತರ ಠಾಣಾ ಸಬ್‌ಇನ್ಸ್ಪೆಕ್ಟರ್ ಪ್ರಸನ್ನ ಹಾಗೂ ಸಿಬ್ಬಂದಿ, ವಿಧಿ ವಿಜ್ಞಾನ ಪ್ರಯೋಗಾಲಯದವರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಸ್ಥಳದಲ್ಲಿ ತಲವಾರು, ದೊಣ್ಣೆ ಹಾಗೂ ಚೂರಿ ಪತ್ತೆಯಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರ ಬಂಧನ
ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಾರಿಯಾದ ಪ್ರಕರಣ ಕ್ಕೆ ಸಂಬಂಧಿಸಿದಂತೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ನೇತೃತ್ವದ ಎಸ್.ಐ.ಪ್ರಸನ್ನ ಅವರ ತಂಡ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದೆ.
ಆರೋಪಿಗಳಾದ ಪ್ರಸಾದ್ ಬೆಳ್ಚಾಡ, ಶ್ರೀಪತಿ ಹಾಗೂ ಕಾರ್ತಿಕ್ ಎಂಬವರನ್ನು ಆರೋಪಿಗಳೆಂದು ಹೇಳಲಾಗಿದ್ದು, ಇವರನ್ನು ಕಟೀಲು ಸಮೀಪ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.