ಮೂಡುಬಿದಿರೆ: ಜುಗಾರಿ ಅಡ್ಡೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂಬ ಗುಮಾನಿ ಮೇರೆಗೆ ಛಾಯಾಗ್ರಾಹಕರೋರ್ವರಿಗೆ ಬೆದರಿಕೆಯೊಡ್ಡಿದ ಇಬ್ಬರ ವಿರುದ್ಧ ಮೂಡುಬಿದಿರೆ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.
ಛಾಯಾಗ್ರಾಹಕ ಪ್ರವೀಣ್ ಎಂಬವರು ಇತ್ತೀಚೆಗೆ ಕೆಲಸ ಮುಗಿಸಿ ಸಂಜೆ ಪಡುಮಾರ್ನಾಡಿನ ಅಚ್ಚರಕಟ್ಟೆ ಎಂಬಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ರವಿ ಮತ್ತು ರಾಜೇಶ್ ಎಂಬವರು ಅಡ್ಡಗಟ್ಟಿ ಬೆದರಿಕೆಯೊಡ್ಡಿದ್ದಾರೆನ್ನಲಾಗಿದೆ. ಅದೇ ಹೊತ್ತಿಗೆ ದಾರಿಯಲ್ಲಿ ಯಾರೊ ಬರುವುದನ್ನು ಕಂಡು ಆರೋಪಿಗಳು ಅಲ್ಲಿಂದ ತೆರಳಿದ್ದರು. ನಂತರ ರಾತ್ರಿ ಪ್ರವೀಣ ಅವರ ಮೊಬೈಲ್‍ಗೆ ಕರೆ ಮಾಡಿ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಆರೋಪಿಗಳ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪಡುಮಾರ್ನಾಡಿನ ನಿರ್ಧಿಷ್ಟ ಪ್ರದೇಶವೊಂದರಲ್ಲಿ ಹಲವು ಸಮಯಗಳಿಂದ ಜುಗಾರಿ ಆಟ ನಡೆಯುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ದಾಳಿ ನಡೆಸುವ ಪ್ರಯತ್ನ ಮಾಡಿದ್ದರು ಅದು ಸಫಲವಾಗಿಲ್ಲ. ಜುಗಾರಿ ಬಗ್ಗೆ ಪ್ರವೀಣ ಎಂಬವರು ಪೊಲೀಸರಿಗೆ ಮಾಹಿತಿ ಕೊಟ್ಟಿರಬೇಕೆಂಬ ಅನುಮಾನದ ಮೇರೆಗೆ ಆರೋಪಿಗಳು ಬೆದರಿಕೆ ಒಡ್ಡಿದ್ದರೆನ್ನಲಾಗಿದೆ.